ಕನ್ನಡ ವಾರ್ತೆಗಳು

ಯುವ ಸಿವಿಲ್ ಎಂಜಿನಿಯರ್ ಮೇಲೆ ದುಷ್ಕರ್ಮಿಗಳಿಂದ ಚೂರಿ ಇರಿತ

Pinterest LinkedIn Tumblr

churi_eritha_photo_1

ಮಂಗಳೂರು, ಜ.31: ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವ ಸಿವಿಲ್ ಎಂಜಿನಿಯರ್ ಓರ್ವರ ಮೇಲೆ ದುಷ್ಕರ್ಮಿಗಳ ತಂಡ ಹಲ್ಲೆ ನಡೆಸಿ ಚೂರಿಯಿಂದ ಇರಿದು ಪರಾರಿಯಾದ ಘಟನೆ ಇಂದು ಬೆಳಗ್ಗೆ 9:30ರ ಸುಮಾರಿಗೆ ಜ್ಯೋತಿ ಸರ್ಕಲ್‌ನಲ್ಲಿ ನಡೆದ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೂಡುಶೆಡ್ಡೆ ನಿವಾಸಿ ಮುಝಮ್ಮಿಲ್ (22) ಎಂಬವರ ಮೇಲೆ ಹಲ್ಲೆ ನಡೆಸಿ ಕೈ ಹಾಗೂ ಹೊಟ್ಟೆಗೆ ಚೂರಿಯಿಂದ ಇರಿಯಲಾಗಿದೆ. ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದ ಪಾಂಡೇಶ್ವರದ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಮುಝಮ್ಮಿಲ್ ಕೆಲಸಕ್ಕೆಂದು ಮೂಡುಶೆಡ್ಡೆಯಿಂದ ಬಸ್‌ನಲ್ಲಿ ಮಂಗಳೂರಿಗೆ ಬರುತ್ತಿರುವಾಗ ಈ ಘಟನೆ ನಡೆದಿದೆ. ಬಸ್ ರಶ್ ಆಗಿದ್ದುದರಿಂದ ಮುಝಮ್ಮಿಲ್ ನಿಂತುಕೊಂಡೆ ಪ್ರಯಾಣಿಸುತ್ತಿದ್ದರು.

churi_eritha_photo_2

ಬಸ್ ಬಲ್ಮಠ ತಲುಪುವಾಗ ದುಷ್ಕರ್ಮಿಗಳು ಅವರ ಮುಖ ಹಾಗೂ ಮೈ ಮೇಲೆ ಕೈ ಇಟ್ಟಿದ್ದರು. ಮುಖದ ಮೇಲಿನಿಂದ ಕೈ ತೆಗೆಯಿರಿ ಎಂದು ಹೇಳಿದ್ದಕ್ಕೆ ಅವಾಚ್ಯವಾಗಿ ನಿಂದಿಸಿದ ದುಷ್ಕರ್ಮಿಗಳು ಬಲ್ಮಠದಿಂದ ಜ್ಯೋತಿ ಸರ್ಕಲ್‌ವರೆಗೂ ಹಲ್ಲೆ ನಡೆಸಿದ್ದಾರೆ. ಬಸ್ ಜ್ಯೋತಿ ಸರ್ಕಲ್‌ನಲ್ಲಿ ನಿಲ್ಲುವಾಗ ಚೂರಿಯಿಂದ ಕೈಗೆ ಮತ್ತು ಹೊಟ್ಟೆಗೆ ಇರಿದು ಪರಾರಿಯಾದರು ಎಂದು ಮುಝಮ್ಮಿಲ್ ಮಾಹಿತಿ ನೀಡಿದ್ದಾರೆ.

ನಿನ್ನೆ ಮುಝಮ್ಮಿಲ್ ಬಸ್‌ನಲ್ಲಿ ಮನೆಗೆ ಹಿಂದಿರಗುತ್ತಿದ್ದಾಗ ಕೆಲವು ಯುವಕರು ತಾನು ಹಾಕಿರುವ ಸುಗಂಧ ದ್ರವ್ಯದ ಬಗ್ಗೆ ಅಸಹ್ಯವಾಗಿ ಮಾತನಾಡಿದ್ದರು. ಹಾಗೂ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ನಿಂದಿಸುತ್ತಿರುವವರತ್ತ ನಾನು ಕೋಪದಿಂದ ನೋಡಿದ್ದೆ. ಇದೇ ಘಟನೆಯ ಕಾರಣದಿಂದ ಹಲ್ಲೆ ನಡೆಸಿರುವ ಸಾಧ್ಯತೆಯೂ ಇದೆ ಎಂದು ಮುಝಮ್ಮಿಲ್ ತಿಳಿಸಿದ್ದಾರೆ.

ಮಸೂದ್ ಭೇಟಿ: ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಝಮ್ಮಿಲ್‌ರನ್ನು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಮುಹಮ್ಮದ್ ಮಸೂದ್ ಮತ್ತು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನ್ೀ ಹಾಜಿ ಮತ್ತಿತರರು ಭೇಟಿಯಾಗಿ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಮುಹಮ್ಮದ್ ಮಸೂದ್ ದ.ಕ. ಜಿಲ್ಲೆಯಲ್ಲಿ ಕೋಮು ಸಂಘರ್ಷ ಸೃಷ್ಟಿಸುವ ದುರುದ್ದೇಶದಿಂದ ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆಸಿ ಪ್ರಚೋದಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಪೊಲೀಸರು ದುಷ್ಕರ್ಮಿಗಳನ್ನು ಹಿಡಿದು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Write A Comment