ಕುಂದಾಪುರ: ಭಾನುವಾರ ಸಂಜೆ ಎರಡು ಕೋಮುಗಳ ನಡುವೆ ಗುಂಪು ಘರಷಣೆ ನಡೆದಿದ್ದು, ಪೊಲೀಸರು ಸೋಮವಾರ ಸಂಜೆ ನಾಗರೀಕರ ಸಭೆ ಕರೆದು ಕುಂದು-ಕೊರತೆಗಳ ಬಗ್ಗೆ ಸಮಲೋಚನೆ ನಡೆಸಿದರು.
ಈ ಸಂದರ್ಭ ನೊಂದ ಯುವತಿಯೋರ್ವರು ಮಾತನಾಡಿ, ಹಿಂದೂಗಳ ಮನೆನುಗ್ಗಿ ಅಮಾಯಕರನ್ನು ಬಂಧಿಸುವ ಪೊಲೀಸರು, ಇನ್ನೊಂದು ಕೋಮಿನ ಆರೋಪಿಗಳನ್ನು ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆ, ಪೊಲೀಸರು ಅವರಿಗೆ ಬೆಂಬಲ ನೀಡುವ ಸಂದೇಹ ಕಾಡುತ್ತಿದ್ದು, ನಮಗೊಂದು ನ್ಯಾಯ ಅವರಿಗೊಂದು ನ್ಯಾಯ ಎಂಬಂತಾಗಿದೆ. ಗಾಂಧಿಜಿಯವರ ಕನಸಿನ ರಾಮರಾಜ್ಯದಲ್ಲಿ ಮಧ್ಯರಾತ್ರಿ ಹೆಣ್ಣೊಬ್ಬಳು ಯಾವುದೇ ಭಯವಿಲ್ಲದೇ ತಿರುಗಾಡಬೇಕು ಎಂಬುದಾಗಿತ್ತು, ಆದರೇ ಕೋಡಿ ಪರಿಸರದಲ್ಲಿ ೮ ಗಂಟೆಗೆ ಯುವಕರು ತಿರುಗಾಡುವುದು ಕಷ್ಟಸಾಧ್ಯವಾಗಿದೆ ಇದಕ್ಕೆಲ್ಲಾ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಸ್ಥಳೀಯ ವ್ಯಕ್ತಿಯೋರ್ವ ಮಾತನಾಡಿ, ನಾವು ಕಡಲಿನ(ಸಮುದ್ರದ) ಕೆಲಸ ಮಾಡಲು ಹೋಗುವವರು, ಈ ಪರಿಸರದಲ್ಲಿ ಹೀಗೆ ಮುಂದುವರಿದರೇ ನಮ್ಮ ಹೆಂಡತಿ ಮಕ್ಕಳ ಹಾಗೂ ಕುಟುಂಬಿಕರ ರಕ್ಷಣೆಯ ಹೊಣೆ ಯಾರದ್ದು, ನಮಗೆ ಸೂಕ್ತ ಭದ್ರತೆ ಬೇಕು ಎಂದು ಪರಿಸ್ಥಿತಿ ವಿವರಿಸುತ್ತಾ, ಗಲಾಟೆಯ ಬಳಿಕ ಸ್ಥಳದಲ್ಲಿಯೂ ಇರದ ಅಮಾಯಕ ವ್ಯಕ್ತಿಗಳ ಹೆಸರನ್ನು ಸೇರಿಸಿ ಅವರಿಗೆ ತನಿಖೆ ನೆಪದಲ್ಲಿ ತೊಂದರೆ ನೀಡುವ ಕಾರ್ಯವಾಗುತ್ತಿದ್ದು ಇದನ್ನೆಲ್ಲಾ ತಡೆಯಬೇಕು ಎಂದು ಆಗ್ರಹಿಸಿದರು. ಇದಕ್ಕೆ ದನಿಗೂಡಿಸಿದ ಇನ್ನೋರ್ವರು ಪೊಲೀಸರು ಅವ್ಯಾಚ ಶಬ್ದಗಳಿಂದ ಎಲ್ಲರನ್ನೂ ಮಾತನಾಡಿಸುವ ಕೀಳು ಸಂಸ್ಕೃತಿ ಹೋಗಬೇಕು, ಎಲ್ಲರೂ ಮನುಷ್ಯರೇ, ಅವ್ಯಾಚ ಶಬ್ದ ಬಳಕೆಗೆ ಕಡಿವಾಣ ಹಾಕುವಲ್ಲಿ ಹಿರಿಯ ಅಧಿಕಾರಿಗಳು ಗಮನವಹಿಸಬೇಕೆಂದರು.
