ಕನ್ನಡ ವಾರ್ತೆಗಳು

ನಿದ್ದೆಯಲ್ಲಿರುವ ರಾಜ್ಯ ಸರಕಾರ ರೈತರಿಗೆ ಅನ್ಯಾಯ ಮಾಡ್ತಿದೆ; ಡ್ರೀಮ್ಡ್ ಫಾರೆಸ್ಟ್ ವಿರುದ್ಧ ಬೈಂದೂರಿನಲ್ಲಿ ಬೃಹತ್ ಪ್ರತಿಭಟನೆ

Pinterest LinkedIn Tumblr

ಕುಂದಾಪುರ: ಕಳೆದ ಎರಡು ತಿಂಗಳ ಹಿಂದೆ ಡ್ರೀಮ್ಡ್ ಫಾರೆಸ್ಟ್ ಸರಳೀಕರಣಗೊಳಿಸಿ, ಅದರ ವ್ಯಾಪ್ತಿಯಲ್ಲಿರುವ ರೈತರ ಭೂಮಿಯನ್ನು ವಿಲೇವಾರಿ ಮಾಡುವ ಬಗ್ಗೆ ಸರ್ಕಾರ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿತು. ಆದರೆ ಆ ಸಮಿತಿ ಇದೂವರೆಗೂ ಒಂದೇ ಒಂದು ರೈತರ ಕಡೆತ ವಿಲೇವಾರಿ ಮಾಡದೇ ರೈತರಿಗೆ ಅನ್ಯಾಯವೆಸಗಿದೆ. ರಾಜ್ಯ ಸರ್ಕಾರ ನಿದ್ರಾವಸ್ಥೆಯಲ್ಲಿದ್ದು, ಅದು ಕಸ್ತೂರಿರಂಗನ್ ವರದಿ, ಡ್ರೀಮ್ಡ್ ಫಾರೆಸ್ಟ್ ಹೆಸರಿನಲ್ಲಿ ರೈತರಿಗೆ ಮರಣ ಶಾಸನ ಬರೆಯಲು ಹೊರಟಿದೆ ಎಂದು ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ದೀಪಕ್ ಕುಮಾರ ಶೆಟ್ಟಿ ಆರೋಪಿಸಿದರು.

Deemd_Forest_Protest (3) Deemd_Forest_Protest Deemd_Forest_Protest (1) Deemd_Forest_Protest (2)

ಜನವಸತಿ ಪ್ರದೇಶವನ್ನು ಡ್ರೀಮ್ಡ್ ಫಾರೆಸ್ಟ್‌ಗೆ ಸೇರಿಸುವ ಸರ್ಕಾರದ ವಿರುದ್ಧ ಖಂಡಿಸಿ ರೈತ ಸಂಘದ ನೇತೃತ್ವದಲ್ಲಿ ಬೈಂದೂರು ವಿಶೇಷ ತಹಶೀಲ್ದಾರ ಕಛೇರಿ ಆವರಣದಲ್ಲಿ ನಡೆದ ಬೃಹತ್ ಆಹೋರಾತ್ರಿ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದ ಅವರು, ಪಶ್ಚಿಮ ಘಟ್ಟದ ತಪ್ಪಲಿನ ಜನರು ಡ್ರೀಮ್ಡ್ ಫಾರೆಸ್ಟ್‌ನಿಂದಾಗಿ ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದಾರೆ, ಅಲ್ಲದೇ ಅಕ್ರಮ ಸಕ್ರಮಗಳಿಂದ ರೈತರ ಭೂಮಿ ವಿಲೇವಾರಿ ಆಗುತ್ತಿಲ್ಲ. ಇದನ್ನು ಸರಳಿಕರಣಗೊಳಿಸಿ ರೈತರಿಗೆ ನ್ಯಾಯ ಒದಗಿಸಬೇಕೆಂದು ಹಲವು ಬಾರಿ ಮನವಿ ಮಾಡಿದರೂ, ಸಮಸ್ಯೆ ಬಗೆಹರಿಸಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ಇಂತಹ ಸರ್ಕಾದಿಂದ ರೈತರಿಗೆ ಅನ್ಯಾಯವಾಗಿದೆ, ಸರ್ಕಾರ ಡ್ರೀಮ್ಡ್ ಫಾರೆಸ್ಟ್ ಹೆಸರಿನಲ್ಲಿ ಸಾವಿರಾರು ವರ್ಷಗಳಿಂದ ನೆಲೆಸಿರುವ ಪಶ್ಚಿಮ ಘಟ್ಟದ ತಪ್ಪಲಿನ ಜನರನ್ನು ಒಕ್ಕಲೆಬ್ಬಿಸಿ ಅವರ ಭೂಮಿ ಮುಟ್ಟುಗೋಲು ಹಾಕುವ ಹುನ್ನಾರ ನಡೆಸುತ್ತಿದೆ ರೈತರ ಹಿತಕ್ಕಾಗಿ ಜೈಲಿಗೆ ಹೋಗಲು ಸಿದ್ದ ಎಂದು ಗುಡುಗಿದರು.

