ಕನ್ನಡ ವಾರ್ತೆಗಳು

ಬೆಸೆಂಟ್ ಸಂದ್ಯಾ ಕಾಲೇಜಿನಲ್ಲಿ ರಕ್ತದಾನ ಶಿಬಿರ.

Pinterest LinkedIn Tumblr

besent_blood_donate

ಮಂಗಳೂರು,ಜ.31: ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ಇತ್ತೀಚೆಗೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಹಳೇ ವಿದ್ಯಾರ್ಥಿ ಸಂಘ ಮತ್ತು ವಿದ್ಯಾರ್ಥಿ ಸಂಘ ಹಾಗೂ ಕಸ್ತೂರ್ ಬಾ ಮೆಡಿಕಲ್ ಕಾಲೇಜು ವತಿಯಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ನಗರದ ಪ್ರತಿಷ್ಠಿತ ವಕೀಲರು, ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಪಟುಗಳು ಹಾಗೂ ಕಾಲೇಜಿನ ಸಂಚಾಲಕರೂ ಆದ ಶ್ರೀಯುತ ನಗರ್ ನಾರಾಯಣ ಶೆಣೈ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಉದ್ಘಾಟಿಸಿದರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ತಾನು ತನ್ನ ಯೌವ್ವನದ ದಿನಗಳಲ್ಲಿ ಹಲವಾರು ಬಾರಿ ರಕ್ತದಾನ ಮಾಡಿದ್ದು, ಮತ್ತು ರಕ್ತದಾನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಯ ಪಡಿಸಿದರು.

ಇನ್ನೋರ್ವ ಅತಿಥಿ ಡಾ. ಯಶವಂತ್ ಮಾತನಾಡಿ ರಕ್ತದಾನ ಮಾಡಬೇಕಾದರೆ ಇರಬೇಕಾದ ದೈಹಿಕ ಅರ್ಹತೆಗಳ ಬಗ್ಗೆ, ರಕ್ತದಾನಮಾಡಿದ 24  ಗಂಟೆಗಳ ಒಳಗೆ ನಾವು ಕೊಟ್ಟ ರಕ್ತ ಪುನ: ಉತ್ಪತ್ತಿಯಾಗುವುದು ಮತ್ತು ರಕ್ತದಾನ ಮಾಡಿದ್ದರಿಂದ ನಾಶವಾಗುವ ಎಲ್ಲಾ ಜೀವಕೋಶಗಳು  3  ತಿಂಗಳೊಳಗೆ ಸಹಜ ಸ್ಥಿತಿಗೆ ಬರುತ್ತದೆ ಎಂದು ತಿಳಿಯಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ. ಕಾರ್ಮೆಲೀಟಾ ಗೋವಿಯಸ್ ವಹಿಸಿಕೊಂಡಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನಾವು ನಮ್ಮ ಜೀವನದಲ್ಲಿ ಹೀರೋಗಳಾಗಬೇಕಾದರೆ ಮಂಗಳಯಾನಕ್ಕೆ ಪಯಣ ಬೆಳೆಸಬೇಕಾಗಿಲ್ಲ ಅಥವಾ ಯಾವುದೇ ಚಲನಚಿತ್ರದಲ್ಲಿ ನಟಿಸಬೇಕಿಲ್ಲ ಬರೇ 300 ಮಿ.ಲೀ. ರಕ್ತ ಕೊಟ್ಟು ಒಂದು ಜೀವವನ್ನು ಉಳಿಸಿದಾದಲ್ಲಿ ನೀವೇ ನಿಜವಾದ ಹೀರೋಗಳಾಗಬಲ್ಲಿರಿ ಎಂದು ಕಿವಿ ಮಾತು ಹೇಳಿದರು.

ಹಳೇ ವಿದ್ಯಾರ್ಥಿ ಸಂಘದ ಸಲಹೆಗಾರ ಪ್ರೊ. ಈಶ್ವರ್ ಪೂಜಾರಿಯವರು ಅತಿಥಿಗಳನ್ನು ಸ್ವಾಗತಿಸಿ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಧಿಕಾರಿ ಪ್ರೊ. ವಿಶ್ವನಾಥ್ ಆಚಾರ್ಯ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾಥಿ ಸಂಘದ ಅಧ್ಯಕ್ಷ ಶರತ್ ಎನ್. ರಾವ್. ರಾಷ್ಟ್ರೀಯ ಸೇವಾ ಘಟಕದ ಕಾರ್ಯದರ್ಶಿ ಸುಶಾಂತ್ ಜಾದವ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮವು ಅಂಜಲಿ ಮತ್ತು ವಿನುತ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಈ ಕಾರ್ಯಕ್ರಮವನ್ನು ವಾಣಿಜ್ಯ ಸಂಘದ ಕಾರ್ಯದರ್ಶಿ ಯೋಗೇಶ್ ಶರ್ಮ ನಿರೂಪಿಸಿದರು.

Write A Comment