ಸಭೆ, ಕಾನೂನಿಗೆ ಬೆಲೆ ಇಲ್ಲವಾ?: ಕಳೆದ ನಾಲ್ಕೈದು ತಿಂಗಳ ಹಿಂದೆ ಇದೇ ಭಾಗದಲ್ಲಿ ಶಾಂತಿ ಸಭೆ ನಡೆಸಿ ಇನುಮುಂದೆ ಇಂತಹ ಘಟನೆಗಳು ನಡೆಯದಂತೆ ಶಿಸ್ತು ಕ್ರಮಕೈಗೊಳ್ಳುವುದಾಗಿ ಪೊಲಿಸರು ತಿಳಿಸಿದ್ದರೂ ಕೂಡ ಮೂರ್ನಾಲ್ಕು ತಿಂಗಳುಗಳ ಅವಧಿಯಲ್ಲಿ ಅಮಾಯಕ ಹಿಂದೂ ಯುವಕರ ಮೇಲೆ ಹಲ್ಲೆಯಾಗಿದೆ. ಹಾಗದಾರೇ ಕಾಟಾಚಾರಕ್ಕೆ ಸಭೆ ನಡೆಸಿದರೇ ಏನು ಪ್ರಯೋಜನ, ಕಾನೂನಿಗೆ ಬೆಲೆ ಎಲ್ಲವೇ ಎಂಬ ಪ್ರಶ್ನೆಯನ್ನು ಸ್ಥಳಿಯರೊಬ್ಬರು ವೃತ್ತನಿರೀಕ್ಷಕರಲ್ಲಿ ಕೇಳಿದ್ದು ಇಡೀ ಸಭೆ ಈ ಮತಿಗೆ ಧ್ವನಿಗೂಡಿಸಿತ್ತು.
ನಾಗರೀಕರ ಎಲ್ಲಾ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಆಲಿಸಿದ ಕುಂದಾಪುರ ವೃತ್ತನಿರೀಕ್ಷಕ ದಿವಾಕರ ಪಿ.ಎಂ. ಮಾತನಾಡಿ, ಶತಮಾನಗಳಿಂದಲೂ ನೀವು ಈ ಭಾಗದಲ್ಲಿ ನೆಲೆಸಿದ್ದೀರಿ, ತಾಲೂಕಿನಲ್ಲಿ ಈ ಭಾಗದಲ್ಲಿ ಮಾತ್ರ ಹೆಚ್ಚಾಗಿ ಇಂತಹ ಘಟನೆಗಳಾಗುತ್ತಿರುವುದು ನಿಜಾಂಶವಾಗಿದೆ. ವಾಸ್ತವದಲ್ಲಿ ಇಲ್ಲಿನವರು ಗಲಾಟೆ ಮಾಡುತ್ತಿಲ್ಲ, ಬದಲಾಗಿ ಹೊರಗಡೆಯಿಂದ ಬಂದ ಕಿಡಿಗೇಡಿಗಳು ಇಲ್ಲಿ ಅಶಾಂತಿ ಸೃಷ್ಟಿಸಲು ಮುಂದಾಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮಕ್ಕೆ ಸಿದ್ಧರಾಗಿದ್ದೇವೆ. ಇಂತಹ ಗಲಾಟೆಗಳು ಭವಿಷ್ಯದಲ್ಲಿ ನಡೆಯದಂತೆ ಶಾಶ್ವತ ಕ್ರಮ ಕೈಗೊಳ್ಳಲು ಇಲಾಖೆ ಕಠಿಬದ್ಧವಾಗಿದೆ ಎಂದರು. ಕೋಡಿ, ಹಳವಳ್ಳಿ, ಹಾಗೂ ಕೋಟೇಶ್ವರದ ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಟಿ.ವಿ. ಅಳವಡಿಕೆಗೆ ಈಗಾಗಲೇ ಚಿಂತಿಸಲಾಗಿದೆ ಹಾಗೂ ಕೋಡಿ ಭಾಗದಲ್ಲಿ ಪೊಲೀಸ್ ಹೊರಠಾಣೆ ತೆರೆಯುವ ಬಗ್ಗೆ ಈಗಾಗಲೇ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾ.ಪಂ. ಸದಸ್ಯ ಮಂಜು ಬಿಲ್ಲವ, ಗ್ರಾ.ಪಂ. ಮಾಜಿ ಸದಸ್ಯ ನಾಗರಾಜ ಬಿಲ್ಲವ, ಜಾನಕಿ ಬಿಲ್ಲವ, ಮಾರ್ಕೋಡು ಸುಧೀರ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.