ಮಂಗಳೂರು ಡಿ.09: ಹಾಸನ ಪ್ರಾದೇಶಿಕದ ವ್ಯಾಪ್ತಿಗೊಳಪಡುವ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಅಧಿಕಾರಿ ಹಾಗೂ ನಿರೀಕ್ಷಕರುಗಳ ಕಾರ್ಯದ ಪ್ರಗತಿ ಪರಿಶೀಲನಾ ಸಭೆ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರಿನ ಜಿಲ್ಲಾಧಿಕಾರಿಯವರ ಕಚೇರಿಯ ಸಭಾಂಗಣದಲ್ಲಿ ನಡೆಯಿತು. ಇಲಾಖೆಯ ಅಧಿಕಾರಿಗಳು ಮತ್ತು ನಿರೀಕ್ಷಕರುಗಳಿಗೆ 2014-15 ನೇ ಸಾಲಿನಲ್ಲಿ ನೀಡಿರುವ ಆರ್ ಎಫ್ ಡಿ (ರಿಸಲ್ಟ್ ಫ್ರೇಮ್ ವರ್ಕ್ ಡಾಕ್ಯುಮೆಂಟ್-ಫಲಿತಾಂಶ ಚೌಕಟ್ಟು ದಾಖಲೆ) ಯಡಿ ಗುರಿಗಳನ್ನು ಸಾಧಿಸಿರುವ ಬಗ್ಗೆ ಕಾರ್ಮಿಕ ಆಯುಕ್ತರಾದ ಡಾ. ಡಿ. ಎಸ್. ವಿಶ್ವನಾಥ್ ರವರು ಪ್ರಗತಿ ಪರಿಶೀಲನೆ ನಡೆಸಿದರು.
ಕಾರ್ಮಿಕ ಆಯುಕ್ತರು, ಪ್ರಗತಿ ಪರಿಶೀಲನೆ ವೇಳೆ ಅಧಿಕಾರಿಗಳು ಮತ್ತು ನಿರೀಕ್ಷಕರು, ಅಸಂಘಟಿತ ಕಾರ್ಮಿಕರ ಭದ್ರತೆ ಮತ್ತು ಅಭ್ಯುದಯಕ್ಕಾಗಿ ಇಲಾಖೆಯು ಅನುಷ್ಟಾನಗೊಳಿಸುತ್ತಿರುವ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆ ಹಾಗೂ ನ್ಯೂ ಪೆನ್ಷನ್ ಸ್ವಾವಲಂಭನ್ ಲೈಟ್ ಯೋಜನೆಗಳಡಿ ಸಾಧಿಸಿರುವ ಪ್ರಗತಿಯನ್ನು ಪರಿಶೀಲಿಸಿ ಇನ್ನೂ ಹೆಚ್ಚಿನ ಮಟ್ಟದ ಗುರಿಗಳನ್ನು ಸಾಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ನೊಂದಣಿ ಹಾಗೂ ಫಲಾನುಭವಿಗಳ ಕ್ಲೇಮು ವಿಲೇವಾರಿ ಬಗ್ಗೆ ಗಮನಹರಿಸಿ ಅಪಾರ ಬಡಜನರಿಗೆ ಯೋಜನೆಯ ಫಲವನ್ನು ದೊರಕಿಸಿಕೊಡಲು ತಿಳಿಸಿದರು. ಬಾಲ ಕಾರ್ಮಿಕರ ನೇಮಕಾತಿ ಪ್ರಕರಣಗಳನ್ನು ಪತ್ತೆಹಚ್ಚಿ ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಹಾಗೂ ದುಡಿಮೆಯಿಂದ ಬಿಡುಗಡೆಗೊಳಿಸಲ್ಪಟ್ಟ ಬಾಲ ಕಾರ್ಮಿಕರಿಗೆ ಪುನರ್ ವಸತಿ ಕಲ್ಪಿಸಲು ತಪ್ಪಿತಸ್ಥ ಮಾಲೀಕರಿಂದ ರೂ.20,000/ಗಳನ್ನು ವಸೂಲಾತಿಗೆ ಶೀಘ್ರವಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.
