ಕನ್ನಡ ವಾರ್ತೆಗಳು

ಜಯಲಲಿತಾ ಜಾಮೀನು ಅವಧಿ 4 ತಿಂಗಳಿಗೆ ವಿಸ್ತರಣೆ.

Pinterest LinkedIn Tumblr

Jayalalithaa_Jaya_650

ನವದೆಹಲಿ, ಡಿ. 18 : ಅಕ್ರಮ ಆಸ್ತಿಗಳಿಗೆ ಪ್ರಕರಣದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್‌ 4 ತಿಂಗಳ ಅವಧಿಗೆ ವಿಸ್ತರಣೆ ಮಾಡಿದೆ. ಜಯಲಲಿತಾ ಅವರ ಮೇಲ್ಮನವಿಯ ವಿಚಾರಣೆಗಾಗಿ ವಿಶೇಷ ಪೀಠವೊಂದನ್ನು ಸ್ಥಾಪಿಸುವಂತೆ ಕರ್ನಾಟಕ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ ನೀಡಿದೆ. ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಯಲಲಿತಾ ಅವರಿಗೆ ಜಾಮೀನು ನೀಡಿರುವ ಸುಪ್ರೀಂಕೋರ್ಟ್ ಇಂದು ಆ ಅರ್ಜಿಯ ವಿಚಾರಣೆಯನ್ನು ನಡೆಸಿತು. ಮುಖ್ಯನ್ಯಾಯಮೂರ್ತಿ ಎಚ್‌.ಎಲ್.ದತ್ತು ಅವರ ಪೀಠದಲ್ಲಿ ನಡೆದ ವಿಚಾರಣೆ ವೇಳೆ ಜಯಲಲಿತಾ ಅವರ ಜಾಮೀನು ಅವಧಿಯನ್ನು 4 ತಿಂಗಳಿಗೆ ವಿಸ್ತರಣೆ ಮಾಡಲಾಯಿತು.

ಅರ್ಜಿಯ ವಿಚಾರಣೆ ವೇಳೆಯಲ್ಲಿ ವಿಶೇಷ ಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಜಯಲಲಿತಾ ಅವರು ಸಲ್ಲಿಸಿರುವ ಮೇಲ್ಮನವಿಯನ್ನು ವಿಚಾರಣೆ ಮಾಡಲು ಕರ್ನಾಟಕ ಹೈಕೋರ್ಟ್‌ ವಿಶೇಷ ಪೀಠವನ್ನು ಸ್ಥಾಪನೆ ಮಾಡಬೇಕು ಮತ್ತು ವಿಚಾರಣೆ ಮೂರು ತಿಂಗಳವೊಳಗೆ ಮುಕ್ತಾಯಗೊಳ್ಳಬೇಕು ಎಂದು ಮುಖ್ಯನ್ಯಾಯಮೂರ್ತಿಗಳು ಕರ್ನಾಟಕ ಹೈಕೋರ್ಟ್‌ಗೆ ಸೂಚನೆ ನೀಡಿದರು. ಜಾಮೀನು ಅವಧಿ ಮುಗಿದಿತ್ತು : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಗೆ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅ.17ರಂದು ಸುಪ್ರೀಂಕೋರ್ಟ್ ಜಾಮೀನು ನೀಡಿತ್ತು ಮತ್ತು ಡಿ.18ರೊಳಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ವಿಶೇಷ ಕೋರ್ಟ್‌ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು ಎಂದು ಸೂಚನೆ ನೀಡಿತ್ತು. ಒಂದು ದಿನ ತಡವಾದರೂ ಜಾಮೀನು ರದ್ದುಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿತ್ತು.

ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ 100 ಕೋಟಿ ದಂಡ ಮತ್ತು 4 ವರ್ಷ ಜೈಲು ಶಿಕ್ಷೆ ವಿಧಿಸಿರುವ ಸಿಬಿಐ ವಿಶೇಷ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಜಯಲಲಿತಾ ಅವರು ಈಗಾಗಲೇ ಕರ್ನಾಟಕ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಸುಪ್ರೀಂ ಆದೇಶದಂತೆ ವಿಶೇಷ ಪೀಠ ಸ್ಥಾಪಿಸಿ, ಅರ್ಜಿಯ ವಿಚಾರಣೆಯನ್ನು ನಡೆಸಲಾಗುತ್ತದೆ. ಮೂರು ತಿಂಗಳವೊಳಗೆ ಈ ವಿಚಾರಣೆ ಪೂರ್ಣಗೊಳ್ಳಬೇಕಿದೆ.

Write A Comment