ಕನ್ನಡ ವಾರ್ತೆಗಳು

ಸೂರಿಂಜೆ : ಅಪರಿಚಿತ ದುಷ್ಕರ್ಮಿಗಳಿಂದ ಗ್ಯಾರೇಜ್ ಮಾಲಕರ ಕೊಚ್ಚಿ ಕೊಲೆ

Pinterest LinkedIn Tumblr

surnje_murder_case

ಮಂಗಳೂರು / ಸುರತ್ಕಲ್‌,ಜ.06: ಅಪರಿಚಿತ ದುಷ್ಕರ್ಮಿಗಳು ಗ್ಯಾರೇಜ್‌ ಮಾಲಿಕರೊಬ್ಬರನ್ನು ಮಾರಾಕಾಯುಧಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದ ಘಟನೆ ಮಂಗಳವಾರ ಮುಂಜಾನೆ ಸುರತ್ಕಲ್ ಸಮೀಪದ ಸೂರಿಂಜೆಯ ಕೋಟೆ ಮೈದಾನದಲ್ಲಿ ನಡೆದಿದೆ.

Keshava_Shetty_Murder

ದುಷ್ಕರ್ಮಿಗಳಿಂದ ಹತ್ಯೆಗೀಡಾದ ವ್ಯಕ್ತಿಯನ್ನು ಸುರತ್ಕಲ್‌ನ ಹೊಸಬೆಟ್ಟುವಿನ ಕಾರ್‌ಲೈನ್ ಗ್ಯಾರೇಜ್‌ ಮಾಲಕ ಕೇಶವ ಶೆಟ್ಟಿ(35) ಎಂದು ಗುರುತಿಸಲಾಗಿದೆ.

surnje_murder_case_1

ಕೇಶವ ಶೆಟ್ಟಿ ಅವರು ಇಂದು ಬೆಳಗ್ಗೆ ಎಂದಿನಂತೆ ಶೆಟಲ್‌ ಕೊಕ್‌ ಆಡಲೆಂದು ಕೋಟೆ ಮೈದಾನಕ್ಕೆ ಬಂದಿದ್ದ ವೇಳೆ ಮುಖಕ್ಕೆ ಮಾಸ್ಕ್ ಧರಿಸಿದ ಸುಮಾರು ನಾಲ್ಕು ಮಂದಿ ದುಷ್ಕರ್ಮಿಗಳು ಮೈದಾನಕ್ಕೆ ಆಗಮಿಸಿ ಕೇಶವ ಶೆಟ್ಟಿ ಅವರನ್ನು ಮಾರಾಕಾಯುಧಗಳಿಂದ ಕೊಚ್ಚಿ ಹತ್ಯೆಗೈದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

surnje_murder_case_3 surnje_murder_case_4 surnje_murder_case_5 surnje_murder_case_6 surnje_murder_case_7

ಬಿಜೆಪಿಯ ಸಕ್ರೀಯ ಸದಸ್ಯರಾಗಿರುವ ಕೇಶವ್‌ ಶೆಟ್ಟಿಯವರು ಗಾಂಜಾ ಮಾಫಿಯಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೆ ಈ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಸುರತ್ಕಲ್‌ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ಮಾಹಿತಿ ತನಿಖೆಯಿಂದ ಇನ್ನಷ್ಟೇ ತಿಳಿದು ಬರಬೇಕಿದೆ.

ಹೆಚ್ಚಿನ ವಿವರ :

ಮಂಗಳೂರು: ಸುರತ್ಕಲ್ ಸಮೀಪದ ಸೂರಿಂಜೆಯ ಕೋಟೆ ಎಂಬಲ್ಲಿ ಮಂಗಳವಾರ ಮುಂಜಾನೆ ಗ್ಯಾರೇಜ್ ಮಾಲಕ ನನ್ನು ಕೊಚ್ಚಿ ಕೊಲೆ ಮಾಡಲು ಗಾಂಜಾ ಮಾರಾಟಗಾರರ ವಿರುದ್ಧ ನೀಡಿದ್ದ ದೂರು ಕಾರಣವೆಂದು ತಿಳಿದುಬಂದಿದೆ.

