ಕನ್ನಡ ವಾರ್ತೆಗಳು

ನಮ್ಮ ಬದುಕೇ ಅತಂತ್ರ ಸ್ಥಿತಿಯಲ್ಲಿದೆ – ಜಿಲ್ಲಾಧಿಕಾರಿಗಳ ಮುಂದೆ ಸಂಕಷ್ಟಗಳ ಸರಮಾಲೆಯೇ ಬಿಚ್ಚಿಟ್ಟ ಮೂಲನಿವಾಸಿಗಳು

Pinterest LinkedIn Tumblr

DC_visit_belthanadi

ಬೆಳ್ತಂಗಡಿ, ಡಿ.18: ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗಿರುವ ಕುತ್ಲೂರು ಗ್ರಾಮದ ಅಲಂಬ ಮೂಲನಿವಾಸಿಗಳ ಕಾಲನಿಗೆ ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಬುಧವಾರ ಭೇಟಿ ನೀಡಿ, ಪರಿಶೀಲನೆ ನಡೆಸಿ ಜನರ ಅಹವಾಲುಗಳನ್ನು ಆಲಿಸಿದರು.

ಜಿಲ್ಲಾಧಿಕಾರಿಯವರ ಎದುರು ತಮ್ಮ ಸಂಕಷ್ಟಗಳ ಸರಮಾಲೆಯನ್ನು ಬಿಚ್ಚಿಟ್ಟ ಮೂಲನಿವಾಸಿಗಳು ,‘‘ಕಾಡಿನ ನಡುವೆ ನೆಮ್ಮದಿಯ ಬದುಕನ್ನು ನಡೆಸುತ್ತಿದ್ದೆವು. ಈಗ ಸಮಸ್ಯೆಗಳ ನಡುವೆ ಸಿಲುಕಿಕೊಂಡಿದ್ದೇವೆ. ನಮ್ಮನ್ನು ನಮ್ಮಷ್ಟಕ್ಕೆ ಬದುಕಲು ಬಿಡಿ’’ ಎಂದು ಅವಲತ್ತುಕೊಂಡರು. ‘‘ಕೆಲವು ಎನ್‌ಜಿಒಗಳು ಒಕ್ಕಲೇಳುವಂತೆ ಒತ್ತಾಯಿಸುತ್ತಾ ಆಮಿಷಗಳನ್ನು ಒಡ್ಡಿ ನಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ನಕ್ಸಲ್ ನಿಗ್ರಹ ದಳದವರು ಮನೆಗಳಿಗೆ ನುಗ್ಗಿ ಬೆದರಿಸುತ್ತಿದ್ದಾರೆ. ನಮ್ಮ ಬದುಕೇ ಅತಂತ್ರ ಸ್ಥಿತಿಯಲ್ಲಿದೆ’’ ಎಂದು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮುಖಂಡ ಸ್ಥಳೀಯ ನಿವಾಸಿ ವಿಠ್ಠಲ ಮಲೆಕುಡಿಯ ತಮ್ಮ ಅಳಲನ್ನು ಹಂಚಿಕೊಂಡರು.

ಸರಕಾರದ ಪುನರ್ವಸತಿ ಯೋಜನೆ ಯನ್ನು ನಂಬಿ ಅರಣ್ಯದಿಂದ ಹೊರಬಂದು ಕಂದಾಯ ಇಲಾ ಖೆಯ ಜಮೀನಿನಲ್ಲಿ ಮನೆ ಕಟ್ಟಿ ವಾಸಿಸುತ್ತಿರುವ ಕುಟುಂಬಗಳಿಗೆ ಇತ್ತ ಪರಿಹಾರವೂ ಇಲ್ಲ. ಅತ್ತ ಜಮೀನಿನ ಹಕ್ಕು ಪತ್ರವೂ ಇಲ್ಲ. ಸರಕಾರ ನಮ್ಮನ್ನು ನಡು ನೀರಿನಲ್ಲೇ ಕೈಬಿಟ್ಟಿದೆ ಎಂದು ನಾಯ್ದಗುರಿಯ ಸಂತ್ರಸ್ತ ಕುಟುಂಬಗಳ ನೋವನ್ನು ಸಂತ್ರಸ್ತ ಗಣೇಶ ಎಂಬವರು ಹಂಚಿಕೊಂಡರು. ಭೂಮಿಯ ಹಕ್ಕು ಪತ್ರವೂ ಇಲ್ಲ. ರಸ್ತೆ ದುರಸ್ತಿಗೆ ಅವಕಾಶ ನಿರಾಕರಿಸಲಾಗುತ್ತಿದೆ. ವಿದ್ಯುತ್ ಸಂಪರ್ಕ ಇಲ್ಲವೇ ಇಲ್ಲ. ಈ ಹಿಂದೆ ನೀಡಿದ ಸೋಲಾರ್ ಲೈಟ್‌ಗಳು ಉರಿಯುತ್ತಿಲ್ಲ. ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗೆಗಿನ ಭರವಸೆಗಳೆಲ್ಲವೂ ಭರವಸೆಯಾಗಿಯೇ ಉಳಿಯುತ್ತಿವೆ ಎಂಬ ಅಳಲು ತೋಡಿಕೊಂಡರು ಸ್ಥಳೀಯ ನಿವಾಸಿ ಪೂವಪ್ಪ ಮಲೆಕುಡಿಯ.

