ಕನ್ನಡ ವಾರ್ತೆಗಳು

ಬೋಳಿಯಾರಿನಲ್ಲಿ ನೈತಿಕ ಪೊಲೀಸ್‍ಗಿರಿ : ಯುವಕನ ಮೇಲೆ ಹಲ್ಲೆ

Pinterest LinkedIn Tumblr

Boliyar_fight_photo

ಮಂಗಳೂರು,ಜ.12: ಯುವಕನೋರ್ವನ ಮೇಲೆ ತಂಡವೊಂದು ಮಾರಣಾಂತಿಕವಾಗಿ ಹಲ್ಲೆಗೈದು ನೈತಿಕ ಪೊಲೀಸ್‍ಗಿರಿ ಪ್ರದರ್ಶಿಸಿದ ಘಟನೆ ಬೋಳಿಯಾರು ಸಮೀಪದ ರಂತಡ್ಕ ಕೊರಂಗಿಪಳ್ಳ ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದ್ದು, ಘಟನೆಯಿಂದ ಸ್ಥಳದಲ್ಲಿ ಇತ್ತಂಡಗಳು ಜಮಾಯಿಸಿ ನಡೆಸಿದ ಮಾತಿನ ಚಕಮಕಿಯಿಂದ ಉದ್ರಿಕ್ತ ವಾತಾವರಣ ನಿರ್ಮಾಣಗೊಂಡಿದೆ. ಬೋಳಿಯಾರು ಬೊಳಿತ್ತೆಡಿ ನಿವಾಸಿ ಪದ್ಮನಾಭ (35) ತಂಡದಿಂದ ಮಾರಣಾಂತಿಕ ದಾಳಿಗೊಳಗಾದವರು.

ಬೋಳಿಯಾರು ರಂತಡ್ಕ ನಿವಾಸಿಗಳಾದ ಸಿರಾಜ್, ನಿಸಾರ್, ಅಬೂಬಕರ್, ಅಶ್ರಫ್, ಬಶೀರ್, ಹಬೀಬ್, ಆರ್.ಹೆಚ್. ಮೋನು ಎಂಬವರ ಇಬ್ಬರು ಮಕ್ಕಳು ಸೇರಿ ಕೃತ್ಯ ಎಸಗಿದ್ದಾರೆಂದು ದೂರಲಾಗಿದೆ. ಆರೋಪಿಗಳು ಹಿಂದೆಯೂ ಸ್ಥಳೀಯವಾಗಿ ಹಲವು ಕ್ರಿಮಿನಲ್ ಕೃತ್ಯಗಳಲ್ಲಿ ಭಾಗಿಯಾಗಿದ್ದರೆಂದು ತಿಳಿದುಬಂದಿದೆ.

