ಕನ್ನಡ ವಾರ್ತೆಗಳು

ಉಗ್ರರ ನಿಗ್ರಹಕ್ಕೆ ಕೇಂದ್ರ ಸರಕಾರದಿಂದ ಉಗ್ರ ಕ್ರಮ : ಕೇಂದ್ರ ಹಾಗೂ ರಾಜ್ಯ ಸರಕಾರ ಜಂಟಿ ಕಾರ್ಯಾಚರಣೆಗೆ ಚಿಂತನೆ

Pinterest LinkedIn Tumblr

Dv_Sadananda_Gowda

ಮಂಗಳೂರು: ಉಗ್ರರ ನಿಗ್ರಹಕ್ಕೆ ಕೇಂದ್ರ ಸರಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರಕಾರಗಳಿಗೆ ಗೃಹ ಸಚಿವರ ಮೂಲಕ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ. ವಿಟ್ಲ ಸಿಪಿಸಿಆರ್‌ಐ ವತಿಯಿಂದ ಆಯೋಜಿಸಲಾಗಿದ್ದ ಕೃಷಿ ಮೇಳಕ್ಕೆ ಆಗಮಿಸಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

ಉಗ್ರವಾದದ ವಿರುದ್ಧ ಹೋರಾಟ ಗಂಭೀರ ವಿಚಾರವಾಗಿದ್ದು, ಇದನ್ನು ರಾಜಕೀಯಕ್ಕೆ ಬಳಸುವುದು ಸರಿಯಲ್ಲ ಎಂದ ಅವರು, ಉಗ್ರರ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರಕಾರ ಜಂಟಿ ಕಾರ್ಯಾಚರಣೆಯ ಅಗತ್ಯವಿದೆ ಎಂದರು.

ಕಾನೂನು ಸುವ್ಯವಸ್ಥೆ ರಾಜ್ಯದ ಜವಾಬ್ದಾರಿ. ಅದಕ್ಕೆ ಪೂರಕವಾದ ನೆರವನ್ನು ಕೇಂದ್ರ ನೀಡುತ್ತದೆ ಎಂದ ಅವರು, ಭಟ್ಕಳ ಭಯೋತ್ಪಾದಕರ ಕೇಂದ್ರವಾಗುತ್ತಿರುವ ಬಗ್ಗೆ, ಕರ್ನಾಟಕ ಸರಕಾರಕ್ಕೆ ಈಗಾಗಲೇ ಮುನ್ಸೂಚನೆ ನೀಡಿದ್ದು, ಈ ಬಗ್ಗೆ ನಿಗಾ ವಹಿಸುವಂತೆ ಸೂಚಿಸಲಾಗಿದೆ ಎಂದರು.

ಪುತ್ತೂರಿನ ವಿವೇಕಾನಂದ ಕಾಲೇಜು ಬಳಿಯ ಪಡ್ಡಾಯೂರು ರಸ್ತೆಯ ಬದಿ ಉಗ್ರ ಬರಹಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಕಿಡಿಗೇಡಿಗಳ ಕೃತ್ಯ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಇದನ್ನು ಯಾವುದೇ ಕಾರಣಕ್ಕೆ ಕಡೆಗಣಿಸದೇ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ಪರಿಷ್ಠಾಧಿಕಾರಿಯವರಿಗೆ ಸೂಚಿಸಲಾಗುವುದು ಎಂದರು.

ಸಂಜಯ್ ದತ್‌ಗೆ ವಿಶೇಷ ಪೆರೋಲ್ ನೀಡಿರುವ ಕ್ರಮದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಭಾವಿಗಳು, ಪ್ರತಿಷ್ಠಿತ ವ್ಯಕ್ತಿಗಳು ಎಂಬ ಕಾರಣದಿಂದ ನಡೆಯುವ ಇಂತಹ ಕಾನೂನು ಸಡಿಲಿಕೆಯ ವಿದ್ಯಮಾನಗಳಿಂದ ನಾಗರಿಕ ಸಮುದಾಯಕ್ಕೆ ಸರಕಾರ ಹಾಗೂ ಕಾನೂನು ವ್ಯವಸ್ಥೆಯ ಬಗ್ಗೆ ಇರುವ ನಂಬಿಕೆ ಕಡಿಮೆಯಾಗುತ್ತದೆ. ಇದು ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ರಾಜ್ಯ ಸರಕಾರದ ಜತೆ ಮಾತುಕತೆ ನಡೆಸುವುದಾಗಿ ತಿಳಿಸಿದರು.

Write A Comment