ಅರಣ್ಯ ಹಕ್ಕು ಅರ್ಜಿಗಳ ವಿಲೇಗೆ ಸೂಚನೆ: ಅರಣು ಹಕ್ಕು ಕಾಯ್ದೆಯಡಿಯಲ್ಲಿ ರಾಷ್ಟ್ರೀಯ ಉದ್ಯಾನವನ ನಿವಾಸಿಗಳು ಸಲ್ಲಿಸಿ ರುವ ಅರ್ಜಿಗಳನ್ನು ಈ ಹಿಂದೆ ತಿರಸ್ಕರಿಸಲಾಗಿದೆ. ಈಗ ಸಲ್ಲಿಕೆಯಾಗಿರುವ 19 ಅರ್ಜಿಗಳನ್ನು ಕೂಡಲೇ ಪರಿಶೀಲಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಅನಗತ್ಯ ವಿಳಂಬ ಮಾಡುತ್ತಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಒಂದೇ ವಾರದಲ್ಲಿ ಈ ಅರ್ಜಿಗಳ ಸಮೀಕ್ಷೆ ಹಾಗೂ ಸರ್ವೇ ಕಾರ್ಯ ಮುಗಿಸಿ ತಾಲೂಕು ಮಟ್ಟದ ಸಮಿತಿಗೆ ಕಳುಹಿಸಿ ಕೊಡಬೇಕು. ಜನವರಿ 15ರ ಒಳಗೆ ಈ ಅರ್ಜಿಗಳು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯ ಮುಂದೆ ಬರಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಜನವರಿ ಅಂತ್ಯದೊಳಗೆ ಪ್ರಕರಣಗಳನ್ನು ವಿಲೇ ಮಾಡಿ ಅರ್ಹರಿಗೆ ಹಕ್ಕು ಪತ್ರ ವಿತರಿಸುವ ಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಸ್ಥಳೀಯವಾಗಿ ಸೋಲಾರ್ ವಿದ್ಯುತ್ ಉತ್ಪಾದಿಸಿ ಮನೆಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರ ಸರಕಾರದ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು, ಕುತ್ಲೂರು ಈ ಯೋಜನೆಯಡಿಯಲ್ಲಿ ಬರಲಿದೆ. ಇಲ್ಲಿ ಕೂಡಲೇ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಪುನರ್ವಸತಿ ಯೋಜನೆಯಡಿ ಹಣ ಪಡೆದುಕೊಂಡು ಹೊರಗೆ ಹೋಗಿರುವ ಕಿಟ್ಟು ಮಲೆಕುಡಿಯ ಎಂಬವರು ತಮ್ಮ ಸಮಸ್ಯೆಯನ್ನು ಜಿಲ್ಲಾಧಿಕಾರಿಯೆದುರು ಇಟ್ಟರು. ಎರಡು ವರ್ಷಗಳ ಹಿಂದೆ 1.20 ಎಕ್ರೆ ಜಾಗಕ್ಕೆ 8.95 ಲಕ್ಷ ರೂ. ಪರಿಹಾರ ಪಡೆದು ಹೊರಗೆ ಹೋಗಿದ್ದೇನೆ. ಆದರೆ ಆ ಹಣಕ್ಕೆ ಎಲ್ಲಿಯೂ ಬೇರೆ ಜಾಗ ಸಿಗುತ್ತ್ತಾ ಇಲ್ಲ. ಆಗ ಸರಕಾರಿ ಜಾಗ ಕೂಡಾ ನೀಡುತ್ತೇವೆ ಎಂಬ ಭರವಸೆ ನೀಡಿದ್ದರು. ಸದ್ಯ ಜಾಗವಿಲ್ಲದೆ ತಮ್ಮನ ಮನೆಯಲ್ಲಿ ವಾಸಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಕಿಟ್ಟುರವರಿಗೆ ಸುಲ್ಕೇರಿಯ ನಾಯ್ದಗುರಿಯಲ್ಲಿ ಪುನರ್ವಸತಿಗೆಂದು ಮೀಸಲಿರಿಸಿರುವ ಜಾಗದಲ್ಲಿ ನಿವೇಶನ ಮಂಜೂರು ಮಾಡುವಂತೆ ಅಧಿಕಾರಿ ಗಳಿಗೆ ಸೂಚಿಸಿದರು. ರಸ್ತೆ ಅಭಿವೃದ್ಧಿಗೆ ಹೊಸ ಪ್ರಸ್ತಾವನೆ: ಕುಕ್ಕುಜೆ-ಅಲಂಬ ರಸ್ತೆ ಹಾಗೂ ಅಲಂಬ ಕುರಿಯಾಡಿ ರಸ್ತೆ ದುರಸ್ತಿಗಾಗಿ ಸಲ್ಲಿಸಿರುವ ಪ್ರಸ್ತಾವನೆಗಳನ್ನು ಅರಣ್ಯ ಇಲಾಖೆ ನಿರಂತರವಾಗಿ ತಿರಸ್ಕರಿಸುತ್ತಾ ಬರುತ್ತಿರುವ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿಯ ಗಮನ ಸೆಳೆದರು.

