ಕನ್ನಡ ವಾರ್ತೆಗಳು

ಕೆನರಾ ಹೈಸ್ಕೂಲ್ ನಲ್ಲಿ ವಿಶಿಷ್ಟರಿಗಾಗಿ ವಿಶಿಷ್ಟಮೇಳ.

Pinterest LinkedIn Tumblr

cenara_vista_mela_1

ಮಂಗಳೂರು,ಜ.12 : ದಿನವಿಡೀ ಮಂದಹಾಸ, ಕೇಕೆ, ಖುಷಿ, ಸಂಭ್ರಮ  ಇದರೊಂದಿಗೆ  ತಿರುಗುವ ಮರದ ಕುದುರೆಯಲ್ಲಿ ಕುಳಿತು ತಿರುಗಿ… ನೈಜ ಕುದುರೆಯೇರಿ ಮಂದಹಾಸ ಬೀರಿ… ಗಾಳಿ ತುಂಬಿದ ಜಾರುಬಂಡಿಯಲ್ಲಿ ಜಾರಿ ಸಂಭ್ರಮಿಸಿ… ಒಂಟೆ ಸವಾರಿ ಮಾಡಿ ಮಜಾ ಅನುಭವಿಸಿ… ಡಿಜೆ ಸಂಗೀತಕ್ಕೆ ಮೈಮನ ಮರೆತು ಕುಣಿದು ಕುಪ್ಪಳಿಸಿ … ಹೀಗೆ ದಿನವಿಡೀ ಅವರು ಸಂಭ್ರಮದಲ್ಲಿ ತೇಲಾಡಿದರು. ಹೀಗೆ ಸಂಭ್ರಮಿಸಿದವರು ಭಿನ್ನ ಚೇತನ ಮಕ್ಕಳು. ಇವೆಲ್ಲ ಸಾರ್ಥಕಗೊಂಡದ್ದು ಸೇವಾ ಭಾರತಿಯ ಅಂಗಸಂಸ್ಥೆ ಆಶಾ ಜ್ಯೋತಿ ವತಿಯಿಂದ ಭಿನ್ನ ಚೇತನ ಮಕ್ಕಳಿಗಾಗಿ ಪ್ರತಿವರ್ಷದಂತೆ ಈ ಬಾರಿಯೂ ಡೊಂಗರಕೇರಿಯ ಕೆನರಾ ಹೈಸ್ಕೂಲ್ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ವಿಶಿಷ್ಟರಿಗಾಗಿ ವಿಶಿಷ್ಟ ಮೇಳದಲ್ಲಿ.

cenara_vista_mela_2

ಮಕ್ಕಳು ತಮ್ಮ ವಿಶೇಷ ಪ್ರತಿಭೆಯನ್ನು ಪ್ರದರ್ಶಿಸುವ ಜತೆ ಜತೆಗೆ ಮನೋರಂಜನಾತ್ಮಕ ಆಟಗಳನ್ನು ಆಡುತ್ತಾ, ದೈಹಿಕವಾಗಿ ನಾನಾ ಭಿನ್ನತೆಯನ್ನು ಹೊಂದಿದ್ದರೂ ಯಾವುದೇ ಭಿನ್ನತೆಯಿಲ್ಲದೆ ಖುಷಿ ಪಟ್ಟರು. ಬೆಳಗ್ಗೆ ವಿಶಿಷ್ಟರಿಗಾಗಿ ವಿಶಿಷ್ಟ ಮೇಳದ ಉದ್ಘಾಟನಾ ಸಮಾರಂಭ ನಡೆಯಿತು. ಎ.ಜೆ.ಸಮೂಹದ ಸಿಇಒ ಎ.ಜೆ.ಶೆಟ್ಟಿ ಉದ್ಘಾಟನೆ ನೆರವೇರಿಸಿದರು.

ಅಧ್ಯಕ್ಷತೆ ವಹಿಸಿದ್ದ ಮೇಯರ್ ಮಹಾಬಲ ಮಾರ್ಲ ಮಾತನಾಡಿ, ವಿಶಿಷ್ಟರಿಗಾಗಿ ಸರಕಾರದಿಂದ ದೊರೆಯುವ ಎಲ್ಲ ಸೌಲಭ್ಯವನ್ನು ಶೇ.100ರಷ್ಟು ಮಂಗಳೂರು ಮಹಾನಗರ ಪಾಲಿಕೆ ಅನುಷ್ಠಾನಗೊಳಿಸಿದೆ ಎಂದರು.