ಗ್ಯಾರೇಜ್ ಮಾಲಕ ಕೇಶವ್ ಶೆಟ್ಟಿಯವರ ಕೊಲೆ ಪ್ರಕರಣದಲ್ಲಿ ಕೋಟೆ ನಿವಾಸಿ ಸತೀಶ್ ಯಾನೇ ಸಚ್ಚು ಮತ್ತು ಲತೀಶ್ ಸೇರಿದಂತೆ ಒಟ್ಟು ನಾಲ್ವರನ್ನು ಆರೋಪಿಗಳೆಂದು ಗುರುತಿಸಲಾಗಿದೆ. ಉಳಿದಿಬ್ಬರ ಹೆಸರನ್ನು ತನಿಖೆಯ ದೃಷ್ಟಿಯಿಂದ ಪೊಲೀಸರು ಗೌಪ್ಯವಾಗಿರಿಸಿದ್ದಾರೆ.

ಸತೀಶ್ ಮತ್ತು ಲತೀಶ್ ಈ ಹಿಂದೆ ಬಿಜೈನಲ್ಲಿ ನಡೆದಿದ್ದ ಬಿಲ್ಡರ್ ಒಬ್ಬರ ಶೂಟೌಟ್ ನಲ್ಲೂ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸತೀಶ್ ಸ್ಥಳೀಯ ಗಾಂಜಾ ಗ್ಯಾಂಗಿನಲ್ಲಿ ಗುರುತಿಸಿಕೊಂಡಿದ್ದು, ಆತನ ಕೃತ್ಯದ ವಿರುದ್ಧ ಕೇಶವ್ ಶೆಟ್ಟಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ನೆರೆಮನೆಯವರಾಗಿದ್ದ ಕೇಶವ್ ತನ್ನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರಿಂದ ಸತೀಶ್, ಕೇಶವ ಶೆಟ್ಟಿ ವಿರುದ್ಧ ಕತ್ತಿಮಸೆಯುತ್ತಿದ್ದ. ಇದನ್ನೇ ಕಾರಣವಾಗಿಟ್ಟುಕೊಂಡು ಕಳೆದ ಆಗಸ್ಟ್ ನಲ್ಲಿ ಕೇಶವ್ ಅವರಲ್ಲಿ 15 ಸಾವಿರ ರೂ. ನೀಡಬೇಕೆಂದು ಬೇಡಿಕೆಯ ನ್ನಿಟ್ಟಿದ್ದ. ಆದರೆ ಕೇಶವ್ ಅವರು ಹಣ ನೀಡಲು ನಿರಾಕರಿಸಿದಾಗ ಸಂತೋಷ್ ಜೀವಬೆದರಿಕೆಯೊಡ್ಡಿದ್ದ. ಈ ಬಗ್ಗೆ ಕೇಶವ್ ಅವರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಸಂತೋಷ್‍ನನ್ನು ಬಂಧಿಸಿ ಜೈಲಿಗಟ್ಟಿದ್ದರು. ಜೈಲಿನಿಂದ ಹೊರಬಂದ ಸಂತೋಷ್ ಸೇಡು ತೀರಿಸಿಕೊಳ್ಳಲು ಕೇಶವ್ ಕೊಲೆಗೆ ಸ್ಕೆಚ್ ಹಾಕಿ ಅದಕ್ಕೊಂದು ಅಂತ್ಯ ನೀಡಿದ್ದಾನೆ.

