ಕನ್ನಡ ವಾರ್ತೆಗಳು

ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹುದ್ದೆಯಿಂದ ಹೇಮನಾಥ ಶೆಟ್ಟಿ ಪದಚ್ಯುತಿ : ನೂತನ ಅಧ್ಯಕ್ಷರಾಗಿ ಫಝುಲ್ ರಹೀಂ ನೇಮಕ

Pinterest LinkedIn Tumblr

hemanth_puttur_bhp

ಪುತ್ತೂರು : ಭಾರತೀಯ ಹಿಂದೂ ಪರಿಷತ್ ಸ್ಥಾಪಿಸಿ ಇತ್ತೀಚೆಗೆ ಗಮನ ಸೆಳೆದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಲಾಗಿದೆ. ನೂತನ ಬ್ಲಾಕ್ ಅಧ್ಯಕ್ಷರಾಗಿ ಫಝುಲ್ ರಹೀಂ ಅವರನ್ನು ಮರುನೇಮಕ ಮಾಡಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರು ಈ ಆದೇಶವನ್ನು ನೀಡಿದ್ದಾರೆ. ಪರಮೇಶ್ವರ್ ಅವರ ಆದೇಶ ಜ.26 ರಂದೇ ಸಹಿ ಹಾಕಲ್ಪಟ್ಟು ಶನಿವಾರ ಬೆಂಗಳೂರಿನಲ್ಲಿ ಶಾಸಕಿ ಶಕುಂತಳಾ ಶೆಟ್ಟಿ ಅವರು ಆದೇಶವನ್ನು ಪಡೆದುಕೊಂಡಿದ್ದು ಫಝುಲ್ ರಹೀಂ ಅವರಿಗೆ ಹಸ್ತಾಂತರಿಸಿದ್ದಾರೆ. ಇದರೊಂದಿಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್‌ನಲ್ಲಿ ಹೊಸ ಸಂಚಲನ ಉಂಟಾಗಿದೆ.

ಹೇಮನಾಥ ಶೆಟ್ಟಿ ಅವರನ್ನು ಅಧ್ಯಕ್ಷ ಗಾದಿಯಿಂದ ಹೊರಗೆ ಹಾಕಿರುವ ಕುರಿತು ಕೆಪಿಸಿಸಿ ಯಾವುದೇ ವಿವರಣೆ ನೀಡಿಲ್ಲ.ಆದರೆ ಇತ್ತೀಚೆಗೆ ಹೇಮನಾಥ ಶೆಟ್ಟಿ ಅವರು ಭಾರತೀಯ ಹಿಂದೂ ಪರಿಷತ್ ಎಂಬ ಹಿಂದೂ ಸಂಘಟನೆಯನ್ನು ಸ್ಥಾಪಿಸಿದ್ದೇ ಅವರ ಸ್ಥಾನಕ್ಕೆ ಮುಳುವಾಗಿದೆ ಎಂದು ಹೇಳಲಾಗಿದೆ.

ಹೇಮನಾಥ ಶೆಟ್ಟಿ ಅವರು ಕಳೆದ ಎಂಟು ವರ್ಷಗಳಿಂದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಎರಡೆರಡು ಬಾರಿ ಅವರು ಶಾಸಕ ಸ್ಥಾನಕ್ಕೆ ಸರ್ಧಿಸಲು ಟಿಕೆಟ್ ಆಕಾಂಕ್ಷಿಯಾಗಿದ್ದರು.ಆದರೆ ಅವರಿಗೆ ಟಿಕೆಟ್ ಕೊನೆ ಗಳಿಗೆಯಲ್ಲಿ ಕೈ ತಪ್ಪಿತ್ತು. ಇತ್ತೀಚೆಗಿನ ತಿಂಗಳುಗಳಲ್ಲಿ ಶಾಸಕಿ ಶಕುಂತಳಾ ಶೆಟ್ಟಿ ಅವರ ಜೊತೆಗೂ ಹೇಮನಾಥ ಶೆಟ್ಟಿ ಬಣದ ಸಂಬಂಧ ಕಡಿದುಹೋಗಿದೆ.ಹೀಗಾಗಿ ಶಕುಂತಳಾ ಶೆಟ್ಟಿ ಅವರ ಕಾರ್ಯಕ್ರಮದಲ್ಲಿ ಹೇಮನಾಥ ಶೆಟ್ಟಿ ಬಣ ಸದಾ ಗೈರುಹಾಜರಾಗುತ್ತಿತ್ತು.

ಪಕ್ಷದ ಅಧ್ಯಕ್ಷ ಸ್ಥಾನದಿಂದ ತನ್ನನ್ನು ಪದಚ್ಯುತಗೊಳಿಸಿದ ಬಗ್ಗೆ ಹೇಮನಾಥ ಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತನ್ನ ಪದಚ್ಯುತಿಗೆ ಜನಾರ್ದನ ಪೂಜಾರಿ ಹಾಗೂ ಶಕುಂತಳಾ ಶೆಟ್ಟಿ ಕಾರಣ ಎಂದು ಅವರು ಆರೋಪಿಸಿದ್ದಾರೆ.

Write A Comment