cenara_vista_mela_3 cenara_vista_mela_4 cenara_vista_mela_5 cenara_vista_mela_6

ವಿಶಿಷ್ಟ ಮಕ್ಕಳ ಸೇವೆ ಮಾಡುತ್ತಿರುವ ಸಂಸ್ಥೆಗಳು ಮಕ್ಕಳ ಬಗ್ಗೆ ಸೂಕ್ತವಾಗಿ ನೋಂದಣಿ ಮಾಡಿದಾಗ ಸರಕಾರದಿಂದ ದೊರೆಯುವ ಸೌಲಭ್ಯವನ್ನು ಪರಿಣಾಮಕಾರಿಯಾಗಿ ದೊರಕಿಸಿಕೊಡಲು ಸಾಧ್ಯ.

ಇಂತಹ ಕಾರ್ಯಕ್ರಮಗಳಿಂದ ವಿಶಿಷ್ಟ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸಲು ಮಾತ್ರವಲ್ಲದೆ ಜನರಲ್ಲಿ ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ. ದೈಹಿಕವಾಗಿ ವಿಶಿಷ್ಟ ಚೇತನವಾಗಿದ್ದರೂ, ಪಠ್ಯೇತರ ಚಟುವಟಿಕೆಯಲ್ಲಿ ಬಹಳಷ್ಟು ಮುಂದಿರುವ ಮಕ್ಕಳ ಪ್ರತಿಭೆ ಗುರುತಿಸಿ ತರಬೇತಿ ನೀಡಬೇಕು ಎಂದು ಅವರು ತಿಳಿಸಿದರು. ಮುಖ್ಯ ಅತಿಥಿ ಕಾರ್ಪೊರೇಶನ್ ಬ್ಯಾಂಕ್‌ನ ಉಪಮಹಾಪ್ರಬಂಧಕ ರಂಗಸ್ವಾಮಿ, ಸೇವಾಭಾರತಿ ವಿಶ್ವಸ್ತ ಗಜಾನನ ಪೈ ಉಪಸ್ಥಿತರಿದ್ದರು.

cenara_vista_mela_7 cenara_vista_mela_8 cenara_vista_mela_9 cenara_vista_mela_10 cenara_vista_mela_11 cenara_vista_mela_12

400ಕ್ಕೂ ಮಿಕ್ಕಿ ವಿಕಲಚೇತನ ಮಕ್ಕಳು: ಜಾತ್ರೆ ಮತ್ತಿತರ ಸಂಭ್ರಮಗಳಿಂದ ವಂಚಿತರಾಗುವ ವಿಭಿನ್ನ ಚೇತನ ಮಕ್ಕಳಿಗೆ ಅದರ ಸಂಭ್ರಮ ಮತ್ತು ಖುಷಿಯನ್ನು ಒದಗಿಸುವ ಸಲುವಾಗಿ ವಿಶಿಷ್ಟ ಮೇಳ ನಡೆಸಲಾಗಿತ್ತು. ದ.ಕ.ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಿಂದ 400ಕ್ಕೂ ಮಿಕ್ಕಿ ವಿಕಲಚೇತನ ಮಕ್ಕಳು ಪಾಲ್ಗೊಂಡಿದ್ದರು. ಮಕ್ಕಳಿಗೆ ಉಚಿತವಾಗಿ ತಿಂಡಿ ತಿನಿಸು, ಪಾನೀಯ, ತಿರುಗುವ ತೊಟ್ಟಿಲು, ತಿರುಗುವ ಕುದುರೆ, ಒಂಟೆ ಮತ್ತು ಕುದುರೆ ಸವಾರಿ ಮುಂತಾದ ಮೋಜು ಅನುಭವಿಸಲು ಅವಕಾಶ ಕಲ್ಪಿಸಲಾಗಿತ್ತು. ಪರಿಣತ ವೈದ್ಯರಿಂದ ನಾನಾ ಕಾಯಿಲೆಗಳ ಬಗ್ಗೆ ಆರೋಗ್ಯ ತಪಾಸಣೆ ಮತ್ತು ಮಾರ್ಗದರ್ಶನ ನೀಡಲಾಯಿತು. ಪ್ರತಿಭಾ ಪ್ರದರ್ಶನ, ಶಾರೀರಿಕ ಅಶಕ್ತರು ಮತ್ತು ಅವರ ಪೋಷಕರಿಗೆ ವಿವಿಧ ಮನರಂಜನಾ ಆಟಗಳನ್ನೂ ಏರ್ಪಡಿಸಲಾಗಿತ್ತು.

Write A Comment