ಕನ್ನಡ ವಾರ್ತೆಗಳು

ಜೀ ಕನ್ನಡ ವಾಹಿನಿಯಲ್ಲಿ ಫೆಬ್ರವರಿ 16ರಿಂದ ಮತ್ತೆರಡು ಹೊಚ್ಚಹೊಸ ಧಾರಾವಾಹಿ ಆರಂಭ

Pinterest LinkedIn Tumblr

Zee_Kannada_Press_1

ವರದಿ / ಚಿತ್ರ : ಸತೀಶ್ ಕಾಪಿಕಾಡ್

ಮಂಗಳೂರು,ಫೆ.10 : ಇತ್ತೀಚಿನ ದಿನಗಳಲ್ಲಿ ಹೊಸ ಅಲೆಯ ಧಾರಾವಾಹಿಗಳನ್ನು ಹೊರತರುತ್ತಿರುವ ಜೀ ಕನ್ನಡ ವಾಹಿನಿಯಲ್ಲಿ ಇದೇ ಫೆಬ್ರವರಿ 16ರಿಂದ, ರಾತ್ರಿ 8 ಗಂಟೆಗೆ, ‘ಮಿಸ್ಟರ್ ಅಂಡ್ ಮಿಸ್ಸಸ್ ರಂಗೇಗೌಡ’ ಹಾಗೂ ರಾತ್ರಿ 8.30ಕ್ಕೆ ‘ಒಂದೂರ್‍ನಲ್ಲಿ ರಾಜರಾಣಿ’ ಎಂಬ ಎರಡು ಹೊಸ ಧಾರಾವಾಹಿಗಳು ಕನ್ನಡ ಕಿರುತೆರೆಯ ದಿಗ್ಗಜ ರವಿ ಆರ್ ಗರಣಿ ಅವರ ನೇತೃತ್ವದಲ್ಲಿ ಹೊರಬರುತ್ತಿದೆ .

ಜೀ ಕನ್ನಡ ವಾಹಿನಿ ರಿಯಾಲಿಟಿ ಲೋಕದಲ್ಲಿ ಹೊಸ ಕ್ರಾಂತಿ ಹುಟ್ಟುಹಾಕಿದ್ದು, ‘ಲೈಫ್ ಸೂಪರ್ ಗುರು’ ಕಾರ್ಯಕ್ರಮದ ನಂತರ, ಎರಡು ಹೊಚ್ಚಹೊಸ ಧಾರಾವಾಹಿಗಳನ್ನು ತರುತ್ತಿದೆ. ಕಾವ್ಯಾಂಜಲಿ, ಕೃಷ್ಣ ರುಕ್ಮಿಣಿ, ಅಮೃತವರ್ಷಿಣಿ, ಅರಗಿಣಿ, ಅವನು ಮತ್ತೆ ಶ್ರಾವಣಿ, ಹೀಗೆ ಒಂದರ ಹಿಂದೊಂದರಂತೆ ಯಶಸ್ವಿ ಧಾರಾವಾಹಿಗಳನ್ನು ನೀಡುತ್ತ ಬಂದಿರುವ ರವಿ ಆರ್ ಗರಣಿ ಅವರು, ಪ್ರತಿ ಸಲದಂತೆ ಈ ಬಾರಿಯೂ ಮುಖ್ಯ ಭೂಮಿಕೆಯಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ನೀಡುತ್ತಿರುವುದು ವಿಶೇಷ ಎಂದು ಮಂಗಳವಾರ ಮಂಗಳೂರಿನ ಹೊಟೇಲ್ ದೀಪಾ ಕಂಫರ್ಟ್ಸ್ ನಲ್ಲಿ ಅಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಜೀ ಕನ್ನಡ ವಾಹಿನಿಯ ಫಿಕ್ಷನ್ ಹೆಡ್ ಸುಧನ್ವ ದೇರಾಜೆ ಅವರು ಮಾಹಿತಿ ನೀಡಿದರು.