ನೆರೆಮನೆಯವರಾಗಿದ್ದ ಕೇಶವ್ ಅವರ ಚಲನವಲನದ ಬಗ್ಗೆ ಚೆನ್ನಾಗಿ ತಿಳಿದಿದ್ದ ಸಂತೋಷ್, ಇತರ ಮೂವ ರೊಂದಿಗೆ ಸೇರಿಕೊಂಡು ಮಂಗಳವಾರ ಮುಂಜಾನೆ ಶಟಲ್ ಆಡಲು ಮೈದಾನಕ್ಕೆ ತೆರಳಿದ್ದ ಕೇಶವ್ ಅವರನ್ನು ತಲವಾರಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಶಟಲ್ ಆಡಲು ಬರುತ್ತಿದ್ದ ಮಿತ್ರರಿಗಾಗಿ ಕಾಯುತ್ತಿದ್ದ ವೇಳೆ ಕೇಶವ್ ಅವರ ಮೇಲೆ ದಾಳಿ ಮಾಡಿ ಕೊಲೆ ಮಾಡಲಾಗಿದೆ. ತಲವಾರಿನ ಏಟಿಗೆ ಕೇಶವ್ ನೆಲಕ್ಕುರುಳಿದ್ದು, ಸ್ಥಳದಲ್ಲೇ ಸಾವನ್ನಪ್ಪಿ ದ್ದಾರೆ. ಆರೋಪಿಗಳಾದ ಸಂತೋಷ್ ಯಾನೆ ಸಚ್ಚು ಮತ್ತು ಲತೀಶ್‍ಗೆ ಭೂಗತ ಜಗತ್ತಿನಲ್ಲಿ ಡಾನ್ ಆಗಬೇಕೆಂಬ ಹುಚ್ಚು ಕನಸಿತ್ತು ಎಂದು ಆತನ ಬಗ್ಗೆ ಬಲ್ಲವರು ಹೇಳಿದ್ದಾರೆ. ಇದನ್ನೇ ಮುಂದಿಟ್ಟು ಕೊಂಡು ಕೇಶವ ಶೆಟ್ಟಿ ವಿರುದ್ಧ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡುತ್ತಿದ್ದ. ಸ್ಥಳೀಯವಾಗಿ ಗಾಂಜಾ ಸೇವಿಸಿ ಕೊಂಡು ಸ್ಥಳೀಯರಿಗೆ ತೊಂದರೆ ಕೊಡುತ್ತಿದ್ದ. ಇದೇ ಗಾಂಜಾದ ಅಮಲಿನಲ್ಲಿ ಕೇಶವ ಶೆಟ್ಟಿ ಹತ್ಯೆಗೆ ಸ್ಕೆಚ್ ರೂಪಿಸಿದ್ದಾನೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಹೊಸಬೆಟ್ಟಿನಲ್ಲಿ ಕಾರ್‍ಲೈನ್ ಹೆಸರಿನ ಕಾರು ದುರಸ್ತಿ ಕೇಂದ್ರ ನಡೆಸುತ್ತಿದ್ದ ಕೇಶವ ಶೆಟ್ಟಿ, ಕಳೆದ ವರ್ಷ ಫೆಬ್ರುವರಿಯ 20ರಂದು ಎಕ್ಕಾರು ಕೈಪುಂಜದ ಚಂದ್ರ ಶೇಖರ ಶೆಟ್ಟಿ ಹಾಗೂ ವಿಶಾಲಾಕ್ಷಿ ಶೆಟ್ಟಿಯವರ ಪುತ್ರಿಯನ್ನು ವಿವಾಹವಾಗಿದ್ದರು. ಬಿಜೆಪಿ ಕ್ಷೇತ್ರ ಸಮಿತಿ ಸದಸ್ಯರಾಗಿದ್ದ ಇವರು ಸುರತ್ಕಲ್ ರೋಟರಿ ಕ್ಲಬ್‍ನ ಸಕ್ರಿಯರಾಗಿದ್ದರು. ಸಾಮಾಜಿಕ ಮತ್ತು ಧಾರ್ಮಿಕ ಸೇವಾ ಸಂಸ್ಥೆಗಳಲ್ಲೂ ಗುರುತಿಸಿಕೊಂಡಿದ್ದರು.

ಅಪರಾಧದಲ್ಲಿ ಪರಿಣಿತರು:

