ಕನ್ನಡ ವಾರ್ತೆಗಳು

ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಜನರ ಭಾವನೆಗಳಿಗೆ ವಿರುದ್ಧ ಯಾವುದೇ ತೀರ್ಮಾನವನ್ನು ಸರ್ಕಾರ ಕೈಗೊಂಡಿಲ್ಲ – ರಮಾನಾಥ್ ರೈ ಭರವಸೆ.

Pinterest LinkedIn Tumblr

Ramanatha_Rai_Press_1

ಬೆಂಗಳೂರು, ಡಿ. 18 : ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ನೀಡಲಾಗಿರುವ ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕೆಂದು ಶಾಸಕರು ಪಕ್ಷಬೇಧ ಮರೆತು ಒತ್ತಾಯಿಸಿದ್ದಾರೆ. ವರದಿಯ ವಿಚಾರದಲ್ಲಿ ರಾಜ್ಯದ ಜನರ ಭಾವನೆಗಳಿಗೆ ವಿರುದ್ಧವಾದ ಯಾವುದೇ ತೀರ್ಮಾನವನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ ಎಂದು ಅರಣ್ಯ ಸಚಿವ ರಮಾನಾಥ ರೈ ಭರವಸೆ ನೀಡಿದ್ದಾರೆ.  ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿಯ ಶಿಫಾರಸುಗಳಿಂದ ಪಶ್ಚಿಮ ಘಟ್ಟದ ವ್ಯಾಪ್ತಿಗೆ ಸೇರಿರುವ 10 ಜಿಲ್ಲೆಗಳ ಜನ ಜೀವನದ ಮೇಲೆ ಆಗುವ ಪರಿಣಾಮಗಳ ಬಗ್ಗೆ ನಿಯಮ 69ರಡಿ ಮೂರು ಗಂಟೆಗಳ ಸುದೀರ್ಘ ಚರ್ಚೆ ನಡೆಯಿತು.

ಚರ್ಚೆಯ ಬಳಿಕ ಉತ್ತರ ನೀಡಿದ ಅರಣ್ಯ ಸಚಿವ ರಮಾನಾಥ ರೈ ಅವರು, ಕಸ್ತೂರಿ ರಂಗನ್ ಸಮಿತಿ ವರದಿ ಕುರಿತಂತೆ ಅರಣ್ಯ ಸಚಿವರ ಅಧ್ಯಕ್ಷತೆಯಲ್ಲಿರುವ ಸಚಿವ ಸಂಪುಟದ ಉಪ ಸಮಿತಿಯು ಎಲ್ಲಾ ಬಾಧಿತ ಜಿಲ್ಲೆಗಳಿಗೆ ಭೇಟಿ ನೀಡಿ ಚುನಾಯಿತ ಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರ ಜೊತೆಗೆ ಚರ್ಚಿಸಿ ಅಭಿಪ್ರಾಯವನ್ನು ಸಂಗ್ರಹಿಸಲಿದೆ ಎಂದರು. ಡಾ ಕಸ್ತೂರಿ ರಂಗನ್ ಸಮಿತಿ ವರದಿಯ ಕುರಿತು ರಾಜ್ಯ ತನ್ನ ನಿಲುವನ್ನು ಪ್ರಕಟಿಸಲು ಕೇಂದ್ರ ಸರ್ಕಾರ ಮುಂದಿನ ವರ್ಷದ ಫೆಬ್ರವರಿವರೆಗೆ ಕಾಲಾವಕಾಶ ಕಲ್ಪಿಸಿದೆ. ಇದುವರೆಗೆ ಕೇರಳ ಸರ್ಕಾರ ಮಾತ್ರ ತನ್ನ ನಿಲುವನ್ನು ಪ್ರಕಟಿಸಿದ್ದು, ಉಳಿದ ಗೋವಾ, ಮಹಾರಾಷ್ಟ್ರ, ಗುಜರಾತ್ ಹಾಗೂ ತಮಿಳುನಾಡು ರಾಜ್ಯಗಳು ಯಾವುದೇ ನಿಲುವನ್ನು ಪ್ರಕಟಿಸಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ. ಬಿ. ಜಯಚಂದ್ರ ಅವರು ಸದನಕ್ಕೆ ವಿವರಣೆ ನೀಡಿದರು.

ಸದನದಲ್ಲಿ ಚರ್ಚೆ : ಕಸ್ತೂರಿ ರಂಗನ್ ವರದಿ ಕುರಿತ ಚರ್ಚೆಯಲ್ಲಿ ಪಾಲ್ಗೊಂಡಿದ್ದ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು, ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ನೆಲೆಸಿರುವ ನಾವೆಲ್ಲ ಅರಣ್ಯವನ್ನು ನಾಶಮಾಡುವ ಮಾಫಿಯಾ ಎಂದು ಬಿಂಬಿಸಲಾಗುತ್ತಿದೆ. ಅರಣ್ಯವನ್ನು ಅರಣ್ಯವಾಸಿಗಳಾದ ನಾವೇ ಉಳಿಸಿದ್ದು ಎಂದು ಹೇಳಿದರು.  ಚರ್ಚೆಯಲ್ಲಿ ಪಾಲ್ಗೊಂಡ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಅವರು, ಸ್ಥಳೀಯ ಅಭಿವೃದ್ಧಿ ದೃಷ್ಟಿಯಿಂದ ಕಲ್ಲು ಗಣಿಗಾರಿಕೆ, ಮರಳು ಗಣಿಗಾರಿಕೆಗೆ ಅವಕಾಶ ಇರಬೇಕು ಎಂಬುದು ಸರ್ಕಾರದ ಅಭಿಪ್ರಾಯ. ಪರಿಸರ ಸೂಕ್ಷ್ಮ ಪ್ರದೇಶಗಳಿಂದ 10 ಕಿಮೀ ವ್ಯಾಪ್ತಿಯಲ್ಲಿ ಜನವಸತಿ ಇರಕೂಡದೆಂಬ ಶಿಫಾರಸನ್ನೂ ನಾವು ಒಪ್ಪಿಲ್ಲ ಎಂದರು.

ವರದಿ ಅವೈಜ್ಞಾನಿಕ : ಕಾರ್ಕಳ ಕ್ಷೇತ್ರದ ಶಾಸಕ ಸುನೀಲ್‌ ಕುಮಾರ್ ಚರ್ಚೆಯಲ್ಲಿ ಪಾಲ್ಗೊಂಡು, ಈ ವರದಿ ಅವೈಜ್ಞಾನಿಕವಾಗಿದ್ದು, ಉಪಗ್ರಹ ಆಧರಿತ ಚಿತ್ರಗಳನ್ನು ಇಟ್ಟುಕೊಂಡು ಈ ವರದಿ ಸಿದ್ಧಪಡಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಶಿಕಾರಿಪುರದ ಶಾಸಕ ಬಿ.ವೈ. ರಾಘವೇಂದ್ರ ಅವರು, ಈಗಾಗಲೇ ಕಸ್ತೂರಿ ರಂಗನ್ ವರದಿ ಜಾರಿಯಾಗಿದೆ ಎಂಬಂತೆ ಅಧಿಕಾರಿಗಳು ವರ್ತಿಸುತ್ತಿ ದ್ದಾರೆ. ಇದೇ ನೆಪವೊಡ್ಡಿ ಅಭಿವದ್ಧಿ ಕಾರ್ಯಗಳಿಗೆ ತೊಂದರೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Write A Comment