ಕನ್ನಡ ವಾರ್ತೆಗಳು

ಆರ್ಯರ ಭಾರತ ದಾಳಿಯ ಕುರಿತಾಗಿ ವೈಜ್ಞಾನಿಕ ಪುರಾವೆಗಳಿಲ್ಲ: ಮರಿಯಾನ್ ಕೆಪ್ಪೆನ್ಸ್ .

Pinterest LinkedIn Tumblr

alvas_news_photo_1a

ಮೂಡುಬಿದಿರೆ,ಫೆ. 04 : “ಭಾರತದ ಇತಿಹಾಸವನ್ನು ಗಮನಿಸಿದಾಗ ಆರ್ಯರು ಮಧ್ಯಪ್ರಾಚ್ಯದವರೆಂದು ಹಾಗೂ ಭಾರತದ ಮೇಲೆ ಆಕ್ರಮಣ ಮಾಡಿದವರೆಂದು ಗುರುತಿಸಲಾಗುತ್ತದೆ. ಆದರೆ ಈ ವಿಷಯವಾಗಿ ಸಂಶೋಧನೆ ಮಾಡಿದಾಗ ಇಂತಹ ಆಕ್ರಮಣಗಳು ನಡೆದಿಲ್ಲವೆಂಬುದು ಸಾಬೀತಾಗುತ್ತದೆ. ಹಾಗೆಯೇ ಆರ್ಯರು ಹಾಗೂ ದ್ರಾವಿಡರೆಂಬ ಜನಾಂಗಗಳಿದ್ದವೆಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ” ಎಂದು ಇಂಡಿಯಾ ಪ್ಲಾಟ್‌ಫಾರ್ಮ್‌ನ ಬೆಲ್ಜಿಯಂ ಮೂಲದ ಸಂಶೋಧಕಿ ಮರಿಯಾನ್ ಕೆಪ್ಪೆನ್ಸ್ ಹೇಳಿದರು.

ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಲಾದ `ಭಾರತೀಯ ಇತಿಹಾಸ ಹಾಗೂ ಭಾರತದ ಮೇಲೆ ಆರ್ಯರ ದಾಳಿ’ ವಿಷಯದ ಕುರಿತು ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. `ಸಾಮಾನ್ಯವಾಗಿ ಆರ್ಯರು ಭಾರತೀಯ ಮೂಲದವರಲ್ಲವೆಂಬ ವಾದ ನಮ್ಮಲ್ಲಿದೆ. ಆದರೆ ಸಂಶೋಧನೆಯ ಹಿಂದೆ ಸಾಗಿದಾಗ ಇದಕ್ಕೆ ಯಾವುದೇ ಖಚಿತ ಪುರಾವೆ ಸಿಗುವುದಿಲ್ಲ. ಅಲ್ಲದೇ ಆರ್ಯರ ಭಾರತ ದಾಳಿಯ ವಾದವು ಮೌಲ್ಯಭರಿತವಾದ ಭಾರತ ದೇಶವನ್ನು ತಪ್ಪಾಗಿ ಪ್ರತಿಬಿಂಬಿಸುತ್ತದೆ. ‘ ಎಂದು ಹೇಳಿದರು.