ಕೊಲೆ ಆರೋಪಿಗಳೆಂದು ಗುರುತಿಸಲಾದ ಸಚ್ಚು ಯಾನೆ ಸತೀಶ್ ಹಾಗೂ ಲತೀಶ್ ಅಪರಾಧ ಹಿನ್ನೆಲೆ ಹೊಂದಿದವರೇ ಆಗಿದ್ದಾರೆ. ಅವರ ವಿರುದ್ಧ ವಿವಿಧ ಪ್ರಕರಣಗಳೂ ದಾಖಲಾಗಿವೆ. ಅವರು ಮಣಿಕಂಠ ಕೊಲೆ ಪ್ರಕರಣ, ಬಿಜೈಯಲ್ಲಿ ಬಿಲ್ಡರ್‍ನ ಶೂಟೌಟ್ ಪ್ರಕರಣ, ಮಡಿಕೇರಿ ಜೈಲಿನಲ್ಲಿ ವ್ಯಕ್ತಿಯೊಬ್ಬರ ಹತ್ಯೆಗೆ ವಿಫಲ ಯತ್ನ, ಸೂರಿಂಜೆ ಕೋಟೆ ಮಸೀದಿಯ ಅರ್ಧಚಂದ್ರ ಕಳವು ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಒಂದು ಮೂಲದ ಪ್ರಕಾರ ಕೇಶವರಿಗಾಗಿಯೂ ಇವರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಬೆದರಿಕೆ : ಕೊಲೆ ಪ್ರಕರಣ ನಡೆದ ಸಂದರ್ಭ ಕೇಶವ ಶೆಟ್ಟರ ಜೊತೆಯಲ್ಲೇ ಇದ್ದು ಶೆಟಲ್ ಆಡುತ್ತಿದ್ದ ಸಂಪತ್ ಎಂಬವರಿಗೂ ಸತೀಶ, ಲತೀಶ್ ಕೊಲೆ ಬೆದರಿಕೆ ಒಡ್ಡಿ ಹೋಗಿದ್ದಾರೆ. ನಾಲ್ವರು ಕೈಯಲ್ಲಿ ತಲವಾರು ಹಿಡಿದುಕೊಂಡು ಬರುತ್ತಿರುವುದನ್ನು ಕಂಡ ಕೇಶವ ಶೆಟ್ಟಿ ಮೈದಾನದ ಹಿಂಬದಿ ಗಿಡಮರಗಳ ಕಡೆಗೆ ಓಡಿದ್ದರು. ಆರೋಪಿಗಳು ಅವರನ್ನು ಬೆನ್ನಟ್ಟಿ ಅವರ ಮುಖ, ತಲೆ, ಶರೀರಕ್ಕೆ ತೀವ್ರ ತರಹ ಕಡಿದ ಪರಿಣಾಮ ಕೇಶವ ಶೆಟ್ಟಿ ಕುಸಿದು ಬಿದ್ದು ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಸತೀಶ, ಲತೀಶ್ ನಿನ್ನನ್ನು ಕೂಡ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಸಂಪತ್‍ರವರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ..

ರಸ್ತೆ ಮಧ್ಯೆ ಮೃತದೇಹವಿಟ್ಟು ಪ್ರತಿಭಟನೆ

Surinje_Murder_Protest

ಸುರತ್ಕಲ್  ಠಾಣಾ ವ್ಯಾಪ್ತಿಯ ಮಧ್ಯಪದವು, ಕಾಟಿಪಳ್ಳ, ಸೂರಿಂಜೆ, ಕೃಷ್ಣಾಪುರ, ಬಾಳದಲ್ಲಿ ಗಾಂಜಾ ಗ್ಯಾಂಗ್ ವ್ಯಾಪಕವಾಗಿ ತಲೆ ಎತ್ತಿದ್ದು ಹೈಸ್ಕೂಲ್ ವಿದ್ಯಾರ್ಥಿಗಳಿಗೂ ಗಾಂಜಾ ಸರಬರಾಜು ಮಾಡುವ ಜಾಲವೇ ಬೆಳೆದಿದೆ. ಆದರೆ ಪೊಲೀ ಸರು ಮಾತ್ರ ಜಾಣ ಕುರುಡು ಪ್ರದರ್ಶಿ ಸುತ್ತಿರುವ ಕಾರಣ ಸಾಲು ಸಾಲು ಹತ್ಯೆಗಳು ನಡೆಯುತ್ತಿವೆ. ಸಾಧ್ಯವಾದರೆ ಇಂಥವರನ್ನು ಮಟ್ಟ ಹಾಕಿ ಇಲ್ಲವಾದರೆ ನಮಗೆ ಕೊಡಿ ಎಂದು ದ.ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಉಮಾನಾಥ ಎ.ಕೋಟ್ಯಾನ್ ಪೋಲಿಸ್ ಇಲಾಖೆ ವಿರುದ್ದ ಕಿಡಿಕಾರಿದರು.