ಘಟನೆ ವಿವರ: ಬೋಳಿಯಾರು ಜಂಕ್ಷನ್ನಿನಲ್ಲಿ ಹಾರ್ಡ್‍ವೇರ್ ಅಂಗಡಿಯನ್ನು ಹೊಂದಿರುವ ಪದ್ಮನಾಭ ರಾತ್ರಿ 8.30ರ ವೇಳೆ ತಮ್ಮ ಪಲ್ಸಾರ್ ಬೈಕಿನಲ್ಲಿ ಮನೆ ಕಡೆಗೆ ಹೊರಟಿದ್ದರು. ದಾರಿಮಧ್ಯೆ ರಂತಡ್ಕದ ಕೊರಂಗಿಪಳ್ಳದಲ್ಲಿರುವ ಗೆಳೆಯ ಪಮ್ಮು ಎಂಬವರಿಗೆ ಹಣ ನೀಡಲು ಇದೆಯೆಂದು ಬೈಕನ್ನು ತಿರುಗಿಸಿ ಹೋಗುತ್ತಿದ್ದರು. ಈ ನಡುವೆ 10-20 ರಷ್ಟು ಮಂದಿಯಿದ್ದ ತಂಡವೊಂದು ಬೈಕನ್ನು ಅಡ್ಡಗಟ್ಟಿ ‘ನಮ್ಮ ಹುಡುಗಿಯ ಜತೆಗೆ ಭಾರೀ ಚಾಟಿಂಗ್ ಮಾಡುತ್ತೀಯಾ, ಮಾತಾಡುತ್ತೀಯಾ’ ಎಂದು ಗದರಿಸಿ ಬೈಕಿನಿಂದ ಎಳೆದು ಕೈಗೆ ಸಿಕ್ಕ ವಸ್ತುಗಳಲ್ಲಿ ಹಲ್ಲೆ ನಡೆಸಲು ಆರಂಭಿಸಿದ್ದರು. ಪದ್ಮನಾಭನ ಕಿರುಚಾಟದ ಶಬ್ದ ಕೇಳುತ್ತಿದ್ದಂತೆ ಸ್ಥಳದಲ್ಲಿ ಆತನ ಪರಿಚಯಸ್ಥರೂ ನೆರೆದು ತಂಡವನ್ನು ಹಲ್ಲೆ ನಡೆಸದಂತೆ ಸೂಚಿಸಿದಾಗ ಇತ್ತಂಡಗಳ ಮಧ್ಯೆ ಮಾತಿನ ಚಕಮಕಿ ಆರಂಭವಾಯಿತು. ಇದರಿಂದ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಯಿತು. ಈ ನಡುವೆ ಅಂಗವಿಕಲ ರಿಕ್ಷಾ ಚಾಲಕ ಪದ್ಮನಾಭ ಅವರಿಗೆ ನಡೆಯುತ್ತಿರುವ ಹಲ್ಲೆಯನ್ನು ತಡೆಯಲು ಮುಂದಾದಾಗ ಅವರ ಮೇಲೂ ಕೈಹಾಕಿದ ದುಷ್ಕರ್ಮಿಗಳು, ಕೊಲೆ ಬೆದರಿಕೆಯನ್ನು ಒಡ್ಡಿದ್ದಾರೆ ಎನ್ನಲಾಗಿದೆ.

ವಿಷಯ ತಿಳಿದು ಕೊಣಾಜೆ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳುವನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳದಲ್ಲಿ ಬಿಗಿ ಬಂದೋಬಸ್ತನ್ನು ಏರ್ಪಡಿಸಿದ್ದಾರೆ. ವಿವಾಹದ ಮನೆಗೆ ಬಂದರೆಂದು ಮುಗಿಬಿದ್ದ ತಂಡ ಯುವತಿಯೋರ್ವಳ ವಿವಾಹ ಸಮಾರಂಭ ನಿನ್ನೆ ಬೋಳಿಯಾರಿನಲ್ಲಿ ನಡೆದಿತ್ತು. ಅದರಲ್ಲಿ ಪದ್ಮನಾಭ ಭಾಗವಹಿಸಿದ್ದರೆಂದು ಆರೋಪಿಸಿದ ತಂಡ `ವಿವಾಹವಾದ ಯುವತಿ ಜತೆಗೆ ಸಖ್ಯ ಬೆಳೆಸಿದ್ದೀಯಾ, ಆಕೆಯ ಜತೆಗೆ ಚಾಟಿಂಗ್ ನಡೆಸುತ್ತೀಯಾ, ಅಲ್ಲದೆ ಆಕೆಯ ವಿವಾಹ ಸಮಾರಂಭಕ್ಕೂ ಬಂದಿದ್ದೀಯಾ…?’ ಎಂದು ಆರೋಪಿಸಿದ ತಂಡ ದೊಣ್ಣೆ ಹಾಗೂ ಕೈಗೆ ಸಿಕ್ಕ ಸಿಕ್ಕ ವಸ್ತುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದೆ. ಎರಡು ಕೃತ್ಯವನ್ನು ಒಂದೇ ತಂಡ ನಡೆಸಿರುವುದು ಸ್ಥಳೀಯವಾಗಿ ಹಲವು ಸಂಶಯಗಳಿಗೆ ಕಾರಣವಾಗಿದೆ. ಗಾಂಜಾ ಮತ್ತು ಮಾದಕವ್ಯಸನಿಗಳ ತಂಡ ಬೋಳಿಯಾರಿನಲ್ಲಿ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದು, ಪೊಲೀಸರು ಅವರ ವಿರುದ್ಧ ಕ್ರಮಕೈಗೊಳ್ಳದೇ ಇರುವುದು ಇಂತಹ ಅಹಿತಕರ ಘಟನೆಗಳಿಗೆ ಕಾರಣವಾಗುತ್ತಿದೆ ಎನ್ನಲಾಗಿದೆ

Write A Comment