ಕನ್ನಡ ವಾರ್ತೆಗಳು

ವಿದ್ಯೆಯೆಂಬುದು ಯಾರಿಂದಲೂ ದೋಚಲಾಗದ ಸಂಪತ್ತು’ – ಟಿ.ಎಸ್.ಎಸ್. ಕಾಮತ್

Pinterest LinkedIn Tumblr

can_fest_photo_1

ಮಂಗಳೂರು,ಜ.15 : ವಿದ್ಯೆಯೆಂಬುದು ನಿರಂತರ ಮತ್ತು ಅಂತ್ಯವಿಲ್ಲದ ಶೈಕ್ಷಣಿಕ ಪ್ರಕ್ರಿಯೆ ಹಾಗೂ ಯಾರಿಂದಲೂ ದೋಚಲಾಗದಂತಹ ಸಂಪತ್ತು’ ಎಂದು ನಗರದ ಖ್ಯಾತ ಲೆಕ್ಕಪರಿಶೋಧಕರಾದ ಶ್ರೀ ಎಸ್.ಎಸ್. ಕಾಮತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿದ ಕೆನರಾ ಕಾಲೇಜಿನ ವಾಣಿಜ್ಯ ಮತ್ತು ಆಡಳಿತ ನಿರ್ವಹಣಾ ವಿಭಾಗದವರು ಆಯೋಜಿಸಿದ ‘ಕಾನ್ ಫೆಸ್ಟ್ – ವಿವರ್ತಾ 2015’ ಎಂಬ ವಾರ್ಷಿಕ ರಾಷ್ಟ್ರಮಟ್ಟದ ಅಂತರ್ ಕಾಲೇಜು ಸ್ಪರ್ಧಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಒಂದು ನಿರ್ದಿಷ್ಟ ಗುರಿಯನ್ನು ಹೊಂದಿರಬೇಕು. ಅದನ್ನು ಸಾಧಿಸಲು ಸ್ಪಷ್ಟ ಕಲ್ಪನೆ ಹೊಂದಿರಬೇಕು ಹಾಗೂ ಉತ್ತಮ ಚಾರಿತ್ರ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

can_fest_photo_2

ಕಾಲೇಜಿನ ಪ್ರಾಂಶುಪಾಲರಾದ ಡಾ| ಬಿ.ವೈ. ಕಾಂಬ್ಳೆಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಈ ಸ್ಪರ್ಧಾಕೂಟವನ್ನು ಕಳೆದ 23 ವರ್ಷಗಳಿಂದ ಸತತವಾಗಿ ಯಶಸ್ವಿಯಾಗಿ ಆಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿ, ಸ್ಪರ್ಧಾಳುಗಳಿಗೆ ಶುಭ ಕೋರಿದರು. ಖ್ಯಾತ ಉದ್ಯಮಿ ಮಾರೂರು ಸುಧೀರ್ ಪೈ ಹಾಗೂ ಬಸ್ತಿ ಪುರುಷೋತ್ತಮ್ ಶೆಣೈ ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದರು. ಸಂಘಟಕ ಪ್ರಾಧ್ಯಾಪಕರಾದ ಶ್ರೀಮತಿ ಉಷಾ ನಾಯಕ್, ಶ್ರೀ ವಿನೋದ ವಿ. ನಾಯಕ್, ಶ್ರೀ ಸಮರ್ಥ ಶೆಣೈ, ಶ್ರೀ ವಸಂತ್ ಉಪಸ್ಥಿತರಿದ್ದರು.

ಈ ಸ್ಪರ್ಧೆಯಲ್ಲಿ ಸುಮಾರು 200 ವಿದ್ಯಾರ್ಥಿಗಳು ರಾಜ್ಯದ ವಿವಿಧ 25 ಕಾಲೇಜುಗಳನ್ನು ಪ್ರತಿನಿಧಿಸಿ, ರಸಪ್ರಶ್ನೆ, ಶ್ರೇಷ್ಠ ಮಾರಾಟ ವ್ಯವಸ್ಥಾಪಕ, ಮಾನವ ಸಂಪನ್ಮೂಲ ಅಧಿಕಾರಿ, ಸಾರ್ವಜನಿಕ ಸಂಪರ್ಕಾಧಿಕಾರಿ, ಪತ್ರಿಕೋದ್ಯಮಿ, ಮಾದರಿ ನ್ಯಾಯಾಲಯ ಮತ್ತು ವಿತ್ತ ವ್ಯವಹಾರ ವಿಭಾಗಗಳಲ್ಲಿ ಸ್ಪರ್ಧಿಸಿದ್ದರು. ಸಮಗ್ರ ವಿಜೇತರಾಗಿ ಬೆಂಗಳೂರು ಮೂಲದ ಕ್ರೈಸ್ಟ್ ವಿಶ್ವವಿದ್ಯಾನಿಲಯದ ತಂಡ ಪ್ರಥಮ ಮತ್ತು ಜೈನ್ ವಿಶ್ವವಿದ್ಯಾನಿಲಯ ತಂಡ ದ್ವಿತೀಯ ಸ್ಥಾನ ಗಳಿಸಿತು. ಕಾರ್ಯದರ್ಶಿ ಸಂಜೀತ್ ಶೆಣೈ ಸ್ವಾಗತಿಸಿದರು. ಕು| ನಮ್ರತಾ ನಾಯಕ್ ನಿರೂಪಿಸಿದ ಕಾರ್ಯಕ್ರಮದಲ್ಲಿ, ವಿದ್ಯಾರ್ಥಿ ಸಹಕಾರ್ಯದರ್ಶಿ ಅಲೋಕ್ ಡಿ. ಧನ್ಯವಾದ ನೀಡಿದರು.

Write A Comment