ಕುಂದಾಪುರ: ಗ್ರಾಮ ಪಂಚಾಯಿತಿ ಕಟ್ಟಕಡೆಯ ವ್ಯವಸ್ಥೆ. ಸ್ಥಳೀಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯವಸ್ಥೆಯಿದ್ದರೆ ಅದು ಗ್ರಾಮ ಪಂಚಾಯಿತಿ. ಗ್ರಾಮೀಣ ಸಂಸತ್ತಾಗಿ ಕಾರ್ಯನಿರ್ವಹಿಸುವ ಗ್ರಾಮ ಪಂಚಾಯಿತಿಗೆ ಅಧಿಕಾರ ವಿಕೇಂದ್ರೀಕರಣ ದೃಷ್ಟಿಯಲ್ಲಿ ಸಾಕಷ್ಟು ಒತ್ತು ಕೊಡಬೇಕಾಗಿದೆ. ಸಂಪನ್ಮೂಲ ಕ್ರೂಢೀಕರಣದ ಸಮಸ್ಯೆಗಳು ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಬಹಳಷ್ಟಿದೆ. ಪಮಚಾಯಿ ಬೇಡಿಕೆಗಳಿಗೆ ಜನಪ್ರತಿನಿಧಿಗಳು ಸಪಂದಿಸಿದಲ್ಲಿ ಜನರಿಗೆ ವಿಶ್ವಾಸ ಬರಲು ಸಾಧ್ಯವಿದೆ. ಗ್ರಾಮಸಭೆಗಳಿಗೆ ಅಧಿಕಾರಿಗಳು ಹಾಜರಾದಾಗ ಅದಕ್ಕೆ ಅರ್ಥ ಬರುತ್ತದೆ. ಗ್ರಾಮ ಸಭೆಯ ನಿರ್ಣಯಗಳು ಯಥಾವತ್ತು ಅನುಷ್ಟಾನವಾದಾಗ ಗ್ರಾಮಸಭೆಗೆ, ಪಂಚಾಯಿತಿಗೆ ಹೆಚ್ಚು ಅಭಿವೃದ್ದಿಯಾಗಲು ಮತ್ತು ಹೆಚ್ಚು ಅರ್ಥ ಬರಲು ಸಾಧ್ಯ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಉಡುಪಿ ಜಿಲ್ಲಾ ಪಂಚಾಯಿತಿ, ಕುಂದಾಪುರ ತಾಲೂಕು ಪಂಚಾಯಿತಿ, ಕೋಣಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಕೋಣಿ ಗ್ರಾಮ ಪಂಚಾಯಿತಿಯ ಕಟ್ಟಡ ಸುವರ್ಣ ಸೌಧ ಮತ್ತು ಸಭಾಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಸುವರ್ಣ ಸೌಧ ಉದ್ಘಾಟಿಸಿ ಮಾತನಾಡಿದರು.
ಗ್ರಾಮಸ್ಥರು ತಮ್ಮ ಕೆಲಸಗಳಿಗಾಗಿ ಕಚೇರಿ ಕಚೇರಿಗಳಿಗೆ ಅಲೆಯುವುದು ತಪ್ಪಬೇಕು. ಆ ನಿಟ್ಟಿನಲ್ಲಿ ಪಂಚಾಯಿತಿ ಸಶಕ್ತೀಕರಣಗೊಳಿಸಲು ಪ್ರಯತ್ನಿಸಲಾಗುತ್ತದೆ. ನಂಜಯ್ಯ ಭಟ್ ಸಮಿತಿ ಹಾಗೂ ರಮೇಶ್ ಕುಮಾರ್ ಸಮಿತಿಯಲ್ಲಿಯೂ ಈ ಬಗ್ಗೆ ಚರ್ಚಿಸಲಾಗಿದ್ದು, ನಂಜಯ್ಯ ಭಟ್ ವರದಿ ಆಧರಿಸಿ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ, ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳನ್ನು ಹೆಚ್ಚಿಸುವ ಬಗ್ಗೆ ಕೂಡಾ ನಿರ್ಣಯಗಳಾಗಿದೆ ಎಂದವರು ಹೇಳಿದರು. ಎನ್ ಆರ್ ಇ. ಜಿ ಕಾರ್ಯಕ್ರಮದಿಂದ ಪಂಚಾಯಿತಿಗೆ ಹೆಚ್ಚಿನ ಶಕ್ತಿ ಬಂದಿದೆ. ಹಲವಾರು ಕಟ್ಟಡಗಳ ನಿರ್ಮಾಣ ಸಾಧ್ಯವಾಗಿದೆ ಎಂದರು.
