ಕನ್ನಡ ವಾರ್ತೆಗಳು

ಹೊಸ ವರ್ಷಾಚರಣೆ ನೆಪದಲ್ಲಿ ಕೊಡಚಾದ್ರಿ ಪರಿಸರ ಕೆಡಿಸದಿರಲು ಕೇಮಾರು ಶ್ರೀ ಮನವಿ

Pinterest LinkedIn Tumblr

images

ಕುಂದಾಪುರ: ಹೊಸ ವರ್ಷ, ಮಹಾಶಿವರಾತ್ರಿ ಹಬ್ಬಾಚರಣೆ ಮೊದಲಾದ ಸಂದರ್ಭಗಳನ್ನೇ ನೆಪವಾಗಿಸಿಕೊಂಡು ಮೋಜು – ಮಜಾ ಮಾಡುವವರು ಪ್ರಕೃತಿ ಹಾಳುಗೆಡವಬಾರದು ಎಂದು ಕೊಡಚಾದ್ರಿ ಪರಿಸರ ಸಂರಕ್ಷಣಾ ಟ್ರಸ್ಟ್‌ನ ಗೌರವಾಧ್ಯಕ್ಷ, ಕೇಮಾರು ಮಠಾಧೀಶ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ಮನವಿ ಮಾಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಇಂತಹ ಉತ್ಸವಾಚರಣೆಯ ಸಂದರ್ಭದಲ್ಲಿ ಕೊಲ್ಲೂರು ಸಮೀಪದ ಪವಿತ್ರ ಸ್ಥಳ ಕೊಡಚಾದ್ರಿ ಬೆಟ್ಟಕ್ಕೆ ಲಗ್ಗೆಯಿಡುವ ಯುವಕರ ದಂಡು ಅಲ್ಲಿ ಮದ್ಯ – ಮಾಂಸಾದಿಗಳನ್ನು ಸೇವಿಸಿ, ಪ್ಲಾಸ್ಟಿಕ್ ಇತ್ಯಾದಿ ಕಸಗಳನ್ನು ಎಸೆದು ಪರಿಸರ ಮಾಲಿನ್ಯಕ್ಕೆ ಕಾರಣರಾಗುತ್ತಿದ್ದಾರೆ. ಆದರೆ ಭಾರತೀಯ ಸಂಸ್ಕೃತಿ ಪ್ರಕಾರ ಹಬ್ಬ – ಉತ್ಸವ ಆಚರಣೆ ಈ ರೀತಿಯಲ್ಲ. ದೇವರ ದರ್ಶನ ಪಡೆದು ಮನೆಯಲ್ಲಿಯೇ ಹಬ್ಬ ಆಚರಿಸಬೇಕು. ವಿಹಾರಾರ್ಥ ಪವಿತ್ರ ಸ್ಥಳ, ವಿಹಾರ ತಾಣಗಳಿಗೆ ಹೋದರೂ ಅಲ್ಲಿ ಕಸ ಎಸೆದು, ಗಲಾಟೆ ಎಬ್ಬಿಸಿ ಪರಿಸರ ಮಲಿನಗೊಳಿಸಬಾರದು. ಈಗಾಗಲೇ ಇದರ ಬಗ್ಗೆ ಅರಣ್ಯ ಇಲಾಖೆ, ಪರಿಸರ ಇಲಾಖೆಯವರ ಗಮನ ಸೆಳೆದಿದ್ದು, ಅವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವರು ಎಂದು ನಿರೀಕ್ಷಿಸಲಾಗಿದೆ ಎಂದರು.

ಕಳೆದ ತಿಂಗಳು ಸ್ವಾಮೀಜಿಯವರು ಸಮಾನ ಆಸಕ್ತ ತಂಡದವರೊಂದಿಗೆ ಕೊಡಚಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಪ್ಲಾಸ್ಟಿಕ್ ಇತ್ಯಾದಿ ಕಸಗಳನ್ನು ಹೆಕ್ಕಿ ಶುಚಿಗೊಳಿಸುವ ಶ್ರಮದಾನ ನಡೆಸಿದ್ದರು. ಈ ವೇಳೆ ಪವಿತ್ರ ಸ್ಥಳಗಳಲ್ಲಿ ರಾಶಿ ರಾಶಿ ಖಾಲಿ ಮದ್ಯದ ಬಾಟಲಿಗಳು, ನೀರು ಬಾಟಲಿಗಳು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕಂಡು ಮರುಕಪಟ್ಟಿದ್ದರು. ಯುವ ಜನತೆ ಈ ರೀತಿ ವರ್ತಿಸುವುದರಿಂದ ಸ್ವತಃ ಅವರ ಆರೋಗ್ಯ ಹಾಳಾಗುವುದಲ್ಲದೇ, ಪುಣ್ಯ ಕ್ಷೇತ್ರಗಳ ಪಾವಿತ್ರ್ಯಕ್ಕೆ ಧಕ್ಕೆ ಬರುತ್ತದೆ. ಮಾತ್ರವಲ್ಲ ಪರಿಸರವೂ ಮಲಿನಗೊಂಡು ಇಡೀ ಪ್ರಕೃತಿ ಕೆಟ್ಟುಹೋಗುತ್ತದೆ.

ಬೆಟ್ಟಗಳಲ್ಲಿ ತರಗೆಲೆ, ಒಣ ಹುಲ್ಲು ಸಾಕಷ್ಟಿರುವುದರಿಂದ ಬೀಡಿ ಸಿಗರೇಟು ಸೇದಿ ಎಸೆಯುವುದರಿಂದ ಕಾಡ್ಗಿಚ್ಚು ಉಂಟಾಗಿ ಪ್ರಾಣಿ, ಪಕ್ಷಿ, ಸಸ್ಯ ಸಂಕುಲಕ್ಕೇ ಅಪಾಯ ಒದಗುವ ಸಾಧ್ಯತೆಯಿದೆ ಎಂದೂ ಶ್ರೀ ಈಶವಿಠಲ ಸ್ವಾಮೀಜಿಯವರು ಆತಂಕ ವ್ಯಕ್ತಪಡಿಸಿದ್ದಾರೆ. ಅರಣ್ಯ, ಪೊಲೀಸ್ ಮತ್ತು ಪರಿಸರ ಇಲಾಖೆಯವರೂ ಈ ಬಗ್ಗೆ ನಿಗಾ ವಹಿಸಬೇಕು ಎಂದೂ ಅವರು ಮನವಿ ಮಾಡಿದ್ದಾರೆ.

Write A Comment