ಹಿಂದೂ ಸಂಘಟನೆಯ ಸಕ್ರಿಯ ಕಾರ್ಯಕರ್ತ, ಕಾರ್‍ಲೈನ್ ಗ್ಯಾರೇಜ್ ಮಾಲಕ ಕೇಶವ ಶೆಟ್ಟಿ ಹತ್ಯೆಯ ಹಿಂದೆ ಗಾಂಜಾ ಗ್ಯಾಂಗ್ ಕೈವಾಡ ಇದೆ ಎಂದು ಆರೋಪಿಸಿ ಸೂರಿಂಜೆ ಗ್ರಾಮಸ್ಥರು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡುತ್ತಾ ಅವರು ಈ ವಿಚಾರ ಪ್ರಸ್ತಾಪಿಸಿದ್ದಾರೆ. ಕೇಶವ್ ಶೆಟ್ಟಿ ಮೃತದೇಹವನ್ನು ಸೂರಿಂಜೆ ಕೋಟೆ ಮೈದಾನದ ಸಮೀಪ ನಡುರಸ್ತೆಯಲ್ಲಿ ಇರಿಸಿ ಪೊಲೀಸ್ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ಸೂರಿಂಜೆ ಗ್ರಾಮ ಸಹಿತ ಸ್ಥಳೀಯ ಗ್ರಾಮದ ಎಲ್ಲಾ ಸಮುದಾಯದ ಜನರೂ ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದು ಗಾಂಜಾ, ಆಫೀಮು, ಚರಸ್ ಮಾರಾಟಗಾರರ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದರು.

ಜಿಲ್ಲೆಗೆ ಯಾರು ಗಾಂಜಾ ಪೂರೈಕೆ ಮಾಡು ತ್ತಾರೆ, ಯಾರೆಲ್ಲ ಈ ಜಾಲದಲ್ಲಿದ್ದಾರೆ? ಸುರತ್ಕಲ್ ಪ್ರದೇಶದಲ್ಲಿ ಗಾಂಜಾ ವ್ಯವಹಾರ ನಡೆಸುತ್ತಿರುವವರು ಯಾರು? ಎನ್ನುವ ಎಲ್ಲಾ ಮಾಹಿತಿ ಪೊಲೀ ಸರಲ್ಲಿದೆ. ಆದರೆ ಪೊಲೀಸರೂ ಇದರಲ್ಲಿ ಶಾಮೀಲಾಗಿ ಆರೋಪಿಗಳಿಗೆ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿಯೇ ಈವರೆಗೆ ಈ ಜಾಲವನ್ನು ಭೇದಿಸಲು ಸಾಧ್ಯವಾಗಿಲ್ಲ ಎಂದು ಪ್ರತಿಭಟನಾಕಾ ರರು ತಿಳಿಸಿದರು. ಪೊಲೀಸರೇ ಹಿಡಿ ಯುವುದಾದರೆ ಹಿಡಿಯಿರಿ, ಗಾಂಜಾ ಜಾಲಕ್ಕೆ ಅಂಕುಶ ಹಾಕುವುದಾದರೆ ಹಾಕಿ. ಇಲ್ಲವಾದರೆ ನಾವು ಅಂಕುಶ ಹಾಕುತ್ತೇವೆ ಎಂದ ಪ್ರತಿಭಟನಾಕಾರರು ಇಲಾಖೆ ವಿರುದ್ಧ ಘೋಷಣೆ ಕೂಗಿದರು.

ಭಾರತ ದೇಶಕ್ಕೆ ಪಾಕಿಸ್ತಾನಕ್ಕಿಂತ ಬಲು ಅಪಾಯಕಾರಿಯಾಗಿರುವುದು ಡ್ರಗ್ಸ್ ಮಾಫಿಯಾ. ಹೀಗಾಗಿ ಭಾರತವನ್ನು ಡ್ರಗ್ಸ್ ಮುಕ್ತ ದೇಶವನ್ನಾಗಿ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಸುರತ್ಕಲ್ ಪ್ರದೇಶದಲ್ಲಿ ಕ್ಯಾನ್ಸರ್‍ನಂತೆ ಬೆಳೆಯುತ್ತಿದ್ದ ಗಾಂಜಾ ಅಡ್ಡೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಕಾರಣಕ್ಕೆ ಮತ್ತು ಹಫ್ತಾ ನೀಡಿಲ್ಲ ಎನ್ನುವ ಕಾರಣಕ್ಕೆ ಬೆಳ್ಳಂಬೆಳಗ್ಗೆ ಒಂದು ಹತ್ಯೆ ನಡೆದು ಹೋಗಿದೆ, ಸಮಾಜದ ಬಗ್ಗೆ ಕಾಳಜಿ ಇದ್ದ ಕಾರಣದಿಂದ ಕೇಶವ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಯಾರೊಬ್ಬ ಆರೋಪಿಯನ್ನು ಹಿಡಿಯಲು ಇಲಾಖೆಗೆ ಸಾಧ್ಯವಾಗಿಲ್ಲ. ಈ ಕಾರಣದಿಂದಲೇ ಕೇಶವ್ ಹತ್ಯೆ ನಡೆದಿದೆ ಎಂದು ಹಿಂದೂ ಸಂಘಟನೆ ವಕ್ತಾರ ಸತ್ಯಜಿತ್ ಸುರತ್ಕಲ್ ತಿಳಿಸಿದರು.