alvas_news_photo_2

ಇತಿಹಾಸ ಹೇಳುವುದೇನು?
ನಮ್ಮ ಪಠ್ಯ ಪುಸ್ತಕಗಳಲ್ಲಿರುವ ಇತಿಹಾಸದ ಪ್ರಕಾರ ಆರ್ಯರು ಭಾರತದವರಲ್ಲವೆಂಬ ವಾದವಿದೆ. ಆರ್ಯರ ಜೊತೆಗೆ ಬೆಳೆದು ಬಂದ ಹಿಂದೂ ಧರ್ಮವು ಜಾತಿ ಪದ್ಧತಿಯನ್ನು ಆಚರಿಸುವುದರ ಮೂಲಕ ಮಾನವ ಸಹಜ ಮೌಲ್ಯಗಳನ್ನು ಬದಿಗೆ ಸರಿಸಿದೆ ಎಂಬ ಕಲ್ಪನೆಯಿದೆ. ವೇದಗಳಿಂದ ಜನ್ಮ ಪಡೆದ ಹಿಂದೂ ಧರ್ಮ ತನ್ನ ವರ್ಣಾಶ್ರಮ ಪದ್ಧತಿಯಿಂದ ಜಾತಿ ಕಲ್ಪನೆಯನ್ನು ಹುಟ್ಟು ಹಾಕಿದೆ; ತನ್ಮೂಲಕ ಸಾಮಾಜಿಕ ಅಸಮತೋಲನಗಳಿಗೆ ಕಾರಣವಾಗಿದೆ ಎಂದೂ ಹೇಳಲಾಗುತ್ತದೆ.

ಆದರೆ ಇಂತಹ ವಾದಗಳಿಗೆ ಯಾವುದೇ ಖಚಿತ ಪುರಾವೆಗಳಿಲ್ಲ. ಇವು ಹಿಂದೂ ಧರ್ಮ ಹಾಗೂ ಬ್ರಾಹ್ಮಣತ್ವದ ಬಗ್ಗೆ ತಪ್ಪು ಕಲ್ಪನೆಗಳನ್ನು ನೀಡಲಷ್ಟೇ ಸಮರ್ಥವಾದವು. ಇಂತಹ ಸಮರ್ಥನೆಗಳನ್ನು ಇಟ್ಟುಕೊಂಡು ಇಂದು ಶಾಸನಸಭೆಗಳಲ್ಲಿ ಜಾತಿ ಪದ್ಧತಿಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಭಾರತದ ಸರ್ಕಾರಗಳು ಈ ತಪ್ಪು ಸಮರ್ಥನೆಗಳನ್ನು ಸರಿಯಾಗಿ ಗುರುತಿಸದೆಯೇ ಜಾತಿ ಸಮಸ್ಯೆಗಳಿಗೆ ಪರಿಹಾರ ಹುಡುಕಲೆತ್ನಿಸುತ್ತಿವೆ. ಮೊದಲು ಇತಿಹಾಸದ ಲೋಪಗಳನ್ನು ಗುರುತಿಸುವುದರೊಂದಿಗೆ, ಸಂಶೋಧನೆಯಾಧಾರದ ಮೇಲೆ ಕೆಲಸ ಮಾಡಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಭಾರತದ ಇತಿಹಾಸ ಹಾಗೂ ಆರ್ಯರ ಬಗ್ಗೆ ಅಧ್ಯಯನ ನಡೆಸಿದಾಗ ತಿಳಿಯುವುದೆಂದರೆ ನಮ್ಮಲ್ಲಿರುವ ವಾದಗಳಿಗೆ ಯಾವುದೇ ಐತಿಹಾಸಿಕ, ವೈಜ್ಞಾನಿಕ, ಭಾಷೆ ಹಾಗೂ ಪ್ರಾಚ್ಯ ವಿಷಯಗಳಿಗೆ ಸಂಬಂಧಿಸಿದಂತೆ ಯಾವುದೇ ಖಚಿತ ಸಾಕ್ಷಿ ಇಲ್ಲದಿರುವುದು. ಅಲ್ಲದೇ, ಆರ್ಯರು ಹಾಗೂ ದ್ರಾವಿಡರು ಎಂಬ ವರ್ಗೀಕರಣವಿತ್ತೆಂಬುದಕ್ಕೂ ಯಾವುದೇ ದಾಖಲೆಯಿಲ್ಲ.

