ಕನ್ನಡ ವಾರ್ತೆಗಳು

ಜ. 3: ಡಾ. ಹರಿಕೃಷ್ಣ ಭಟ್ ಭರಣ್ಯ ಸನ್ಮಾನ ಸಮಾರಂಭ

Pinterest LinkedIn Tumblr

Bharanya_krishna_photo

ಮಂಗಳೂರು,ಡಿ.31: ಸುಮಾರು 35 ವರ್ಷಗಳ ಕಾಲ ಸಾಹಿತ್ಯ ಕೃಷಿ ಮಾಡಿದ ಬಹುಭಾಷಾ ಪಂಡಿತರೂ ಸಂಶೋಧಕರೂ ಆದ ಡಾ. ಹರಿಕೃಷ್ಣ ಭರಣ್ಯ ಅವರ ಸನ್ಮಾನ ಸಮಾರಂಭ ಮತ್ತು ಭರಣ್ಯ ಅಭಿನಂದನಾ ಗ್ರಂಥ ಅನಾವರಣ ಕಾರ್ಯಕ್ರಮ ಜನವರಿ 3  ಶನಿವಾರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಸಭಾಂಗಣ, ಎಂ.ಜಿ. ರಸ್ತೆ, ಕೊಡಿಯಾಲ್‌ಬೈಲ್ ಮಂಗಳೂರು ಇಲ್ಲಿ ಜರಗಲಿದೆ.

ಪೂರ್ವಾಹ್ನ 11 ಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರೂ, ಹಿರಿಯ ಸಾಹಿತಿಗಳೂ ಆದ ಡಾ. ಸಾ.ಶಿ. ಮರುಳಯ್ಯ ಕಾರ್ಯಕ್ರಮ ಉದ್ಘಾಟಿಸಲಿರುವರು. ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಪಿ. ಶ್ರೀಕೃಷ್ಣ ಭಟ್ ಅವರ ಅಧ್ಯಕ್ಷತೆಯಲ್ಲಿ ಸಾಹಿತಿ ಶ್ರೀ ಸುಬ್ರಾಯ ಚೊಕ್ಕಾಡಿ ಅವರು ಭರಣ್ಯ ಅಭಿನಂದನಾ ಗ್ರಂಥವನ್ನು ಅನಾವರಣ ಮಾಡಲಿರುವರು.ವಿದ್ಯಾರ್ಥಿ ಬಳಗ, ಕನ್ನಡ ವಿಭಾಗ, ಮಧುರೈ ಕಾಮರಾಜ ವಿಶ್ವವಿದ್ಯಾಲಯ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು, ಸಾಹಿತ್ಯ ಸಂಘ ಸ.ಪ್ರ.ದ. ಮಹಿಳಾ ಕಾಲೇಜು ಬಲ್ಮಠ, ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮವು ನಡೆಯಲಿದೆ.

ಡಾ. ಹರಿಕೃಷ್ಣ ಭಟ್ (ಭರಣ್ಯ) ಪರಿಚಯ:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಪಾಣಾಜೆಯವರು (1951 ). ತಂದೆ ರಾಮಕೃಷ್ಣ ಭಟ್, ತಾಯಿ ಶಂಕರಿಯಮ್ಮ, ಕಾಸರಗೋಡಿನಲ್ಲಿ ಕನ್ನಡ ಸ್ನಾತಕೊತ್ತರ ಪದವಿ ಪಡೆದು, ಮದ್ರಾಸ್ ವಿ.ವಿ.ಯಿಂದ ಎಂ.ಫಿಲ್. ಮತ್ತು ಪಿಹೆಚ್.ಡಿ. ಪದವಿ ಗಳಿಸಿರುತ್ತಾರೆ. ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರದ ತುಳು ನಿಘಂಟು ಯೋಜನೆಯಲ್ಲಿ ಕಾರ್ಯನಿರ್ವಹಿಸಿ ನಂತರ ತಮಿಳುನಾಡಿನ ಮಧುರೈ ಕಾಮರಾಜ ವಿ.ವಿ.ಯಲ್ಲಿ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸುಮಾರು 25  ವರ್ಷಗಳ ಸೇವೆ ಸಲ್ಲಿಸಿರುವ ಬಹುಭಾಷಾ ಪಂಡಿತರೂ ಆದ ಶ್ರೀಯುತರು ಸದ್ಯ ಕುಂಬ್ಳೆಯ ನಾರಾಯಣಮಂಗಲದಲ್ಲಿ ಸಾರ್ಥಕ್ಯ ಜೀವನ ನಡೆಸುತ್ತಿದ್ದಾರೆ.

ಡಾ. ಹರಿಕೃಷ್ಣ ಭರಣ್ಯರ ಕೃತಿಯಲ್ಲಿನ ‘ತಮಿಳು ನೆಲ’ದ ಬಗ್ಗೆ ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ ವಿಶ್ರಾಂತ ಪ್ರಾಧ್ಯಾಪಕರು ಮದ್ರಾಸು ವಿ.ವಿ., ‘ಎಂಬಂತೆ ಮತ್ತು ಇತರ’ ಈ ಬಗ್ಗೆ ಡಾ. ತಾಳ್ತಜೆ ವಸಂತ ಕುಮಾರ ವಿಶ್ರಾಂತ ಪ್ರಾಧ್ಯಾಪಕರು ಮುಂಬಯಿ ವಿ.ವಿ ಹಾಗೂ ‘ನೆನಪೀಗ ಮಧುರ’ ಕುರಿತಾಗಿ ಶ್ರೀ ಬಾ.ನಾ. ಸುಬ್ರಹ್ಮಣ್ಯ ಹಿರಿಯ ಪತ್ರಕರ್ತರು ಬೆಂಗಳೂರು ಇವರು ಪರಿಚಯಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ, ಮಂಗಳೂರು ವಿ.ವಿ. ಪ್ರಾಧ್ಯಾಪಕ ಡಾ. ಕೆ. ಚಿನ್ನಪ್ಪ ಗೌಡ, ಸಾಹಿತಿ ಡಾ. ನಾ. ಮೊಗಸಾಲೆ, ಮಂಗಳೂರು ಆಕಾಶವಾಣಿ ನಿರ್ದೇಶಕ ಡಾ. ವಸಂತ ಕುಮಾರ ಪೆರ್ಲ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಮೊದಲು ಪೂರ್ವಾಹ್ನ 10 ಕ್ಕೆ ಉಡುಪಿಯ ನಾದವೈಭವಂ ಶ್ರೀ ವಾಸುದೇವ ಭಟ್ಟ ಮತ್ತು ವೃಂದದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

Write A Comment