Zee_Kannada_Press_6 Zee_Kannada_Press_2 Zee_Kannada_Press_3 Zee_Kannada_Press_4 Zee_Kannada_Press_5

ಮಿಸ್ಟರ್ ಅಂಡ್ ಮಿಸ್ಸಸ್ ರಂಗೇಗೌಡ, ಒಂದು ಅಪ್ಪಟ ಹಳ್ಳಿ ಸೊಗಡಿನ ಕಥೆಯಾಗಿದೆ. ಕಥಾನಾಯಕ ರಂಗೇಗೌಡ, ಅವಿದ್ಯಾವಂತವಾದರೂ, ಊರಿನ ಮುಖ್ಯಸ್ಥ. ನ್ಯಾಯ ಹೇಳುವ ಧೀಮಂತ ವ್ಯಕ್ತಿತ್ವದವನು. ಹಳ್ಳಿಯ ಬಗ್ಗೆ ಹೆಮ್ಮೆ, ಪುಂಡರನ್ನು ಸದೆ ಬಡಿಯಬಲ್ಲ ಶಕ್ತಿವಂತ. ಮಲತಾಯಿಯೇ ತನ್ನ ದೇವರೆಂದು ನಂಬಿರುವ ರಂಗೇಗೌಡ, ಅಮ್ಮ ಹಾಕಿದ ಗೆರೆಯನ್ನು ಎಂದಿಗೂ ದಾಟುವುದಿಲ್ಲ. ರಂಗೇಗೌಡನ ಮಲತಾಯಿ, ಗೋಮುಖ ವ್ಯಾಘ್ರವಾದರೂ, ರಂಗೇಗೌಡನನ್ನು ತನ್ನ ಮಮತೆಯ ಮಡಿಲಲ್ಲಿ ಬಂಧಿಸಿಟ್ಟಿದ್ದಾಳೆ. ಕಥಾನಾಯಕಿ ಐಶ್ವರ್ಯ, ಬೆಂಗಳೂರಿನ ನಗರದಲ್ಲಿ ಬೆಳೆದಿರುವ ಮಾರ್ಡರ್ನ್ ಹುಡುಗಿ. ಪದವೀಧರಳಾಗಿರುವ ಐಶ್ವರ್ಯ, ತನಗಿಂತಲೂ ಹೆಚ್ಚು ಓದಿರುವ ಹುಡುಗನನ್ನು ಮದುವೆಯಾಗಿ ನಗರ ಜೀವನದಲ್ಲೇ ನೆಲೆಸುವ ಆಶಯ ಹೊಂದಿರುತ್ತಾಳೆ. ಇವರಿಬ್ಬರಿಗೂ ಒಂದು ವಿಶೇಷ ಸಂದರ್ಭದಲ್ಲಿ ಪರಿಚಯವಾಗಿ, ಮದುವೆಯಾಗುತ್ತದೆ. ಸಿಟಿ ಹುಡುಗಿ ಐಶ್ವರ್ಯ ಹಳ್ಳಿ ಜೀವನಕ್ಕೆ ಒಗ್ಗಿಕೊಳ್ಳುವಳೆ? ರಂಗೇಗೌಡನ ಮಲತಾಯಿಯ ದುರುದ್ದೇಶವನ್ನು ಗಂಡನಿಗೆ ಅರ್ಥ ಮಾಡಿಸುವಳೆ ಎಂಬುದು ಕಥೆಯ ಮೂಲ ಎಳೆ ಎಂದು ಕನ್ನಡ ಕಿರುತೆರೆ ಧಾರವಾಹಿಯ ಖ್ಯಾತ ನಿರ್ದೇಶಕ ರವಿ ಆರ್ ಗರಣಿ ಅವರು ಧಾರಾವಾಹಿಗಳ ಬಗ್ಗೆ ವಿವರ ನೀಡಿದರು.

