ಕನ್ನಡ ವಾರ್ತೆಗಳು

ಘನ ತ್ಯಾಜ್ಯ ವಿಲೇವಾರಿ ಯೋಜನೆ ಬಗ್ಗೆ ನಾಗರಿಕರಿಗೆ ಮಾಹಿತಿ ಕೊಡಿ

Pinterest LinkedIn Tumblr

Dc_Ibrahim_Pics

ಮಂಗಳೂರು,ಡಿ.25 : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜ.1ರಿಂದ ಜಾರಿಗೆ ಬರುತ್ತಿರುವ ವೈಜ್ಞಾನಿಕ ಮಾದರಿಯ ಟೂ ಪ್ಯಾಕೇಜ್ ಘನ ತ್ಯಾಜ್ಯ ವಿಲೇವಾರಿ ಯೋಜನೆ ಬಗ್ಗೆ ಕರಪತ್ರ, ಪ್ರಮುಖ ಸ್ಥಳಗಳಲ್ಲಿ ಫ್ಲೆಕ್ಸ್‌ಗಳ ಮೂಲಕ ನಾಗರಿಕರಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಗರ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ಯೋಜನೆಗಳ ಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮನಪಾ ಪರಿಸರ ಎಂಜಿನಿಯರ್‌ಗಳಿಂದ ಮಾಹಿತಿ ಪಡೆದು, ನಿರ್ದೇಶನ ನೀಡಿದರು.

ತ್ಯಾಜ್ಯ ವಿಲೇವಾರಿ ವಾಹನಗಳ ನೋಂದಣಿ ಆಗಿಲ್ಲ ಎಂಬ ಕಾರಣಕ್ಕೆ ಯೋಜನೆ ಮುಂದೂಡುವುದು ಬೇಡ. ಶಾಶ್ವತ ಸಾಧ್ಯ ಆಗದಿದ್ದರೆ, ತಾತ್ಕಾಲಿಕ ನೋಂದಣಿ ಮಾಡಿಕೊಡುವಂತೆ ಆರ್‌ಟಿಒ ಅಧಿಕಾರಿಗಳಿಗೆ ಸೂಚಿಸಿದ ಅವರು, ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಬರಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜ.1ರಿಂದ ಏನೆಲ್ಲ ಬದಲಾವಣೆ ಆಗುತ್ತಿದೆ ಎಂಬ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ಕೊಡಿ. ಪ್ರಮುಖ ಸ್ಥಳಗಳಲ್ಲಿ ಬೃಹತ್ ಫ್ಲೆಕ್ಸ್ ಅಳವಡಿಸಿ ಎಂದರು.

ಎಲ್ಲ ಸ್ಥಳೀಯ ಸಂಸ್ಥೆಗಳ ಘನ ತ್ಯಾಜ್ಯ ವಿಲೇವಾರಿ ಬಗ್ಗೆ ವಿವರಣೆ ಪಡೆದು, ಒಳಚರಂಡಿ ನಿರ್ಮಿಸಿಯೂ ಸಂಪರ್ಕ ಕೊಡದೆ ಎಲ್ಲೆಂದರಲ್ಲಿ ತ್ಯಾಜ್ಯ ಬಿಡುವ ನಗರ ಪಂಚಾಯಿತಿಯ ಸಂಬಂಧ ಪಟ್ಟವರ ಮೇಲೆ ಕ್ರಿಮಿನಲ್ ದಾವೆ ಹೂಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗೆ ಸೂಚಿಸಿದರು. ಎಲ್ಲೆಡೆ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದರು.

