ಕನ್ನಡ ವಾರ್ತೆಗಳು

ತಿರುಪತಿ ಬಾಲಾಜಿ ದರ್ಶನ: ಭಕ್ತಾದಿಗಳಿಗೆ ಕಾಶೀಮಠದ ಕೊಡುಗೆ

Pinterest LinkedIn Tumblr

turupathi_news_photo_1

ತಿರುಪತಿ,ಫೆ.10  : ಏಳು ಬೆಟ್ಟದ ಒಡೆಯ ವೆಂಕಟರಮಣಸ್ವಾಮಿ ದರ್ಶನ ಪಡೆಯಲು ಹೋಗುವ ಯಾತ್ರಾರ್ಥಿಗಳಿಗೆ ವಸತಿ ಸಮಸ್ಯೆಯ ವಿಚಾರ ಇಂದು ನಿನ್ನೆಯದಲ್ಲ. ಸಹಸ್ರಾರು ವರ್ಷಗಳ ಇತಿಹಾಸವಿರುವ ಧರ್ಮಪೀಠ ಶ್ರೀ ಕಾಶೀಮಠ ಸಂಸ್ಥಾನ ತಿರುಪತಿಯಲ್ಲಿ ಛತ್ರದ ಜೊತೆ ತಮ್ಮ ಶಾಖಾ ಮಠ ತೆರೆಯುವ ಮೂಲಕ, ಭಗವಂತನ ದರ್ಶನ ಪಡೆಯಲು ಬರುವ ಯಾತ್ರಾರ್ಥಿಗಳ ವಸತಿ ಗೃಹದ ಸಮಸ್ಯೆಗೆ ಸ್ಪಂದಿಸಿದೆ.

ಕಾಶೀಮಠ ಸಂಸ್ಥಾನಕ್ಕೆ ಖ್ಯಾತ ಉದ್ಯಮಿ ದಯಾನಂದ್ ಪೈ ಅವರು ತಿರುಪತಿಯಲ್ಲಿ ದಾನವಾಗಿ ನೀಡಿದ ಜಮೀನಿನಲ್ಲಿ ಈ ಶಾಖಾ ಮಠ ತಲೆ ಎತ್ತಿ ನಿಂತಿದೆ. ಇದೇ ಉತ್ತರಾಯಣ, ಚತುರ್ಥಿಯ ದಿನವಾದ ಶನಿವಾರ ಶುಭ ಮೀನ ಲಗ್ನ ಸುಮೂಹರ್ತದಲ್ಲಿ ಪ್ರಾತಃಕಾಲ ಒಂಬತ್ತಕ್ಕೆ ತಿರುಪತಿ ಶ್ರೀ ಕಾಶಿ ಮಠ ಉದ್ಘಾಟನಾ ಉದ್ಘಾಟನೆಗೊಂಡಿದೆ .

ಶ್ರೀದೇವಿ, ಭೂದೇವಿ ಸಹಿತ ಶ್ರೀವೆಂಕಟರಮಣ ದೇವರ ಪ್ರತಿಷ್ಠೆಯೂ ಈ ಸಂದರ್ಭದಲ್ಲಿ ನೆರವೇರಿತು . ಕಾಶೀಮಠದ ಶ್ರೀಮದ್ ಸುಧೀಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಮಾರ್ಗದರ್ಶನ ಮತ್ತು ಆದೇಶಾನುಸಾರ ಶ್ರೀಗಳ ಉತ್ತರಾಧಿಕಾರಿ ಪಟ್ಟಶಿಷ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಗಳು ಶಾಖಾಮಠವನ್ನು ಉದ್ಘಾಟಿಸಿದ್ದಾರೆ . ಈ ಶಾಖಾ ಮಠ ಮತ್ತು ಛತ್ರದ ಕಾಮಗಾರಿಗೆ ತಗಲಿರುವ ಅಂದಾಜು ಸುಮಾರು ನಾಲ್ಕು ಕೋಟಿ.

turupathi_news_photo_2

ಒಟ್ಟು 34 ಕೊಠಡಿಗಳನ್ನು ಹೊಂದಿರುವ ಈ ಛತ್ರದಲ್ಲಿ 9 ಹವಾನಿಯಂತ್ರಿತ ಕೊಠಡಿಗಳೂ ಇವೆ. ಇಸವಿ 2007ರಲ್ಲಿ ಸುಧೀಂದ್ರ ತೀರ್ಥ ಶ್ರೀಗಳು ಶಾಖಾ ಮಠಕ್ಕೆ ಗುದ್ದಲಿಪೂಜೆ ನೆರವೇರಿಸಿದ್ದರು.

ತಿರುಪತಿ ತಿರುಮಲ ದೇವಾಲಯದ ಟ್ರಸ್ಟಿನಿಂದ (ಟಿಟಿಡಿ) ಯಾವುದೇ ಸಹಾಯ ಹಸ್ತ ಚಾಚದೇ ಭಕ್ತ ಸಮುದಾಯದ ದೇಣಿಗೆಯ ಮೂಲಕ ಈ ಶಾಖಾಮಠವನ್ನು ಭಕ್ತರ ಮಡಿಲಿಗೆ ಅರ್ಪಿಸುತ್ತಿದ್ದೇವೆ ಎಂದು ತಿರುಪತಿ ಶಾಖಾಮಠದ ಕಾರ್ಯದರ್ಶಿಗಳಾದ ನಾರಾಯಣ ಶೆಣೈ ತಿಳಿಸಿದ್ದಾರೆ.

ಹಿಂದೂ ಧರ್ಮದ ಆಚರಣೆಯ ವಿಚಾರದಲ್ಲಿ ಮಂಚೂಣಿಯಲ್ಲಿರುವ ಮತ್ತು ದೇಶದ ಮುಖ್ಯ ವಾಹಿನಿಯಲ್ಲಿ ಗಮನಾರ್ಹವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಗೌಡ ಸಾರಸ್ವತ ಬ್ರಾಹ್ಮಣ (GSB) ಸಮುದಾಯದವರು ಛತ್ರದ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಇದೇ ಬರುವ ಏಪ್ರಿಲ್ ತಿಂಗಳ ನಂತರ ಆನ್ ಲೈನ್ ಮೂಲಕ ಛತ್ರದ ಮುಂಗಡ ಬುಕ್ಕಿಂಗ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ ಎಂದು ನಾರಾಯಣ ಶೆಣೈ ಅವರು ತಿಳಿಸಿದ್ದಾರೆ.

ಚಿತ್ರ : ಮಂಜು ನಿರೇಶ್ವಲ್ಯ

Write A Comment