ಭೂಕಬಳಿಸಿದವರೇ ರೈತರ ಪರ ಹೋರಾಟ: ವಿಶೇಷ ತಹಶೀಲ್ದಾರರ ಕಛೇರಿಯ ಎದುರುಗಡೆ ಪ್ರತಿಭಟನೆ ನಡೆಸುವುದು ಒಂದೆಡೆ ರೈತರ ವಾಸ್ತವಿಕ ಸಮಸ್ಯೆಯಾದರೆ, ಇನ್ನೊಂದೆಡೆ ಪ್ರತಿಭಟನೆಯಲ್ಲಿ ಭಾಗವಹಿಸಿದ ಕೆಲವು ಧುರೀಣರು ಮಾತ್ರ ಹತ್ತಾರು ಎಕರೆ ಸರಕಾರಿ ಭೂಮಿ ಹಾಗೂ ರೈತರ ಭೂಮಿಯನ್ನು ಕಬಳಿಸಿರುವುದು ಅವರ ನೈತಿಕತೆಯನ್ನು ಪ್ರಶ್ನಿಸುವ ಹಾಗಿದೆ.

ಯಡ್ತರೆ ಗ್ರಾಮದಲ್ಲಿ ನಕಲಿ ದಾಖಲೆ ಸೃಷ್ಟಿಸಿ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿನೀಡಿ 4.36 ಎಕ್ರೆ ಜಾಗ ಒತ್ತುವರಿ ಮಾಡಿರುವ ಪ್ರಕರಣ ನ್ಯಾಯಾಲಯದಲ್ಲಿ ತನಿಖಾ ಹಂತದಲ್ಲಿದೆ. ಇದಲ್ಲದೇ ಗಂಗಾನಾಡು, ಬೈಂದೂರು, ಯಡ್ತರೆ, ಉಪ್ಪುಂದ ಮತ್ತು ತಗ್ಗರ್ಸೆಗಳಲ್ಲಿ ನೂರಾರು ಎಕರೆ ರೈತರ ಭೂಮಿಯನ್ನು ವ್ಯವಹಾರದ (ರಿಯಲ್ ಎಸ್ಟೇಟ್) ಉದ್ದೇಶಕ್ಕೆ ಕಬಳಿಸುವ ನಾಯಕರು ರೈತರ ಕುಮ್ಕಿ ಹಕ್ಕಿಗೆ ಯಾವ ನ್ಯಾಯ ನೀಡಿಯಾರು ಎಂಬ ಪ್ರಶ್ನೆ ಅಲ್ಲಿ ಸೇರಿದವರಲ್ಲಿ ಮೂಡಿದ್ದಂತೂ ಸತ್ಯ.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಗುರುರಾಜ ಶೆಟ್ಟಿ, ಕಾರ್ಯದರ್ಶಿ ಬಿ.ಎಸ್ ಸುರೇಶ ಶೆಟ್ಟಿ, ಜಿಪಂ ಸದಸ್ಯ ಕೆ.ಬಾಬು ಶೆಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ.ಎಂ.ಸುಕುಮಾರ್ ಶೆಟ್ಟಿ, ಕಾರ್ಯದರ್ಶಿ ಸದಾಶಿವ ಪಡುವರಿ, ಹಿಂದುಳಿದ ವರ್ಗಗಳ ಮೋರ್ಚಾ ಕ್ಷೇತ್ರಾಧ್ಯಕ್ಷ ಆನಂದ ಖಾರ್ವಿ, ಬೈಂದೂರು ಗ್ರಾಪಂ ಮಾಜಿ ಉಪಾಧ್ಯಕ್ಷ ವೆಂಕಟ ಪೂಜಾರಿ, ಯಡ್ತರೆ ಗ್ರಾಪಂ ಸದಸ್ಯ ಶಂಕರ ದೇವಾಡಿಗ, ಮುಖಂಡರಾದ ಕೆ.ಸೋಮಶೇಖರ ಶೆಟ್ಟಿ, ಎಂ.ಆರ್.ಶೆಟ್ಟಿ, ಬಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು.

ಶಾಲು ಧರಿಸಿದ ಸುಮಾರು 5೦೦ಕ್ಕೂ ಮಿಕ್ಕಿ ರೈತರು ಬೈಂದೂರು ಪ್ರಧಾನ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಸಾಗಿಬಂದು ವಿಶೇಷ ತಹಶೀಲ್ದಾರರ ಕಛೇರಿ ಎದುರು ಧರಣಿ ಕುಳಿತರು. ಉಪ‌ಅರಣ್ಯ ಸಂರಕ್ಷಾಧಿಕಾರಿಗಳು ಹಾಗೂ ತಹಶೀಲ್ದಾರ ಸ್ಥಳಕ್ಕೆ ಭೇಟಿನೀಡಿ ಮನವಿ ಸ್ವೀಕರಿಸುವವರೆಗೂ ಇಲ್ಲಿಂದ ಯಾರೂ ಕದಲುವುದಿಲ್ಲ. ಇಲ್ಲಿಗೆ ಬರದಿದ್ದರೆ ವಲಯ ಅರಣ್ಯಾಧಿಕಾರಿಗಳ ಕಛೇರಿಗೆ ಬೀಗ ಜಡಿದು ಆಹೋರಾತ್ರಿ ಪತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

Write A Comment