ಕನ್ನಡ ವಾರ್ತೆಗಳು

ಚಿಕ್ಕಮಗಳೂರು: ಗೌರವ ಪ್ರಶಸ್ತಿ-2014, ಪುರಸ್ಕಾರ ಪ್ರಧಾನ ಮತ್ತು ಬ್ಯಾರೀ ಭಾಷಾ ಸಮ್ಮೇಳನ

Pinterest LinkedIn Tumblr

Chikka_Mlore_Beary_1

ಚಿಕ್ಕಮಗಳೂರು, ಜ.10: ಯಾವುದೇ ಅಕಾಡಮಿ ಒಂದು ಭಾಷೆ ಮತ್ತು ಜನಾಂಗಕ್ಕೆ ಮಾತ್ರ ಸೀಮಿತವಾಗಬಾರದು. ಅಂತಹ ಸೀಮೆಯನ್ನು ನಾವು ದಾಟಿ ಮೂಂದೆ ಸಾಗುವಂತಾಗಬೇಕು ಎಂದು ಮಾಜಿ ಉನ್ನತ ಶಿಕ್ಷಣ ಸಚಿವ ಬಿ.ಎ.ಮೊಹಿದ್ದೀನ್ ಹೇಳಿದರು.

ಅವರು ಶನಿವಾರ ನಗರದ ಒಕ್ಕಲಿಗರ ಸಭಾ ಭವನದಲ್ಲಿ ಕರ್ನಾಟಕ ಬ್ಯಾರೀ ಅಕಾಡಮಿ ಮತ್ತು ಜಿಲ್ಲಾ ಬ್ಯಾರಿಗಳ ಒಕ್ಕೂಟ ಹಮ್ಮಿಕೊಂಡಿದ್ದ ಗೌರವ ಪ್ರಶಸ್ತಿ-2014, ಪುರಸ್ಕಾರ ಪ್ರಧಾನ ಮತ್ತು ಬ್ಯಾರೀ ಭಾಷಾ ಸಮ್ಮೇಳನವನ್ನು ಉಧ್ಘಾಟಿಸಿ ಮಾತನಾಡುತ್ತಿದ್ದರು.

ಲಿಪಿ ಇಲ್ಲದ ಇಂಗ್ಲೀಷ್ ಭಾಷೆ ಜಗತ್ತನ್ನು ಆಳುತ್ತಿದೆ. ಬ್ಯಾರೀ ಭಾಷೆ ಕೇವಲ ಬ್ಯಾರಿಗಳಿಗಷ್ಟೆ ಸೀಮಿತವಲ್ಲ. ಈ ಭಾಷೆಯನ್ನು ನಾಡಿನ ಮಳೆಯಾಳಿ, ತುಳುವರು, ಬಿಲ್ಲವರು ಸೇರಿದಂತೆ ಬಹುತೇಕರು ಉಚ್ಚರಿಸುತ್ತಾರೆ. ಭಾಷಾಭಿಮಾನ, ಸಾಮರಸ್ಯದೊಂದಿಗೆ ಹೋರಾಟ ಮನೋಭಾವನೆಯಿಂದ ಮುಂದುವರಿಯಬೇಕು ಎಂದು ತಿಳಿಸಿದರು.

ಧರ್ಮ ನಮ್ಮ ನಂಬಿಕೆ ಮತ್ತು ಆಚರಣೆಯಾಗಿದೆ. ಆಚಾರ, ವಿಚಾರ, ಸಂಪ್ರದಾಯಗಳೊಂದಿಗೆ ಭಾಷೆ ಬೆಳವಣಿಗೆ ಕಾಣಬೇಕು. ಆದರೆ ಭಾಷೆ ಮತ್ತು ಸಂಸ್ಕೃತಿ ಎಲ್ಲೆ ಮೀರಬಾರದು. ಈ ಮಣ್ಣಿನಲ್ಲಿ ಬೆಳೆಯುತ್ತಿರುವ ಬ್ಯಾರೀ ಬಾಷಿಗರ ಬೆಳವಣಿಗೆ ನೋಡಿದರೆ ಹಿಂದಿಗಿಂತ ಉತ್ತಮವಾಗಿದೆ. ಒಬ್ಬರ ಕಷ್ಟವನ್ನು ಇನ್ನೊಬ್ಬರು ಅರಿತುಕೊಳ್ಳಬೇಕು ಎಂದ ಅವರು, ಭಾಷೆಯ ಬೆಳವಣಿಗಾಗಿ ಸರಕಾರ ಅಕಡಮಿ ಸ್ಥಾಪಿಸಿ ಅನುದಾನ ನೀಡುತ್ತಿದೆ. ಭಾಷೆಯು ಧಾರ್ಮಿಕತೆಯ ಪರಿಧಿಯನ್ನು ಮೀರಿ ಬೆಳೆವಣಿಗೆ ಕಾಣಬೇಕು ಎಂದು ನುಡಿದರು.