ಬಿಪಿಎಲ್ ಕಾರ್ಡ್ ವಿತರಣೆಯಲ್ಲಿಯೂ ಅನ್ಯಾಯವಾಗಿದ್ದು ಸರ್ಕಾರದ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ವಲ್ಪ ಗೊಂದಲಗಳಾಗಿದ್ದು, ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯನ್ನು ಆಯಾ ಗ್ರಾಮ ಪಂಚಾಯಿತಿಗೆ ಪಡಿತರ ಚೀಟಿ ನೀಡುವಂತೆ ಕ್ರಮಕೈಗೊಳ್ಳಲಾಗುತ್ತದೆ. ಪಿಂಚಣಿ ವ್ಯವಸ್ಥೆಯಲ್ಲಿಯೂ ಸಮಸ್ಯೆಗಳುಂಟಾಗುದ್ದ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿಗಳು ಆಯಾ ಫಿರ್ಕಾಕ್ಕೆ ಹೋಗಿ ಅದಾಲತ್ ನಡೆಸುವುದು, ಕಂದಾಯ ಅದಾಲತ್ ಮೂಲಕ ತಹಸೀಲ್ದಾರ್ ನೇತೃತ್ವದಲ್ಲಿ ತಿಂಗಳಿಗೆ ಹತ್ತು ಅದಾಲತ್ ನಡೆಸುವಂತೆ ಸೂಚಿಸಲಾಗಿದ್ದು, ಮಾರ್ಚ್ ತಿಂಗಳಲ್ಲಿ ಪೂರ್ಣಗೊಳಿಸಲಾಗುತ್ತದೆ. ಜಾತಿ ಹಾಗೂ ಆದಾಯ ಪ್ರಮಾಣಪತ್ರಗಳನ್ನು ಆಯಾ ಶಾಲೆಯ ಮುಖ್ಯೋಪಾದ್ಯಾಯರೇ ನೀಡುವಂತೆ ನಿರ್ಣಯ ಕೈಗೊಳ್ಳಲಾಗಿದ್ದು, ಆ ನಿಟ್ಟಿನಲ್ಲಿ ಕೆಲಸಗಳಾಗುತ್ತಿದೆ ಎಂದರು.
ಸ್ವರ್ಣ ಗ್ರಾಮ ಕಾರ್ಯಕ್ರಮ ಉತ್ತಮ ಕಾರ್ಯಕ್ರಮವಾಗಿದ್ದು, ಅದನ್ನು ಮೂರು ವರ್ಷದ ಅವಧಿಗೆ ಗ್ರಾಮ ವಿಕಾಸ ಕಾರ್ಯಕ್ರಮವನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ. ಹತ್ತು ಸಾವಿರಕ್ಕೆ ಮಿಕ್ಕಿದ ಜನಸಂಖ್ಯೆ ಇರುವ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿ ಮಾಡುವ ಕಾನೂನು ಇದ್ದು, ಅದನ್ನು ಹದಿನೈದು ಸಾವಿರ ಜನಸಂಖ್ಯಾ ಮಿತಿಗೆ ಏರಿಸಲಾಗಿದೆ. ಪಟ್ಟಣ ಪಂಚಾಯಿತಿ ಸಮೀಪದಲ್ಲಿ ಅಭಿವೃದ್ಧಿ ಕಾಣಬೇಕಾದ ಗ್ರಾಮಗಳಿದ್ದರೆ ಅವುಗಳನ್ನೂ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿಸುವ ಮೂಲಕ ಅಭಿವೃದ್ಧಿ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು.
