ಕನ್ನಡ ವಾರ್ತೆಗಳು

ತೊಗಾಡಿಯಾ ಬೆಂಗಳೂರಿಗೆ ಬರುವಂತಿಲ್ಲ : ಹೈಕೋರ್ಟ್ ಸ್ಪಷ್ಟನೆ

Pinterest LinkedIn Tumblr

prveen_thogadiya_photo

ಬೆಂಗಳೂರು, ಫೆ.6 : ವಿಶ್ವ ಹಿಂದೂ ಪರಿಷತ್‌ನ ಕಾರ್ಯಾಧ್ಯಕ್ಷ ಪ್ರವೀಣ್‌ ತೊಗಾಡಿಯಾ ಅವರು ಬೆಂಗಳೂರು ಪ್ರವೇಶಿಸದಂತೆ ವಿಧಿಸಿರುವ ನಿಷೇಧವನ್ನು ತೆರವುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ನ್ಯಾಯಮೂರ್ತಿ ಎಸ್‌.ಅಬ್ದುಲ್‌ ನಜೀರ್‌ ಅವರ ಪೀಠ ಬೆಂಗಳೂರು ಪೊಲೀಸರ ಆದೇಶಕ್ಕೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ಶುಕ್ರವಾರ ಆದೇಶಿಸಿದೆ.
ಫೆ.8ರಂದು ನಡೆಯುವ ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಳ್ಳದಂತೆ ಪ್ರವೀಣ್‌ ತೊಗಾಡಿಯಾ ಅವರಿಗೆ ಬೆಂಗಳೂರು ಪೊಲೀಸರು ನಿಷೇಧ ಹೇರಿದ್ದರು. ವಿಧಾನಸಭೆಯಲ್ಲಿಯೂ ಈ ಬಗ್ಗೆ ಬಿಸಿ-ಬಿಸಿ ಚರ್ಚೆ ನಡೆದಿತ್ತು. ಬಿಜೆಪಿ ಈ ಕ್ರಮವನ್ನು ಖಂಡಿಸಿದ್ದರೆ, ಸರ್ಕಾರ ಇದನ್ನು ಸಮರ್ಥಿಸಿಕೊಂಡಿತ್ತು.

ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಫೆ.8ರಂದು ಹಿಂದೂ ಸಮಾಜೋತ್ಸವ ನಡೆಯಲಿದೆ. ಇದರಲ್ಲಿ ಪ್ರವೀಣ್‌ ತೊಗಾಡಿಯಾ ಅವರು ಪಾಲ್ಗೊಳ್ಳಬೇಕಿತ್ತು. ಸಮಾಜೋತ್ಸವದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಬಹುದು ಎಂಬ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ಬೆಂಗಳೂರು ಪ್ರವೇಶಿಸಿದಂತೆ ತೊಗಾಡಿಯಾ ಅವರಿಗೆ ನಿಷೇಧ ವಿಧಿಸಲಾಗಿತ್ತು

ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರ ಆದೇಶದಂತೆ ಫೆ.5ರಿಂದ 10ರ ವರೆಗೆ ಪ್ರವೀಣ್‌ ತೊಗಾಡಿಯಾ ಅವರು ಬೆಂಗಳೂರು ನಗರಕ್ಕೆ ಪ್ರವೇಶಿಸುವಂತಿರಲಿಲ್ಲ. ಈ ಆದೇಶಕ್ಕೆ ತಡೆ ನೀಡುವಂತೆ ಪ್ರವೀಣ್ ತೊಗಾಡಿಯಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಶುಕ್ರವಾರ ಹೈಕೋರ್ಟ್ ಪೊಲೀಸರ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ.

ಪ್ರವೀಣ್ ತೊಗಾಡಿಯಾ ಅವರ ಪರವಾಗಿ ವಾದ ಮಂಡಿಸಿದ್ದ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರು, ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಸಂವಿಧಾನದ ಮೂಲಭೂತ ಹಕ್ಕಾಗಿದ್ದು ಅದನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ನಿಷೇಧವನ್ನು ತೆರವುಗೊಳಿಸಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿದ್ದರು.

ಗೃಹ ಸಚಿವ ಕೆಜೆ ಜಾರ್ಜ್ ಅವರು ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿದ್ದು, ಅದನ್ನು ಕೆಡಿಸಲು ತೊಗಾಡಿಯಾ ಅವರನ್ನು ಕರೆಸುತ್ತಿದ್ದೀರಿ ಎಂದು ಬಿಜೆಪಿ ವಿರುದ್ಧ ಆರೋಪಿಸಿದ್ದರು. ಪುತ್ತೂರಿನಲ್ಲಿ ತೊಗಾಡಿಯಾ ಸಭೆ ಮುಗಿದ ಬಳಿಕ ಕೋಮುಗಲಭೆ ಉಂಟಾಗಿದೆ. ತೊಗಾಡಿಯಾ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿವೆ. ಆದ್ದರಿಂದ ಅವರು ನಗರ ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

Write A Comment