ಕನ್ನಡ ವಾರ್ತೆಗಳು

ವೆನ್‌ಲಾಕ್: ಆಸ್ಪತ್ರೆಯಲ್ಲಿ  ವಿವಿಧ ಸೌಲಭ್ಯಗಳಿಗೆ ಮಂಜೂರಾತಿ :  ಎ.ಬಿ. ಇಬ್ರಾಹಿಂ

Pinterest LinkedIn Tumblr

wenlock_many_faciltly

ಮಂಗಳೂರು, ಡಿ.10 : ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯಲ್ಲಿ ಸುಸಜ್ಜಿತವಾದ ಹೊಸ ಅಂಬ್ಯುಲೆನ್ಸ್ ಖರೀದಿಗೆ ಹಾಗೂ ಮೃತದೇಹಗಳನ್ನು ಸಂರಕ್ಷಿಸಿಡಲು ಇನ್ನೂ ೨ ಶೀಥಲೀಕರಣ ಯಂತ್ರಗಳ ಖರೀದಿಸಲು ಬುಧವಾರ ನಡೆದ ಜಿಲ್ಲಾಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅನುಮತಿ ನೀಡಲಾಗಿದೆ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿನ ವಿವಿಧ ಕಾಮಗಾರಿಗಳಿಗೆ ಅನುಮತಿ ನೀಡಲಾಯಿತು.

ಆಸ್ಪತ್ರೆಯಲ್ಲಿ ಈಗಿರುವ ೩ ಅಂಬ್ಯುಲೆನ್ಸ್‌ಗಳು ತುಂಬಾ ಹಳೆಯದಾಗಿವೆ. ಅಲ್ಲದೆ, ಆಸ್ಪತ್ರೆಯಲ್ಲಿ ಪ್ರಸಕ್ತ ಇರುವ ಶೀಥಲೀಕರಣ ಯಂತ್ರದಲ್ಲಿ ಕೇವಲ ೧೨ ಶವಗಳನ್ನು ಮಾತ್ರ ಸಂರಕ್ಷಿಸಲು ಸಾಧ್ಯವಾಗುತ್ತದೆ. ಇತ್ತೀಚೆಗೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ವೈದ್ಯಕೀಯ ಕಾನೂನು ರೀತಿಯ ಹೆಚ್ಚಿನ ಮೃತದೇಹಗಳು ಬರುತ್ತಿದ್ದು, ಇವುಗಳನ್ನು 10-15  ದಿನಗಳ ಕಾಳ ಸಂರಕ್ಷಿಸಿಡಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ಹೊಸ ಶೀಥಲೀಕರಣ ಯಂತ್ರ ಖರೀದಿ ಅನಿವಾರ್ಯವಾಗಿದೆ ಎಂದು ಸಭೆಯಲ್ಲಿ ವೆನ್‌ಲಾಕ್ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ ತಿಳಿಸಿದರು. ಆಸ್ಪತ್ರೆಗೆ ಸುಮಾರು 47 ಕ್ಷ ರೂ. ವೆಚ್ಚದ ಹೊಸ 800  ಎಂಎ ಎಕ್ಸ್‌ರೇ ಯಂತ್ರ ಬಂದಿರುತ್ತದೆ. ದಂತವಿಭಾಗದಲ್ಲಿ ವಿವಿಧ ಹೊಸ ಚಿಕಿತ್ಸೆಯನ್ನು ಆರಂಭಿಸಲಾಗಿದೆ. ವಕ್ರಪಾದ ನಿರ್ಮೂಲನೆಗಾಗಿ ಇದುವರೆಗೆ ೨೪ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಮಾತನಾಡಿ, ವೆನ್‌ಲಾಕ್‌ಗೆ ಆಗಮಿಸುವ ರೋಗಿಗಳಿಗೆ ಪ್ರಯೋಜನಕರವಾದ ಸೌಲಭ್ಯಗಳನ್ನು ಕೈಗೆತ್ತಿಕೊಳ್ಳಬೇಕು. ಅಲ್ಲದೆ, ಅಭಿವೃದ್ಧಿ ಸೌಲಭ್ಯಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು. ವೆನ್‌ಲಾಕ್ ಕಚೇರಿ ಸಿಬ್ಬಂದಿಗಳ ವೇತನ ಬಿಲ್ಲನ್ನು 2015 ರ ಜನವರಿಯಿಂದ ಬಯೋಮೆಟ್ರಿಕ್ ಆಧಾರದಲ್ಲಿ ಸಿದ್ಧಗಿಳಿಸುವಂತೆ ಸೂಚಿಸಿದರು. ವೆನ್‌ಲಾಕ್ ಆಸ್ಪತ್ರೆಯು ಸರಕಾರಿ ಸಂಸ್ಥೆಯಾಗಿರುವುದರಿಂದ ಆದಾಯ ತೆರಿಗೆಯಲ್ಲಿ ವಿನಾಯಿತಿ ಕೋರಿ ಐಟಿ ಟ್ರಿಬ್ಯುನಲ್‌ಗೆ ಅಪೀಲು ಸಲ್ಲಿಸಲು ಅವರು ಸೂಚಿಸಿದರು.

ಸಭೆಯಲ್ಲಿ ವೆನ್‌ಲಾಕ್ ಆಸ್ಪತ್ರೆಯ ವಿವಿಧ ಸೌಲಭ್ಯಗಳಿಗೆ ಆರೋಗ್ಯ ರಕ್ಷಾ ಸಮಿತಿಯಿಂದ ಅನುದಾನ ಬಿಡುಗಡೆಗೆ ಒಪ್ಪಿಗೆ ನೀಡಲಾಯಿತು. ಅಲ್ಲದೆ, ವಿವಿಧ ಖರ್ಚುವೆಚ್ಚಗಳಿಗೆ ಮಂಜೂರಾತಿ ನೀಡಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇಣಿ, ಲೇಡಿಘೋಷನ್ ಅಧೀಕ್ಷಕಿ ಡಾ.ಶಕುಂತಳಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Write A Comment