ಯಾವುದೇ ಮರಗಳನ್ನು ಕಡಿಯದೆ ಇರುವ ರಸ್ತೆಯನ್ನು ದುರಸ್ತಿ ಮಾಡಲು ಹೊಸ ಪ್ರಸ್ತಾವನೆಯನ್ನು ಕಳುಹಿಸಿ. ಕುಕ್ಕುಜೆ ಅರಣ್ಯ ಇಲಾಖೆ ಗೇಟಿನಿಂದ ಅಲಂಬದವರೆಗೆ ಡಾಂಬರು ರಸ್ತೆಗೆ ಹಾಗೂ ಕುರಿಯಾಡಿ ಕಚ್ಚಾ ರಸ್ತೆ ದುರಸ್ತಿಗೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಗಿರಿಜನ ಅಭಿವೃದ್ಧಿ ಯೋಜನೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಅರಣ್ಯ ಇಲಾಖೆಯವರು ಇದನ್ನು ಸಮರ್ಪಕ ವಾಗಿ ಪರಿಶೀಲಿಸಿ ಅನುಮತಿ ಒದಗಿಸುವಂತೆ ಸಲಹೆ ನೀಡಿದರು. ನಕ್ಸಲ್ ನಿಗ್ರಹ ದಳದವರು ಮೂಲನಿವಾಸಿಗಳಿಗೆ ಅನಗತ್ಯ ಕಿರುಕುಳ ನೀಡುತ್ತಿರುವ ಬಗ್ಗೆ ಪ್ರಸ್ತಾಪಿಸಿದಾಗ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶರಣಪ್ಪಪ್ರತಿಕ್ರಿಯಿಸಿ, ಈ ಬಗ್ಗೆ ದಲಿತರ ಕುಂದುಕೊರತೆ ಸಭೆಯಲ್ಲಿ ಪ್ರಸ್ತಾಪ ಬಂದಿದ್ದು, ನಕ್ಸಲ್ ನಿಗ್ರಹದಳದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಮೂಲ ನಿವಾಸಿಗಳಿಗೆ ಯಾವುದೇ ಕಿರುಕುಳ ನೀಡದಂತೆ ಎಚ್ಚರಿಕೆ ವಹಿಸಲಾಗುವುದು. ನಕ್ಸಲರ ವಿರುದ್ಧದ ಕಾರ್ಯಾಚರಣೆ ಮುಂದುವರಿಯಲಿದೆ ಎಂದರು.

Write A Comment