alvas_news_photo_3a

ಆದರೆ ಭಾರತದಲ್ಲಿದ್ದ ವರ್ಣವ್ಯವಸ್ಥೆಯಂತೆಯೇ ಪ್ರಾಚೀನ ಯುರೋಪಿನಲ್ಲಿ ಕೂಡ ಇದೇ ತೆರನಾದ ಸಾಮಾಜಿಕ ವರ್ಗೀಕರಣವಿತ್ತೆಂಬುದು ಅಧ್ಯಯನಗಳಿಂದ ತಿಳಿದು ಬರುತ್ತದೆ. ಭಾರತದ ಮೇಲೆ ಆರ್ಯರ ದಾಳಿಯಾಯಿತೋ ಇಲ್ಲವೋ ಎಂಬುದು ಆ ಕಾಲದ ಜನರ ಅನುಭವಗಳ ಮೇಲೆ ನಿರ್ಧರಿತವಾಗುತ್ತದೆ. ಅವರು ಅಂದಿನ ಸಂಸ್ಕೃತಿಯನ್ನು ಹೇಗೆ ಸ್ವೀಕರಿಸಿದರು, ಆಚರಿಸಿದರು ಎಂಬುದರ ಮೇಲೆ ಅವಲಂಬಿತ ವಾಗುತ್ತದೆ. ಆ ಅನುಭವಗಳ ಬಗ್ಗೆ ಬೇರೆಯವರಿಗೆ ತಿಳಿಯಲು ಸಾಧ್ಯವಿಲ್ಲ. ಇದು ಇತಿಹಾಸ ನಮ್ಮ ಮುಂದಿಡಬಹುದಾದ ಬಹುದೊಡ್ಡ ಸವಾಲು ಎಂದು ಕೆಪ್ಪೆನ್ಸ್ ಹೇಳಿದರು.

ಸಂವೇದನೆ ಹೆಚ್ಚಿಸಿದ ಸಂವಾದ ಕಾಯಕ್ರಮ: ಬೆಲ್ಜಿಯಂನ ಸಂಶೋಧಕಿ ಮರಿಯಾನ್ ಕೆಪ್ಪೆನ್ಸ್ ಭಾರತೀಯ ಇತಿಹಾಸದ ಸಂಶೋಧಕಿಯಾಗಿದ್ದು, ಭಾರತದಲ್ಲಿ ಅತಿ ಚರ್ಚಿತ ವಿಷಯವಾದ ಆರ್ಯರ ಮೂಲದ ಬಗ್ಗೆ ಸಂವಾದ ನಡೆಸಿದ್ದು ವಿಶೇಷವಾಗಿತ್ತು. ಸಂವಾದದಲ್ಲಿ ಸಂಶೋಧನೆಯ ವಿವಿಧ ಹರವುಗಳು,ಭಾರತೀಯ ಸಾಮಾಜಿಕ ವ್ಯವಸ್ಥೆ, ಸಮಾಜದಲ್ಲಿ ಧನಲಾಭಗಳ ಹಿಡಿತ ಹಾಗೂ ಭಾರತೀಯ ವರ್ಣವ್ಯವಸ್ಥೆ ಹಾಗೂ ಜಾತಿ ಪದ್ಧತಿಯ ಕುರಿತಾಗಿ ಪ್ರಶ್ನೆಗಳು ಹಾಗೂ ಅಭಿಪ್ರಾಯಗಳು ಮೂಡಿ ಬಂದವು. ಸಂವಾದ ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟೀ ವಿವೇಕ್ ಆಳ್ವ, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್, ಉಪನ್ಯಾಸಕರು, ಸಮಾಜ ವಿಜ್ಞಾನ, ಸಮಾಜ ಸೇವೆ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಭಾರತೀಯ ಇತಿಹಾಸದ ಕುರಿತಾಗಿ ನಡೆಸಿದ ಈಸಂವಾದ ಕಾರ್ಯಕ್ರಮ ನೆರೆದವರ ಜ್ಞಾನವನ್ನು ಇಮ್ಮಡಿಗೊಳಿಸಿತಲ್ಲದೇ, ಭಾರತದ ಕುರಿತಾಗಿ ವಿದ್ಯಾರ್ಥಿಗಳ ಸಂವೇದನೆಯನ್ನು ಹೆಚ್ಚಿಸಿತು.

Write A Comment