Chikka_Mlore_Beary_2 Chikka_Mlore_Beary_3 Chikka_Mlore_Beary_4

ಭಾಷೆ ಮತ್ತು ಸಾಹಿತ್ಯ ಇರುವುದು ಮಾನವೀಯ ಸಂಬಂಧಗಳಿಗೆ ಒತ್ತು ಕೊಡಲಿಕ್ಕಾಗಿದೆ. ಈ ದೇಶದ ಒಂದು ಜಾತಿ, ಜನಾಂಗ, ಅಥವಾ ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ. ಬಹು ಸಂಸ್ಕೃಯೊಂದಿಗೆ ಬೆಳೆಯುತ್ತಿರುವ ದೇಶ ಇದಾಗಿದೆ. ನಾವು ನಮ್ಮತನವನ್ನು ಮರೆಯದೇ ಎಲ್ಲಾ ಸಮುದಾಯದ ಜನರ ಒಡನಾಡಿಗಳಾಗಿ ಬದುಕಬೇಕು ಎಂದರು.

ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಯಾವುದೇ ಭಾಷೆಯ ಬಗ್ಗೆ ಅರ್ಥ ಗೊತ್ತಿಲ್ಲದಿದ್ದರೆ ಗೊಮದಲಗಳು ಮೂಡುತ್ತದೆ. ಗೊಂದಲಗಳಿಗೆ ಅವಕಾಶ ಕಲ್ಪಿಸದೇ ಬದಲಾವಣೆ ತಂದಾಗ ಸಾಮರಸ್ಯ ಮೂಡುತ್ತದೆ. ಯಾವುದೇ ಒಂದು ಜಾತಿಗೆ ಒಂದು ಸೀಮಿತ ಭಾಷೆಯನ್ನು ತಡೆಗೋಡೆ ಮಾಡಿಕೊಳ್ಳಬಾರದು. ಜಾತಿ, ಧರ್ಮ, ಭಾಷೆಯ ಮೂಲಕ ಸಮಾಜವನ್ನು ಒಂದುಗೂಡಿಸುವ ಪ್ರಯತ್ನ ಸಫಲವಾಗಬೇಕು ಎಂದು ಕರೆ ನಿಡಿದರು.

ಜಿಲ್ಲಾಧಿಕಾರಿ ಬಿ.ಎಸ್.ಶೇಖರಪ್ಪ ಮಾತನಾಡಿ, ಒಂದು ಸಮಾಜದಲ್ಲಿ ಭಾಷೆ, ಜನಾಂಗ, ಜಾತಿ, ಧರ್ಮ, ಪಂಗಡ, ಆಚಾರ, ವಿಚಾರಗಳು ಎಲ್ಲವೂ ಇರುತ್ತದೆ.ಜನರಿಗೆ ಭಾಷೆ ಮೇಲೆ ಪ್ರತಿ ಇರಬೇಕೆ ಹೊರತು ಮೋಹ ಇರಬಾರದು. ಯಾರಿಗೂ ಬಾಷಾಂಧತೆ ಬೇಡ. ಜಪಾನಿಯರು ತಮ್ಮ ಭಾಷೆಯಲ್ಲಿ ಜಗತ್ತನ್ನು ಆಳಿದರೂ ಮತಾಂದತೆ ತೋರಿಲ್ಲ. ಅವರಿಗೆ ಬಾಷಾಂಧತೆ ಇಲ್ಲದಿರುವುದರಿಂದ ಆ ಬಾಷೆಯನ್ನು ಇತರರು ಒಪ್ಪಿಕೊಳ್ಳುತ್ತಾರೆ. ಸಮಾಜದ ಸ್ವಾಸ್ಥ್ಯ ಕಾಪಾಡಲು ಪ್ರತಿ ಭಾಷಿಕರ ಕೊಡುಗೆ ಬೇಕಾಗಿದೆ ಎಂದು ತಿಳಿಸಿದರು.

