ಕನ್ನಡ ವಾರ್ತೆಗಳು

ಡಿಆರ್‌ಡಿಒ ವತಿಯಿಂದ ರೈಲು ನಿಲ್ದಾಣದಲ್ಲಿ ಜೈವಿಕ ಶೌಚಾಲಯ ನಿರ್ಮಾಣ.

Pinterest LinkedIn Tumblr

trai_biogas_kitter

ಕಾರವಾರ,ಜ03 : ರೈಲು ನಿಲ್ದಾಣಗಳನ್ನು ದುರ್ಗಂಧದಿಂದ ಮುಕ್ತಗೊಳಿಸಲು ಮತ್ತು ಹಳಿಗಳಿಗೆ ತುಕ್ಕು ಹಿಡಿಯುವುದನ್ನು ತಡೆಯಲು ಬೋಗಿಗಳಲ್ಲಿ ಮತ್ತು ನಿಲ್ದಾಣಗಳಲ್ಲಿ ಜೈವಿಕ ಶೌಚಾಲಯ ನಿರ್ಮಾಣಕ್ಕೆ ಕೊಂಕಣ ರೈಲ್ವೆ ನಿಗಮ ಮುಂದಾಗಿದೆ.

ರಕ್ಷಣಾ ಇಲಾಖೆಯ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಈ ಜೈವಿಕ ಶೌಚಾಲಯವನ್ನು ವಿನ್ಯಾಸಗೊಳಿಸಿದೆ. ಇದು ಪರಿಸರ ಸ್ನೇಹಿಯಾಗಿದ್ದು, ಕಡಿಮೆ ವೆಚ್ಚದಲ್ಲಿ ಸರಳವಾಗಿ ನಿರ್ವಹಿಸಬಹುದಾಗಿದೆ. ಈ ತಂತ್ರಜ್ಞಾನ ಬಳಸಿಕೊಂಡು ಈಗಾಗಲೇ ಕೊಂಕಣ ರೈಲ್ವೆ ಮಾರ್ಗದ ಆರು ರೈಲು ನಿಲ್ದಾಣಗಳಲ್ಲಿ ಜೈವಿಕ ಶೌಚಾಲಯ ನಿರ್ಮಿಸಲಾಗಿದೆ.

ಮಹಾರಾಷ್ಟ್ರದ ಸಾವಂತವಾಡಿ, ಗೋವಾದ ಥಿವಿಮ್, ಮಡಗಾಂವ, ಕರ್ಮಲಿ, ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ದಕ್ಷಿಣ ಕನ್ನಡ ಜಿಲ್ಲೆಯ ಬೈಂದೂರು ರೈಲು ನಿಲ್ದಾಣಗಳು ಜೈವಿಕ ಶೌಚಾಲಯ ಹೊಂದಿವೆ. ‘ಕೊಂಕಣ ರೈಲ್ವೆ ಮಾರ್ಗದ ಎಲ್ಲ 68 ರೈಲು ನಿಲ್ದಾಣಗಳು ಶೌಚಾಲಯಗಳನ್ನು ಹೊಂದಿವೆ. ಹೀಗಾಗಿ ಹೊಸದಾಗಿ ಶೌಚಾಲಯದ ಅಗತ್ಯ ಇರುವ ನಿಲ್ದಾಣಗಳಲ್ಲಿ ಜೈವಿಕ ಶೌಚಾಲಯ ನಿರ್ಮಿಸಲಾಗುತ್ತಿದೆ. ಒಂದು ಶೌಚಾಲಯಕ್ಕೆ ಸುಮಾರು 3 ಲಕ್ಷ ಖರ್ಚಾಗುತ್ತದೆ’ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೈಲಿನಲ್ಲೂ ಜೈವಿಕ ಶೌಚಾಲಯ: ‘ತೆರೆದ ಶೌಚಾಲಯದಿಂದ ಹಳಿಗಳಿಗೆ ತುಕ್ಕು ಹಿಡಿಯುವುದು, ದುರ್ವಾಸನೆಯ ಸಮಸ್ಯೆ ಉಂಟಾಗುತ್ತಿತ್ತು. ಅದನ್ನು ತಪ್ಪಿಸಲು ರೈಲಿನಲ್ಲಿಯೂ ಜೈವಿಕ ಶೌಚಾಲಯ ಅಳವಡಿಸಲಾಗುತ್ತಿದೆ. ಸದ್ಯ ಹೊಸದಾಗಿ ನಿರ್ಮಾಣವಾಗುವ ಬೋಗಿಗಳಲ್ಲಿ ಜೈವಿಕ ಶೌಚಾಲಯ ಜೋಡಿಸಲಾಗುತ್ತಿದೆ. ಕೊಂಕಣ ರೈಲ್ವೆಯ ಮಾಂಡವಿ ಎಕ್ಸ್‌ಪ್ರೆಸ್‌ (ಮಡಗಾಂವ್ – ಮುಂಬೈ) ರೈಲಿನ ಒಂದು ಬೋಗಿಯಲ್ಲಿ ಜೈವಿಕ ಶೌಚಾಲಯ ವ್ಯವಸ್ಥೆ ಕಾಣಬಹುದು’ ಎಂದು ಮಾಹಿತಿ ನೀಡಿದರು.

ಹೇಗಿದೆ ತಂತ್ರಜ್ಞಾನ: ಜೈವಿಕ ಶೌಚಾಲಯದ ವಿನ್ಯಾಸ ಸಾಮಾನ್ಯ ಶೌಚಾಲಯದಂತೆಯೇ ಇರುತ್ತದೆ. ಈ ಶೌಚಾಲಯದಲ್ಲಿ ತ್ಯಾಜ್ಯ ಗುಂಡಿ ಬದಲು ಜೈವಿಕ ತಂತ್ರಜ್ಞಾನದ ಸೆಪ್ಟಿಕ್‌ ಟ್ಯಾಂಕ್‌ ಅಳವಡಿಸಲಾಗಿದೆ. ಅದರಲ್ಲಿ ಎರಡು ಭಾಗಗಳು ಇರುತ್ತದೆ. ಒಂದರಲ್ಲಿ ತ್ಯಾಜ್ಯ ಸಂಗ್ರಹವಾದರೆ, ಮತ್ತೊಂದರಲ್ಲಿ ಜೈವಿಕ ವಿಘಟನೆ ಮಾಡಬಲ್ಲ ಬ್ಯಾಕ್ಟೀರಿಯಾಗಳನ್ನು ತುಂಬಿ ಇಡಲಾಗುತ್ತದೆ.

ಈ ಬ್ಯಾಕ್ಟೀರಿಯಾಗಳು ಘನ ತ್ಯಾಜ್ಯವನ್ನು ಜೈವಿಕ ಅನಿಲ ಮತ್ತು ಜಲರೂಪಕ್ಕೆ ರೂಪಾಂತರಿಸುತ್ತದೆ. ಇದರಿಂದ ಶೌಚಾಲಯಕ್ಕೆ ಬಳಸಿದ ನೀರು ಶೇ 90ರಷ್ಟು ಶುದ್ಧವಾಗಿ ಹೊರಬರುತ್ತದೆ. ಅದನ್ನು ಗಿಡಗಳಿಗೆ ಬಳಸಬಹುದು ಎಂದು ವಿಜ್ಞಾನ ಕೇಂದ್ರದ ಗೌರವ ಕಾರ್ಯದರ್ಶಿ ಡಾ. ವಿ.ಎನ್‌.ನಾಯಕ ತಿಳಿಸಿದರು.

Write A Comment