ಮಂಗಳೂರಿನಲ್ಲಿ ಸಾಲು ಸಾಲು ಕ್ರೈಂ ನಡೆಯುತ್ತಿದೆ, ಹೆಣ ಉರುಳುತ್ತಿದೆ, ಗಾಂಜಾ ಅಡ್ಡೆ ಬೆಳೆಯುತ್ತಿದೆ. ಆದರೆ ಆರೋಪಿಗಳು ಮಾತ್ರ ಪೊಲೀಸರಿಗೆ ಸಿಗುತ್ತಿಲ್ಲ ಹೀಗಿರುವಾಗ ಇಂತಹ ಇಲಾಖೆ ನಮಗೆ ಬೇಕೇ ಎಂದು ಸತ್ಯಜಿತ್ ಪ್ರಶ್ನಿಸಿದರು.

ಗಾಂಜಾ : ಗೂಂಡಾ ಕಾಯ್ಡೆಯಡಿ ಬಂಧಿಸಲು ಕ್ರಮ

ಗಾಂಜಾ ಮಾರಾಟ ಮಾಡುವವರ ವಿರುದ್ಧ ಗೂಂಡಾ ಕಾಯ್ಡೆಯಡಿ ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸುರತ್ಕಲ್ ಠಾಣಾಧಿಕಾರಿ ಎಂ.ಎ.ನಟರಾಜ್ ತಿಳಿಸಿದರು.

ಪಣಂಬೂರು ಎಸಿಪಿ ರವಿಕುಮಾರ್, ಪಣಂಬೂರು ಠಾಣಾಧಿಕಾರಿ ಲೋಕೇಶ್, ಸುರತ್ಕಲ್ ಉಪಠಾಣಾಧಿಕಾರಿರವಿಶಂಕರ್, ಕುಮಾರೇಶ್ ಉಪಸ್ಥಿತರಿದ್ದರು. ಮೂಡಬಿದಿರೆ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸುಚರಿತ ಶೆಟ್ಟಿ, ಮಹಾಬಲ ಪೂಜಾರಿ ಕಡಂಬೋಡಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ, ಕಸ್ತೂರಿ ಪಂಜ, ಜಿ.ಪಂ. ಸದಸ್ಯ ಈಶ್ವರ ಕಟೀಲು, ಭುವನಾಭಿರಾಮ ಉಡುಪ, ಅದರ್ಶ್ ಶೆಟ್ಟಿ ಎಕ್ಕಾರ್, ಸತೀಶ್ ಮುಂಚೂರು, ದಿಲೀಪ್ ಮುಂಚೂರು, ಬಾಲಕೃಷ್ಣ ಮುಂಚೂರು, ವಸಂತ ಹೊಸಬೆಟ್ಟು, ಹರೀಶ್ ಮುಂಚೂರು, ಸೂರಿಂಜೆ ಗ್ರಾ.ಪಂ. ಅಧ್ಯಕ್ಷ ವಿನೀತ್ ಶೆಟ್ಟಿ, ಮಾಜಿ ಉಪಾಧ್ಯಕ್ಷ ಅಬ್ದುಲ್ ರಜಾಕ್, ಬೋಜರಾಜ ಶೆಟ್ಟಿ ಸೂರಿಂಜೆ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶೋಕ ಕೃಷ್ಣಾಪುರ ಉಪಸ್ಥಿತರಿದ್ದರು.

Write A Comment