ಕನ್ನಡ ವಾರ್ತೆಗಳು

ಮಂಗಳೂರಿನಲ್ಲಿ `ಸ್ಟ್ರೀಟ್ ಲೈಫ್’ ಛಾಯಾಚಿತ್ರ ಪ್ರದರ್ಶನ

Pinterest LinkedIn Tumblr

sweat_life_photo_1

ಮಂಗಳೂರು,ಫೆ.07 : ರಾಜ್ಯದಲ್ಲಿ ಪ್ರಥಮ ಬಾರಿಗೆ ಎಪಿ‌ಎಲ್ ಕುಟುಂಬಗಳಿಗೂ ಆರೋಗ್ಯ ವಿಮೆ ಜಾರಿಗೆ ತರಲಾಗಿದೆ. ಇದರಲ್ಲಿ ಪತ್ರಕರ್ತರಿಗೂ ಅವಕಾಶ ಕಲ್ಪಿಸಲಿದ್ದು, ಶೀಘ್ರ ಚಾಲನೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು. ನಗರದ ಕಂಕನಾಡಿಯ ಟ್ಯಾಲೆಂಟ್ ಸಭಾಂಗಣದಲ್ಲಿ ಶನಿವಾರ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ಕೋಸ್ಟಲ್ ಡೈಜೆಸ್ಟ್ ಡಾಟ್ ಕಾಮ್, ಎಂಫ್ರೆಂಡ್ಸ್ ಮತ್ತು ಟೀಮ್ ಅಹ್ಲನ್ ವಾಟ್ಸ್ಯಾಪ್ ಗ್ರೂಪ್‌ಗಳ ಸಹಯೋಗದಲ್ಲಿ ಪತ್ರಿಕಾ ಛಾಯಾಚಿತ್ರಗಾರ ಅಹ್ಮದ್ ಅನ್ವರ್ ಅವರ `ಸ್ಟ್ರೀಟ್ ಲೈಫ್‘ ಛಾಯಾಚಿತ್ರಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

sweat_life_photo_2

ಅಹ್ಮದ್ ಅನ್ವರ್ ಅವರ ಅನಾರೋಗ್ಯ ಕಂಡ ನಂತರ ಪತ್ರಕರ್ತರಿಗೂ ಆರೋಗ್ಯ ಭಾಗ್ಯ ಸೌಲಭ್ಯ ವಿಸ್ತರಣೆ ಮಾಡಿದ್ದೇನೆ. ಪಿಂಚಣಿ ಪಡೆದುಕೊಳ್ಳುವ ನಿವೃತ್ತರಿಗೂ ಯೋಜನೆ ಸೌಲಭ್ಯ ಕಲ್ಪಿಸಲಾಗುವುದು. ಅನ್ವರ್ ಅವರ ಛಾಯಾಚಿತ್ರಗಳು ಸಮಾಜದ ಸಮಸ್ಯೆಗಳನ್ನು ಜನಪ್ರತಿನಿಧಿಗಳು, ಅಧಿಕಾರಿಗಳ ಮುಂದಿಟ್ಟು, ಪರಿಹಾರ ಸೂಚಿಸಲು ಮಾರ್ಗದರ್ಶನ ನೀಡುತ್ತಿವೆ. ಅನಾರೋಗ್ಯವನ್ನು ಧೈರ್ಯದಿಂದ ಎದುರಿಸುವ ಸಾಹಸಿ. ಈ ಚಿತ್ರಗಳನ್ನು ತಾನು ಖರೀದಿಸುತ್ತೇನೆ ಎಂದು ಸಚಿವರು ಹೇಳಿದರು.

ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮಾತನಾಡಿ, ಎಲ್ಲರಿಗೂ ಸೂರು ಎಂದರೂ ಬೀದಿ ತುಂಬಾ ಬಡವರು, ಎಲ್ಲರಿಗೂ ಆರೋಗ್ಯ ಎಂದರೂ ರೋಗ ರುಜಿನ, ಸ್ವಚ್ಛ ನಗರ ಎಂದರೂ ಕಸದ ರಾಶಿ, ಶುಚಿ ಆಹಾರ ಎಂದರೂ ನೈರ್ಮಲ್ಯದ ಕೊರತೆ ಇದೆ. ಬದುಕಿನ ಜಂಜಾಟದಲ್ಲಿ ನಮಗೆ ಬೀದಿಯ ಬದುಕು ನೋಡುವ ಆಸಕ್ತಿ, ವ್ಯವಧಾನ ಇಲ್ಲ. ಅದನ್ನು ಸೆರೆಹಿಡಿದು, ಪ್ರದರ್ಶಿಸಿ, ಸುಧಾರಣೆ ಮಾಡಿಸುವ ಪ್ರಯತ್ನ ಅನ್ವರ್ ಮಾಡಿದ್ದಾರೆ ಎಂದರು.

sweat_life_photo_4 sweat_life_photo_3

ಮನುಷ್ಯ ಬದುಕು ಒಮ್ಮೆಯೇ ಸಿಗುತ್ತದೆ. ಅದು ಮೌಲ್ಯಯುತ. ಆರೋಗ್ಯ ಸರಿ ಇಲ್ಲ ಎಂದು ಭಯಪಡುವ ಅಗತ್ಯವಿಲ್ಲ. ಧೈರ್ಯದಿಂದ ಅನಾರೋಗ್ಯ ಎದುರಿಸುತ್ತಾ ಹೋರಾಟ ನಡೆಸುತ್ತಾ ಬದುಕಿದ್ದೇನೆ. ಸಾವಿರಾರು ಚಿತ್ರಗಳ ಪೈಕಿ, ನೂರನ್ನು ಆಯ್ಕೆ ಮಾಡಿ ಪ್ರದರ್ಶನಕ್ಕೆ ಇಟ್ಟಿದ್ದೇನೆ. ವರ್ಣಚಿತ್ರಗಳಲ್ಲಿ ಕೈಚಳಕ ಹೆಚ್ಚಿರುತ್ತದೆ. ಕಪ್ಪು ಬಿಳುಪಿನಲ್ಲಿ ನೈಜತೆ ಹಾಗೂ ಹೆಚ್ಚು ಪರಿಣಾಮ ಕಾಣಬಹುದು ಎಂದು ಅಹ್ಮದ್ ಅನ್ವರ್ ಹೇಳಿದರು.

ವಿಶ್ವಾಸ್ ಬಿಲ್ಡರ್ಸ್ ಆಡಳಿತ ನಿರ್ದೇಶಕ ಅಬ್ದುಲ್ ರವೂಫ್ ಪುತ್ತಿಗೆ ಅಧ್ಯಕ್ಷತೆ ವಹಿಸಿದ್ದರು. ಅನ್ವರ್ ಅವರ ಛಾಯಾಚಿತ್ರಗಳ ಪುಸ್ತಿಕೆಯನ್ನು ಪ್ರೆಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ಆರ್. ಬಿಡುಗಡೆ ಮಾಡಿದರು. ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವ ಶುಭ ಹಾರೈಸಿದರು.  ಇದೇ ಸಂದರ್ಭದಲ್ಲಿ ಅಹ್ಮದ್ ಅನ್ವರ್, ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಪ್ರಥಮ ಮುಸ್ಲಿಂ ಯುವತಿ ಶಬಾನಾ ಅವರನ್ನು ಸನ್ಮಾನಿಸಲಾಯಿತು.

sweat_life_photo_5

ಸೈಫ್ ಸುಲ್ತಾನ್ ಕುರ್‌ಆನ್ ಪಠಿಸಿದರು. ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಲಹೆಗಾರ ರಫೀಕ್ ಮಾಸ್ಟರ್ ಸ್ವಾಗತಿಸಿದರು. ಅಧ್ಯಕ್ಷ ರಿಯಾಝ್ ಕಣ್ಣೂರು ವಂದಿಸಿದರು. ಎಂಫ್ರೆಂಡ್ಸ್ ಅಧ್ಯಕ್ಷ ರಶೀದ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

Write A Comment