ಬೆಂಗಳೂರು, ಜ.2 : ಬ್ಯಾಂಕ್ ನೌಕರರು ವೇತನ ಪರಿಷ್ಕರಣೆಗೆ ಒತ್ತಾಯಿಸಿ ಮತ್ತೊಮ್ಮೆ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಬ್ಯಾಂಕ್ ನೌಕರರ ಒಕ್ಕೂಟವು ಜ. 7 ರಂದು ದೇಶಾದ್ಯಂತ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದೆ. ಆದ್ದರಿಂದ ಬ್ಯಾಂಕಿಂಗ್ ವ್ಯವಹಾರಗಳಿಗೆ ತೊಂದರೆ ಉಂಟಾಗಲಿದೆ.ನವೆಂಬರ್ ತಿಂಗಳಿನಿಂದ ಬ್ಯಾಂಕ್ ನೌಕರರು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ವೇತನ ಪರಿಷ್ಕರಣೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಡಿ.2ರಂದು ಪ್ರಾದೇಶಿಕ ಮಟ್ಟದಲ್ಲಿ ಕರ್ನಾಟಕ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮುಷ್ಕರ ನಡೆಸಲಾಗಿತ್ತು.
ಜ. 7ರ ಮುಷ್ಕರದ ಬಳಿಕವೂ ವೇತನ ಹೆಚ್ಚಳಕ್ಕೆ ಒಪ್ಪಿಗೆ ದೊರೆಯದಿದ್ದರೆ, ಜ. 21 ರಿಂದ 24ರವರೆಗೆ ಸರಣಿ ಪ್ರತಿಭಟನೆ ನಡೆಸುವುದಾಗಿ ಬ್ಯಾಂಕ್ ನೌಕರರ ಒಕ್ಕೂಟ ಎಚ್ಚರಿಕೆ ನೀಡಿದೆ. ಆದ್ದರಿಂದ ಜ.7ರಂದು ನಡೆಯಲಿರುವ ಮುಷ್ಕರ ನಿರ್ಣಾಯಕವಾಗಿದೆ.ಶೇ 25ರಷ್ಟು ವೇತನ ಹೆಚ್ಚಳ ಮಾಡಬೇಕೆಂದು ಬ್ಯಾಂಕ್ ನೌಕರರು ಒತ್ತಾಯಿಸುತ್ತಿದ್ದಾರೆ. ಆದರೆ, ಬ್ಯಾಂಕ್ ಆಡಳಿತ ಮಂಡಳಿ ಶೇ 11ರವರೆಗೆ ವೇತನ ಹೆಚ್ಚಳಕ್ಕೆ ಸಮ್ಮತಿ ಸೂಚಿಸಿವೆ. ಇದನ್ನು ನೌಕರರು ತಿರಸ್ಕರಿಸಿದ್ದು, ವೇತನ ಹೆಚ್ಚಿಸಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾರೆ.ನೌಕರರ ಶ್ರಮದಿಂದ ರಾಷ್ಟ್ರೀಕೃತ ಬ್ಯಾಂಕ್ಗಳು ಕಳೆದ 5 ವರ್ಷದಲ್ಲಿ 1.30 ಲಕ್ಷ ಕೋಟಿ ರೂ. ಲಾಭ ಗಳಿಸಿವೆ. ಅಲ್ಲದೆ, ಕಳೆದ ತ್ರೈಮಾಸಿಕವೂ ಉತ್ತಮವಾಗಿದೆ. ಆದ್ದರಿಂದ ವೇತನ ಹೆಚ್ಚಿಸಬೇಕು ಎಂಬುದು ನೌಕರರ ಬೇಡಿಕೆ.