ಕನ್ನಡ ವಾರ್ತೆಗಳು

ಸ್ಪೀಕರ್ ಕಾಗೋಡು ತಿಮ್ಮಪ್ಪ ವಿರುದ್ಧ ಜನಾರ್ದನ ಪೂಜಾರಿ ತೀವ್ರ ವಾಗ್ದಾಳಿ

Pinterest LinkedIn Tumblr

poojary_press_meet_3

ಮಂಗಳೂರು, ಜ.6 : ಸರಕಾರದ ವಿರುದ್ಧ ಆಗಾಗ ಅಪಸ್ವರ ಎತ್ತುತ್ತಿರುವ ರಾಜ್ಯ ವಿಧಾನ ಸಭೆಯ ಸ್ಪೀಕರ್ ಕಾಗೋಡು ತಿಮ್ಮಪ್ಪ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕ ಬಿ.ಜನಾರ್ದನ ಪೂಜಾರಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ನಗರದ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕಾಗೋಡು ತಿಮ್ಮಪ್ಪರಿಗೆ ಕಾಂಗ್ರೆಸ್ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಈಗವರು ವಿಪಕ್ಷ ನಾಯಕರ ಹಾಗೆ ವರ್ತಿಸುತ್ತಿದ್ದಾರೆ. ಸ್ಪೀಕರ್ ಸ್ಥಾನಕ್ಕೆ ತನ್ನದೇ ಆದ ಗೌರವವಿದೆ. ಜತೆಗೆ ಆ ಸ್ಥಾನಕ್ಕೂ ತನ್ನದೇ ಇತಿ ಮಿತಿ, ನೀತಿ ನಿಯಮವಿದೆ’ ಎಂದರಲ್ಲದೆ, ‘ನಿಮ್ಮ ಅಧಿಕಾರದ ಮಿತಿ ಎಷ್ಟೋ ಅಷ್ಟು ಮಾಡಿ’ ಎಂದು ಸಲಹೆ ನೀಡಿದರು.
‘ನೀವು ರಾಜ್ಯದ ಆರೋಗ್ಯ ಸಚಿವರಾಗಿದ್ದವರು. ಅಲ್ಲಿನ ಸಮಸ್ಯೆಯ ಅರಿವು ನಿಮಗೂ ಇದೆ. ಆದಾಗ್ಯೂ ನೀವು ಹಾಲಿ ಆರೋಗ್ಯ ಸಚಿವರ ವಿರುದ್ಧ ಮಾತನಾಡುತ್ತಿದ್ದೀರಿ, ಅರಣ್ಯ ಇಲಾಖೆಯ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಳಿಕವೂ ನೀವು ಅಪಸ್ವರ ಎತ್ತುತ್ತಿದ್ದೀರಿ. ನಿಮ್ಮನ್ನು ಮಂತ್ರಿ ಮಾಡದಿರುವುದಕ್ಕೆ ನೀವು ಹೀಗೆಲ್ಲಾ ಮಾತ ನಾಡುತ್ತಿದ್ದೀರಾ? ನಿಮಗೆ ವಿಧಾನಸಭೆಯನ್ನು ನಿಯಂತ್ರಿಸುವ ಕೆಲಸ. ಅದನ್ನು ಮಾಡಲಾ ಗದಿದ್ದರೆ ಸ್ಥಾನ ಬಿಟ್ಟು ಕೆಳಗಿಳಿಯಿರಿ’ ಎಂದು ಪೂಜಾರಿ ಕಿಡಿಕಾರಿದರು.

poojary_press_meet_1

‘ಸ್ಪೀಕರ್ ಆದ ಬಳಿಕ ನಿಷ್ಪಕ್ಷಪಾತವಾಗಿರಬೇಕು. ಆದರೆ ನೀವು ಸದನದಲ್ಲಿ ಮಾತ್ರವಲ್ಲ ಹೊರಗೂ ರಾಜ್ಯ ಸರಕಾರವನ್ನು ಟೀಕಿಸುತ್ತಿದ್ದೀರಿ. ಶಾಸಕರ ಹಕ್ಕನ್ನು ಮೊಟಕು ಗೊಳಿಸುತ್ತಿದ್ದೀರಿ. ನಿಮಗೆ ಆ ಅಧಿಕಾರ ಕೊಟ್ಟವರು ಯಾರು? ಸರಕಾರದ ಕುಂದು ಕೊರತೆಗಳನ್ನು ಎತ್ತಿ ತೋರಿಸಲು ವಿಪಕ್ಷಗಳಿವೆ. ಉತ್ತರಿಸಲು ಸರಕಾರವಿದೆ ಎಂದರು.

poojary_press_meet_2

ಬಿಎಚ್‌ಪಿಗೆ ಕಾಂಗ್ರೆಸ್‌ನಲ್ಲಿ ಅವಕಾಶವಿಲ್ಲ:
ಕಾಂಗ್ರೆಸ್‌ನಲ್ಲಿ ಭಾರತೀಯ ವಿಶ್ವ ಹಿಂದೂ ಪರಿಷತ್ (ಬಿಎಚ್‌ಪಿ)ಗೆ ಅವಕಾಶವಿಲ್ಲ. ಅದನ್ನು ಈಗಾಗಲೇ ಡಿಸಿಸಿ ಅಧ್ಯಕ್ಷ ಬಿ.ರಮಾನಾಥ ರೈ ಸ್ಪಷ್ಟಪಡಿಸಿದ್ದಾರೆ. ಎಐಸಿಸಿ, ಕೆಪಿಸಿಸಿ ಅನುಮತಿ ಇಲ್ಲದೆ ಅಂತಹ ಸಂಘಟನೆ ಕಟ್ಟಿದ್ದರೆ ಅದು ಅನಧಿಕೃತ. ಅದಕ್ಕೆ ಯಾವುದೇ ಮಾನ್ಯತೆ ಇಲ್ಲ ಎಂದು ಜನಾರ್ದನ ಪೂಜಾರಿ ಸ್ಪಷ್ಟಪಡಿಸಿದರು. ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಪಕ್ಷದ ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ, ಹರಿಕೃಷ್ಣ ಬಂಟ್ವಾಳ್, ಅರುಣ್ ಕುವೆಲ್ಲೊ, ಟಿ.ಕೆ.ಸುಧೀರ್, ಕಾರ್ಪೊರೇಟರ್‌ಗಳಾದ ರಾಧಾಕೃಷ್ಣ, ದೀಪಕ್ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Write A Comment