ಸಭಾಭವನ ಉದ್ಘಾಟಿಸಿ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಗ್ರಾಮ ಪಂಚಾಯಿತಿ ಸ್ಥಳೀಯ ಸಂಸತ್ತು ಎನ್ನುವಂತೆ ಎಲ್ಲೆಡೆ ಮಾತನಾಡುತ್ತಲೇ ಅಧಿಕಾರ ವಿಕೇಂದ್ರೀಕರಣವಾಗಿದೆ ಎಂದು ಬಿಂಬಿಸಲಾಗುತ್ತಿದೆ. ಆದರೆ ಅಂಗನವಾಡಿ, ಗ್ರಾಮ ಗ್ರಂಥಾಲಯ ಸೇರಿದಂತೆ ಹಲವು ವ್ಯವಸ್ಥೆಗಳು ಗ್ರಾಮ ಪಂಚಾಯಿತಿ ಸುಪರ್ಧಿಯಲ್ಲಿತತು. ಆದರೆ ಅದನ್ನು ಏಕಾಏಕೀ ಕಿತ್ತುಕೊಳ್ಳುವ ಮೂಲಕ ವಿಕೇಂದ್ರೀಕರಣದ ಅರ್ಥ ಕೆಡಸಿಲಾಗಿದೆ. ತಕ್ಷಣ ರಮೆಶ್ ಕುಮಾರ್ ವರದಿ ಅನುಷ್ಟಾನಗೊಳಿಸಬೇಕು. ಹಾಗಾದಾಗ ಮಾತ್ರ ಗ್ರಾಮ ಪಂಚಾಯಿತಿ ಸ್ವತಂತ್ರ ಸರ್ಕಾರವಾಗಿ ಕಾರ್ಯನಿರ್ವಹಿಸಲು ಸಆಧ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ನೌಕರರು ತಮ್ಮ ಬೇಡಿಕೆಗಳ ಪಟ್ಟಿಯನ್ನು ಸಚಿವ ವಿನಯಕುಮಾರ್ ಸೊರಕೆಯವರಿಗೆ ನೀಡಿದರು. ಇದೇ ಸಂಧರ್ಭ ಸುವರ್ಣ ಸೌಧ ಗುತ್ತಿಗೆದಾರ ಕಮಲ ಕಿಶೋರ್ ಹೆಗ್ಡೆಯವರನ್ನು ಹಾಗೂ ಕಟ್ಟಡ ನಿರ್ಮಾಣಕ್ಕೆ ಸ್ಥಳದಾನ ಮಾಡಿದ ಕೋಣಿ ನಾಗರಾಜ ಹತ್ವಾರ್ ಅವರನ್ನು ಸನ್ಮಾನಿಸಲಾಯಿತು.
ಮಾಜೀ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಭಾಭವನ ಉದ್ಘಾಟಿಸಿದರು. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶ್ ಟಿ. ಮೆಂಡನ್, ಕುಂದಾಪುರ ತಾಲೂಕು ಪಂಚಾಯಿತಿ ಅಧ್ಯಕ್ಷ ಭಾಸ್ಕರ ಬಿಲ್ಲವ, ಕೋಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಕು ಪೂಜಾರ್ತಿ, ಕುಂದಾಪುರ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶೇಷಪ್ಪ, ಉದ್ಯಮಿ ಸುರೇಶ್ ಎನ್, ಶೆಟ್ಟಿ, ಉದ್ಯಮಿ ರಾಜರಾಮ ಹತ್ವಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸವಿಶ್ರೀ ಪ್ರಾರ್ಥಿಸಿದರು. ಕೋಣಿ ಗ್ರಾಮ ಪಂಚಾಯಿತಿ ಮಾಜೀ ಉಪಾಧ್ಯಕ್ಷ ಸಂಜೀವ ಮೊಗವೀರ ಸ್ವಾಗತಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಸಂತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಕೀಲ ರಾಘವೇಂದ್ರ ಚರಣ ನಾವಡ ಕಾರ್ಯಕ್ರಮ ನಿರೂಪಿಸಿದರು. ರಾಮಚಂದ್ರ ಶೇರೆಗಾರ್ ವಂದಿಸಿದರು.