ತದನಂತರ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯ ಅನುಷ್ಟಾನದ ಬಗ್ಗೆ ಕಾರ್ಯಾಗಾರದಲ್ಲಿ ಮಾತನಾಡುತ್ತಾ ಹಾಸನ ಪ್ರಾದೇಶಿಕದ ಎಲ್ಲ ಜಿಲ್ಲೆಗಳಲ್ಲಿ ಈಗಾಗಲೇ ಗುರುತಿಸಿಲ್ಪಟ್ಟಿರುವ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡು ವಿತರಿಸಬೇಕೆಂದು, ಈ ನಿಟ್ಟಿನಲ್ಲಿ ಇಲಾಖಾ ಅಧಿಕಾರಿಗಳು ಮತ್ತು ಸಂಬಂಧಿಸಿದ ವಿಮಾ ಕಂಪೆನಿ ಪ್ರತಿನಿಧಿಗಳು ಉತ್ತಮ ಸಹಕಾರ ಹಾಗೂ ಸಂಯೋಜನೆಯೊಂದಿಗೆ ಕೆಲಸ ಮಾಡಬೇಕೆಂದು, ಯೋಜನೆಯ ಫಲ ಪೂರ್ಣ ಪ್ರಮಾಣದಲ್ಲಿ ಎಲ್ಲ ಫಲಾನುಭವಿಗಳಿಗೆ ತಲುಪಬೇಕೆಂದು ತಿಳಿಸಿದರು. ಯೋಜನೆಯ ಅನುಷ್ಠಾನದಲ್ಲಿ ಅಧಿಕಾರಿಗಳು ವ್ಯಕ್ತಪಡಿಸಿದ ಪ್ರಾಯೋಗಿಕ ಸಮಸ್ಯೆಗಳ ಬಗ್ಗೆ ಸಂದರ್ಭಾನುಸಾರ ಪರಾಮರ್ಶಿಸಿ ಸ್ಥಳದಲ್ಲಿಯೇ ಪರಿಹಾರ ಕ್ರಮ ಕೈಗೊಳ್ಳಲು ಸೂಚಿಸಿದರು.
ಸಭೆಯಲ್ಲಿ ಕಾರ್ಮಿಕ ಇಲಾಖೆಯು ಅನುಷ್ಟಾನಗೊಳಿಸುತ್ತಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆ, ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆ, ನ್ಯೂ ಪೆನ್ಷನ್ ಸ್ವಾವಲಂಭನ್ ಲೈಟ್ ಹಾಗೂ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸೌಲಭ್ಯ ಪಡೆಯಲು ಕಾರ್ಮಿಕ ಇಲಾಖಾ ಕಚೇರಿಗಳನ್ನು ಸಂಪರ್ಕಿಸಬಹುದಾಗಿರುತ್ತದೆ. ತಾಲ್ಲೂಕು ಮಟ್ಟದಲ್ಲಿ ಕಾರ್ಮಿಕ ನಿರೀಕ್ಷಕರು / ಹಿರಿಯ ಕಾರ್ಮಿಕ ನಿರೀಕ್ಷಕರು , ಜಿಲ್ಲಾ ಮಟ್ಟದಲ್ಲಿ ಕಾರ್ಮಿಕ ಅಧಿಕಾರಿಗಳು ಹಾಗೂ ಸಹಾಯಕ ಕಾರ್ಮಿಕ ಆಯುಕ್ತರು ಸಾರ್ವಜನಿಕರಿಗೆ ಅಗತ್ಯ ಮಾಹಿತಿ ಮತ್ತು ಯೋಜನೆಯನ್ನು ದೊರಕಿಸಿಕೊಡಲು ಬದ್ಧರಾಗಿದ್ದು ಈ ಯೋಜನೆಯ ಉಪಯೋಗವನ್ನು ಅರ್ಹ ಅಸಂಘಟಿತ ಕಾರ್ಮಿಕರು ಪಡೆದುಕೊಂಡು ತಮ್ಮ ಕುಟುಂಬ ಮತ್ತು ತಮ್ಮ ಅವಲಂಬಿತರಿಗೆ ಉತ್ತಮ ಜೀವನವನ್ನು ದೊರಕಿಸಿಕೊಡಬಹುದಾಗಿರುತ್ತದೆಂದು ತಿಳಿಸಿದರು.
ಸಭೆಯಲ್ಲಿ ಇ. ಲಕ್ಷ್ಮಪ್ಪ, ಜಂಟಿ ಕಾರ್ಮಿಕ ಆಯುಕ್ತರು ಹಾಗೂ ಸಿಇಒ, ಆರ್ ಎಸ್ ಬಿ ವೈ, ಬೆಂಗಳೂರು, ಡಾ. ಬಾಲಕೃಷ್ಣ ಸಿ ಎಚ್. ಉಪಕಾರ್ಮಿಕ ಆಯುಕ್ತರು, ಹಾಸನ ಪ್ರಾದೇಶಿಕ, ಹಾಸನ ಹಾಗೂ ಶಾಂತವೀರ್ ಪಾಟೀಲ್, ಸೀನಿಯರ್ ಕನ್ಸಲ್ಟೆಂಟ್, ಹಾಗೂ ಬಾಲಸುಬ್ರಹ್ಮಣ್ಯ, ವೈಸ್ ಪ್ರೆಸಿಡೆಂಟ್, ಐಸಿಐಸಿಐ ಲೊಂಬಾರ್ಡ ಜನರಲ್ ಇನ್ಸೂರೆನ್ಸ್ ಕಂಪೆನಿ ಹಾಗೂ ಇನ್ನಿತರರು ಹಾಜರಿದ್ದು, ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದರು ಎಂದು ಸಹಾಯಕ ಕಾರ್ಮಿಕ ಆಯುಕ್ತರು,ಮಂಗಳೂರು ವಿಭಾಗ, ಮಂಗಳೂರು ಇವರು ತಿಳಿಸಿರುತ್ತಾರೆ.