ಉದ್ಯಾನವನಗಳಿಗೆ ಭೂಮಿ ಮೀಸಲಿಡುವಂತೆ ಸೂಚಿಸಿದ್ದರೂ ಕೆಲವೆಡೆ ಮಾತ್ರ ಭೂಮಿ ಗುರುತಿಸಲಾಗಿದೆ. ಪುತ್ತೂರಿನಲ್ಲಿ 48 ಎಕರೆ ಸರಕಾರಿ ಜಮೀನು ಲಭ್ಯ ವಿದ್ದು, ಅರಣ್ಯ ಇಲಾಖೆ ಸಹಯೋಗದಲ್ಲಿ ಪಿಲಿಕುಳ ಮಾದರಿ ಉದ್ಯಾನವನ ರೂಪಿಸಲು ಯೋಜನೆ ಸಿದ್ಧಪಡಿಸಿ ಎಂದು ಮುಖ್ಯಾಧಿಕಾರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಬಡವರಿಗೆ ಅಡುಗೆ ಅನಿಲ ವಿತರಿಸುವ ಯೋಜನೆ ಆಮೆಗತಿಯಲ್ಲಿ ಸಾಗುತ್ತಿದ್ದು, ಸರಕಾರಿ ಯೋಜನೆಗಳ ಸಹಿತ ಬ್ಯಾಂಕ್‌ಗಳ ಸಾಲದಿಂದ ಕೊಡಿಸಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ನೀರಿನ ಹಾಗೂ ಇತರ ತೆರಿಗೆ ಸಂಗ್ರಹ ವನ್ನೂ ಸಮರ್ಪಕವಾಗಿ ನಿಗದಿತ ಅವಧಿಯೊಳಗೆ ಮುಗಿಸಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ನಗರ ಕೋಶದ ಯೋಜನಾ ನಿರ್ದೇಶಕ ಟಿ.ಜೆ.ತಾಕತ್ ರಾವ್, ಮನಪಾ ಪ್ರಭಾರ ಆಯುಕ್ತ ಗೋಕುಲ್‌ದಾಸ್ ನಾಯಕ್, ರಾಜು ಮೊಗೇರ ಮತ್ತಿತರರು ಉಪಸ್ಥಿತರಿದ್ದರು.

ಸ್ವಚ್ಛ ಭಾರತ ಜಾಗೃತಿ ಮೂಡಿಸಿ: ಸ್ವಚ್ಛ ಭಾರತ ಅಭಿಯಾನ ಹೆಸರಿನಲ್ಲಿ ಸಂಘ ಸಂಸ್ಥೆಗಳಿಂದ ಒಂದು ದಿನದ ಶುಚಿತ್ವ ನಡೆಯುತ್ತಿದೆ. ಇದರಿಂದ ಒಂದು ದಿನದ ಮಟ್ಟಿಗೆ ಪೌರ ಕಾರ್ಮಿಕರಿಗೆ ಆರಾಮ ಆಗುತ್ತಿದೆ. ಮರುದಿನ ಅದೇ ಮಾದರಿ ಕಸ ಬೀಳುತ್ತಿದೆ. ಜನರು ಕಸ ಹಾಕದಂತೆ ಜಾಗೃತಿ ಮೂಡಿಸಿ. ಎಲ್ಲಿಯೂ ಬದಲಾವಣೆ ಕಾಣುತ್ತಿಲ್ಲ. ಪ್ರತಿ ಸ್ಥಳೀಯ ಸಂಸ್ಥೆಗಳಲ್ಲಿ ಒಂದು ದಿನ ಸಭೆ ನಡೆಸಿ, ಏನಾದರೂ ಬದಲಾವಣೆ ಆಗಿದೆಯಾ ಎಂಬ ಫೀಡ್ ಬ್ಯಾಕ್ ತೆಗೆದುಕೊಳ್ಳಿ. ಅಧಿಕಾರಿಗಳು ಮುಂದೆ ನಿಂತು ಸ್ವಚ್ಛತೆ ಅನುಷ್ಠಾನಕ್ಕೆ ತನ್ನಿ ಎಂದು ಡಿಸಿ ಹೇಳಿದರು.

ಸ್ಮಶಾನ ಭೂಮಿ ಕಾದಿರಿಸಿ: ಮೂಲ್ಕಿ, ಮಂಗಳೂರು, ಉಳ್ಳಾಲ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ಸ್ಥಳೀಯ ಸಂಸ್ಥೆಗಳಲ್ಲಿ ಸ್ಮಶಾನ ಭೂಮಿಗೆ ಜಾಗ ಕಾದಿರಿಸಿದ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ, ಮುಂದಿನ ಸಭೆಯೊಳಗೆ ಎಲ್ಲ ಸಮುದಾಯದವರಿಗೆ ಜಮೀನು ಕಾದಿರಿಸಿ, ಆರ್‌ಟಿಸಿಯನ್ನೂ ಮಾಡಿಸಿ ವರದಿ ಕೊಡಬೇಕು. ಮುಂದೆ ಗೊಂದಲ, ವಿವಾದಕ್ಕೆ ಅವಕಾಶ ಇರಬಾರದು ಎಂದರು.

Write A Comment