ಕನ್ನಡ ವಾರ್ತೆಗಳು

ಮಂಗಳೂರಿನ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ :ಡಾ.ಎಸ್.ಡಿ.ಶರಣಪ್ಪ

Pinterest LinkedIn Tumblr

SP_D_Sharanappa_a

ಮಂಗಳೂರು, ಫೆ.5 : ಕರ್ನಾಟಕದ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಆದರೆ, ರಾಜ್ಯದ ಅತ್ಯಂತ ಸೂಕ್ಷ್ಮವಾದ ಜಿಲ್ಲೆ ಎಂದು ಗುರುತಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಅತ್ಯಂತ ಕನಿಷ್ಠ ಪೊಲೀಸ್ ಸಿಬ್ಬಂದಿ ಇದ್ದಾರೆ. ಒಂದು ಲಕ್ಷ ಜನಸಂಖ್ಯೆಗೆ ಸರಾಸರಿ 250 ಮಂದಿ ಪೊಲೀಸ್ ಸಿಬ್ಬಂದಿ ಇರಬೇಕೆಂಬ ನಿಯಮ ಇದೆ. ಆದರೆ, ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಯಾವತ್ತೂ ನಿಯಮಗಳ ಪ್ರಕಾರ ಸಿಬ್ಬಂದಿ ನೇಮಕವಾದ ಉದಾಹರಣೆ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ ನಿಯಮ ಮತ್ತು ವಾಸ್ತವದಲ್ಲಿರುವ ಸಿಬ್ಬಂದಿ ಸಂಖ್ಯೆಗೆ ಬಹಳ ವ್ಯತ್ಯಾಸವಿದೆ.

ದಕ್ಷಿಣ ಕನ್ನಡ ರಾಜ್ಯದಲ್ಲಿ ಅತ್ಯಂತ ಕೋಮು ಸೂಕ್ಷ್ಮ ಪ್ರದೇಶ ಎಂಬ ಕುಖ್ಯಾತಿ ಪಡೆದಿದೆ. ಒಂದಲ್ಲ ಒಂದು ಕಾರಣದಿಂದ ಹಲವು ಕಡೆಗಳಲ್ಲಿ ಘರ್ಷಣೆಗಳು, ಸಣ್ಣ ಮಟ್ಟಿನ ಕೋಮು ಗಲಭೆಗಳು ನಡೆಯುತ್ತಿರುತ್ತವೆ. ಇಂತಹ ಸಂದರ್ಭದಲ್ಲಿ ಇಡೀ ಜಿಲ್ಲೆಯ ಪೊಲೀಸ್ ಸಿಬ್ಬಂದಿಯನ್ನು ಘಟನೆ ನಡೆದ ಸ್ಥಳಕ್ಕೆ ನಿಯೋಜಿಸಿದರೆ, ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಉಂಟಾಗುತ್ತದೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ಸುಮಾರು 10 ಲಕ್ಷಕ್ಕಿಂತಲೂ ಅಧಿಕ ಜನಸಂಖ್ಯೆ ಇದೆ. ಆದರೆ, ಇಲಾಖೆಯಲ್ಲಿರುವ ಸಿಬ್ಬಂದಿ ಕೇವಲ 577. ಅವರಲ್ಲೂ 77 ಮಂದಿ ರಜೆಯಲ್ಲಿದ್ದು, ಪ್ರತಿನಿತ್ಯ ಕರ್ತವ್ಯಕ್ಕೆ ದೊರೆಯುವುದು ಕೇವಲ 500 ಮಂದಿ.

ಕೆಲವು ದಿನಗಳ ಹಿಂದೆ ಪುತ್ತೂರು ಹಾಗೂ ಬೆಳ್ತಂಗಡಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಅಹಿತಕರ ಘಟನೆಗಳು ನಡೆದು ಒಂದು ವಾರಗಳ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಜಿಲ್ಲೆಯ ಬಹುತೇಕ ಎಲ್ಲ ಪೊಲೀಸ್ ಠಾಣೆಗಳ ಸಿಬ್ಬಂದಿಯನ್ನು ಅಲ್ಲಿ ನಿಯೋಜಿಸಲಾಗಿತ್ತು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಇದೆ. ಇಲ್ಲೂ ಸಹ ಸಿಬ್ಬಂದಿ ಕೊರತೆ ಇದೆ. ಒಟ್ಟು 222 ಮಂದಿ ಸಿಬ್ಬಂದಿಗಳು ಮಂಜೂರಾಗಿದ್ದು, ಕೇವಲ 150ರಷ್ಟು ಸಿಬ್ಬಂದಿ ಇದ್ದಾರೆ. ದಕ್ಷಿಣ ಕನ್ನಡ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವ ವಿಷಯವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ.

ಅಗತ್ಯ ಸಿಬ್ಬಂದಿ ನೇಮಕ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಶೀಘ್ರದಲ್ಲಿ ಸರ್ಕಾರ ನಮ್ಮ ಪ್ರಸ್ತಾವನೆಗೆ ಅನುಮೋದನೆ ನೀಡುವ ವಿಶ್ವಾಸ ಇದೆ. ಶೀಘ್ರದಲ್ಲಿಯೇ ಜಿಲ್ಲೆಗೆ 323 ಸಿಬ್ಬಂದಿಗಳ ನೇಮಕವಾಗುವ ಸಾಧ್ಯತೆ ಇದೆ ಎಂದು ದಕ್ಷಿಣ ಕನ್ನಡ ಜ್ಲಿಲಾ ಪೊಲೀಸ್ ಅಧೀಕ್ಷಕ ಡಾ.ಎಸ್.ಡಿ.ಶರಣಪ್ಪ ಹೇಳಿದ್ದಾರೆ.

Write A Comment