ಕಾಂಗ್ರೇಸ್ ಮಾಜಿ ಜಿಲ್ಲಾದ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ, ಕಾಂಗ್ರೆಸ್ ಸರಕಾರ 60 ವರ್ಷ ಆಳ್ವಿಕೆ ನಡೆಸಿದರೂ ಬ್ಯಾರೀ ಅಕಾಡೆಮಿ ಸ್ಥಾಪಿಸಲಿಲ್ಲ. ಆದರೆ ಜೆಡಿ‌ಎಸ್ ಅವಧಿಯಲ್ಲಿ ಸಚಿವ ಮಹಾದೇವ ಪ್ರಸಾದ್ ಮೊಬೈಲ್ ಕರೆ ಮಾಡಿದ್ದಕ್ಕೆ ಸಕಾರಾತ್ಮಕವಾಗಿ ಸ್ಫಂಧಿಸಿದ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬ್ಯಾರೀ ಅಕಾಡಮಿ ಸ್ಥಾಪಿಸಲು ಘೋಷಿಸಿದ್ದು ಸಂತಸ ತಂದಿದೆ ಎಂದರು.

ಈ ಸಮಯದಲ್ಲಿ ಅಕಾಡಮಿ ಅಧ್ಯಕ್ಷ ಬಿ.ಎ.ಮೊಹಮ್ಮದ್ ಹನೀಪ್ ಪ್ರಸ್ತಾವಿಕವಾಗಿ ಮಾತನಾಡಿದರು. ಬ್ಯಾರೀ ಒಕ್ಕೂಟದ ಅಧ್ಯಕ್ಷ ಕೆ.ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಅಶ್ರಫ್ ಅಪೋಲೋ ತಂಡ ಬ್ಯಾರೀ ಧ್ಯೇಯ ಗೀತೆ ಹಾಡಿದರು. ಅಕಾಡಮಿ ರಿಜೀಸ್ಟ್ರಾರ್ ಉಮ್ಮರಬ್ಬ ಸ್ವಾಗತಿಸಿದರು. ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು ನಿರ್ವಹಣೆ ಮಾಡಿದರೆ, ಶ್ರೀಮತಿ ಝೋಹರಾ ಅಬ್ಬಾಸ್ ವಂದಿಸಿದರು.

Chikka_Mlore_Beary_5 Chikka_Mlore_Beary_6

ವೇದಿಕೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಂಜೀವ್ ಪಾಟೀಲ್, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಡಾ. ಡಿ.ಎಲ್.ವಿಜಯಕುಮಾರ್, ಜೆಡಿ‌ಎಸ್‌ನ ಎಚ್.ಎಚ್.ದೇವರಾಜ್, ಜಿ.ಪಂ.ಅಧ್ಯಕ್ಷೆ ಭಾಗ್ಯ ರಂಗನಾಥ್, ತಾ.ಪಂ.ಅಧ್ಯಕ್ಷೆ ಮೀನಾಕ್ಷಿ ಧರ್ಮಯ್ಯ, ಬಿ‌ಎಸ್‌ಪಿ ಮುಖಂಡ ಕೆ.ಟಿ.ರಾಧಾಕೃಷ್ಣ, ಅಂಜುಮಾನ್ ಇಸ್ಲಾಮಿಯಾ ಅಧ್ಯಕ್ಷ ನಝೀರ್ ಅಹಮ್ಮದ್, ತಾಲೂಕು ಬ್ಯಾರೀ ಒಕ್ಕೂಟದ ಅಧ್ಯಕ್ಷ ಬಿ‌ಎಸ್.ಮುಹಮ್ಮದ್, ಅಖಿಲಭಾರತ ಬ್ಯಾರೀ ಪರಿಷತ್ ಅಧ್ಯಕ್ಷ ಅಬ್ದುಲ್ ಅಝೀಝ್ ಬೈಕಂಪಾಡಿ, ಜಾಕೀರ್ ಹುಸೈನ್ ಹೊರಟ್ಟಿ, ರಹೀಮ್ ಉಚ್ಚೀಲ್, ಸಿ.ಕೆ.ಇಬ್ರಾಹೀಂ, ಕಿರುಗುಂದ ಅಬ್ಬಾಸ್, ಅಕ್ರಂ ಹಾಜಿ, ಮೊಹಮ್ಮದ್ ಬದ್ರಿಯಾ ಕೊಪ್ಪ, ಕೆ.ಎ.ಅಬೂಬಕ್ಕರ್, ಇಬ್ರಾಹೀಂ, ಹಾಜಿ ಉಮರ್ ಮತ್ತಿತರರಿದ್ದರು.

Write A Comment