Zee_Kannada_Press_6 Zee_Kannada_Press_7 Zee_Kannada_Press_8 Zee_Kannada_Press_9 Zee_Kannada_Press_10 Zee_Kannada_Press_11 Zee_Kannada_Press_12 Zee_Kannada_Press_13 Zee_Kannada_Press_14 Zee_Kannada_Press_15Zee_Kannada_Press_16 Zee_Kannada_Press_17 Zee_Kannada_Press_18 Zee_Kannada_Press_19 Zee_Kannada_Press_20 Zee_Kannada_Press_21 Zee_Kannada_Press_22

ಒಂದೂರ್‍ನಲ್ಲಿ ರಾಜ ರಾಣಿ, ಒಂದು ವಿಶಿಷ್ಟ ಕಥೆ. ತಾಯಿ ಬದುಕಿದ್ದರೂ, ತಂದೆ ಅನಿವಾರ್ಯವಾಗಿ ಹೇಳಿದ್ದ ಸುಳ್ಳನ್ನೇ ನಂಬಿ, ಅಪ್ಪನಿಗೆ ಮರು ಮದುವೆ ಮಾಡಿಸಲು ಯತ್ನಿಸುತ್ತಿರೋ, ತುಂಟಾಟದ ಹುಡುಗಿ ಇಶಾರಾಣಿಯ ಕಥೆ ಇದು. ಕಥಾನಾಯಕ ರಾಜ್ ದೇವ್, ಒಬ್ಬ ಶ್ರೀಮಂತ ಮನೆತನದ ಹುಡುಗನಾದರೂ ಸಾದಾಸೀದಾ ಲೋಕಲ್ ಅಭ್ಯಾಸಗಳನ್ನು ಬೆಳೆಸಿಕೊಂಡ ಗೆಳೆಯರ ಗೆಳೆಯ. ರಾಜ, ತನ್ನ ಸ್ವಂತ ತಾಯಿಗಿಂತಲೂ ಸೋದರತ್ತೆ ಗೀತಾಂಜಲಿಯನ್ನೇ ತುಂಬ ಹಚ್ಚಿಕೊಂಡಿರುತ್ತಾನೆ. ಹಲವು ವರ್ಷಗಳ ಹಿಂದೆಯೇ ದೂರವಾಗಿರುವ ಅತ್ತೆಯ ಗಂಡ ಹಾಗೂ ಮಗಳನ್ನು ರಾಜ್ ದೇವ್ ಹುಡುಕುತ್ತಿರುತ್ತಾನೆ. ರಾಜ ರಾಣಿಯ ಹುಡುಕಾಟದಲ್ಲಿ ಅವರಿಬ್ಬರ ಭೇಟಿ ಮುನಿಸಿನಿಂದ ಪ್ರಾರಂಭವಾಗಿ ಜಗಳದಲ್ಲೇ ಮುಂದುವರೆಯುತ್ತದೆ. ರಾಣಿಯ ತಂದೆ ಹಾಗೂ ರಾಜನ ಅತ್ತೆ ಗಂಡ ಹೆಂಡತಿ ಎಂಬ ಸತ್ಯ ಇಬ್ಬರಿಗೂ ತಿಳಿದಾಗ, ಮುಂದೆ ನಡೆಯುವ ಸಂಬಂಧಗಳ ತೊಳಲಾಟ ಕಥೆಯ ಮುಂದುವರೆದ ಭಾಗ ಎಂದು ಅವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಝಿ ಕನ್ನಡ ಮಾರುಕಟ್ಟೆ ವಿಭಾಗದ ಕಿರಣ್, ಸಾಹಿತಿ ಹರ್ಷಪ್ರಿಯ, ‘ಒಂದೂರ್‍ನಲ್ಲಿ ರಾಜರಾಣಿ’ ಧಾರವಾಹಿಯ ನಾಯಕ ನಟ ಅಭಿ ಆಳ್ವ ಹಾಗೂ ಜೀ ಸಂಸ್ಥೆಯ ವಿವಿಧ ವಿಭಾಗಳ ಪ್ರಮುಖರಾದ ರಾಕೇಶ್, ಪ್ರದೀಪ್ ಮತ್ತಿತ್ತರರು ಉಪಸ್ಥಿತರಿದ್ದರು.

Write A Comment