ಕನ್ನಡ ವಾರ್ತೆಗಳು

ನವೋದಯ ಟ್ರಸ್ಟ್‌ನಿಂದ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಶ್ಲಾಘನೀಯ : ಸಚಿವ ರಮಾನಾಥ ರೈ

Pinterest LinkedIn Tumblr

tma_pai_photo_1

ಮಂಗಳೂರು, ಡಿ.9: ಮಹಿಳೆಯರು ಅಬಲೆಯರಲ್ಲ. ಅವರನ್ನು ಶೋಷಿಸುವ ಸಲುವಾಗಿ ಶೋಷಕರು ‘ಅಬಲೆ’ ಎಂದು ಹೇಳಿಕೊಳ್ಳುತ್ತಿದ್ದಾರೆ. ಒಂದಿಡೀ ಮನೆಯನ್ನು ಸಂಭಾಳಿಸುವ, ಮನೆಯ ಗೌರವ ಕಾಪಾಡುವ ಮಹಿಳೆಯರಿಗೆ ಶಕ್ತಿ ನೀಡಿದರೆ, ಪ್ರೇರಣೆ ನೀಡಿದರೆ ಅವರು ಸಮಾಜವನ್ನೂ ಮುನ್ನಡೆಸಬಲ್ಲರು. ಅಂತಹ ಶಕ್ತಿಯನ್ನು ನವೋದಯ ಟ್ರಸ್ಟ್‌ನ ಸರ್ವ ಸದಸ್ಯರೂ ಪಡೆದುಕೊಂಡಿದ್ದಾರೆ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಹಾಗೂ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ. ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೋಮವಾರ ನಗರದಲ್ಲಿ ನಡೆದ ‘ಪ್ರೇರಣಾ’ ಸಮಾವೇಶದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

tma_pai_photo_2 tma_pai_photo_3 tma_pai_photo_4

ಇಂದು ಮಹಿಳೆ ನಾಲ್ಕು ಗೋಡೆಗೆ ಸೀಮಿತವಾಗಿಲ್ಲ. ಅವರಲ್ಲೂ ಸ್ವಾವಲಂಬಿ ಬದುಕು ಕಾಣಿಸಿಕೊಂಡಿದೆ. ಆರ್ಥಿಕ ಶಕ್ತಿಯನ್ನು ವೃದ್ಧಿಸುವುದರ ಜೊತೆಗೆ ಮಕ್ಕಳ ವಿದ್ಯಾಭ್ಯಾಸದ ಕಡೆಗೂ ಗಮನಹರಿಸಿದ್ದಾರೆ ಎಂದ ಡಾ.ಎಂ.ಎನ್.ರಾಜೇಂದ್ರ ಕುಮಾರ್, ರಾಜ್ಯ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಸ್ವಸಹಾಯ ಸಂಘಟನೆಗಳಿಗೆ ಶೇ.2 ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ಘೋಷಿಸಿದ್ದರೂ ಈವರೆಗೆ ಅದು ಅನುಷ್ಠಾನಗೊಂಡಿಲ್ಲ. ಅಲ್ಲದೆ ರಾಜ್ಯ ಸರಕಾರವು ಸ್ತ್ರೀ ಶಕ್ತಿ ಸಂಘಟನೆಗಳಿಗೆ ನೀಡುವ ಎಲ್ಲಾ ಸವಲತ್ತುಗಳನ್ನು ನವೋದಯದಂತಹ ಸ್ತ್ರೀ ಶಕ್ತಿ ಸಂಘಟನೆಗಳಿಗೂ ನೀಡಬೇಕು ಎಂದು ಆಗ್ರಹಿಸಿದರು.

tma_pai_photo_4 tma_pai_photo_5 tma_pai_photo_6

‘ಸಮಸ್ಯೆಗಳ ಅರಿವು ಮಹಿಳೆಯರಿಗೆ ಇದೆ’
ಸಮಾವೇಶ ಉದ್ಘಾಟಿಸಿ, ‘ಸ್ವಾವಲಂಬನೆ 2014’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಎಲ್ಲಾ ಸಮಸ್ಯೆಗಳ ಅರಿವು ಮಹಿಳೆಯರಿಗೆ ಇದೆ. ಅವರಿಗೆ ಶಕ್ತಿ ನೀಡಿದರೆ ಅದನ್ನು ನಿಭಾಯಿಸಬಲ್ಲರು. ನವೋದಯದ ಮೂಲಕ ರಾಜೇಂದ್ರ ಕುಮಾರ್ ಮಹಿಳೆಯರಿಗೆ ಶಕ್ತಿ ನೀಡಿದ್ದಾರೆ ಎಂದರು. ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂಬ ಅಪವಾದವಿತ್ತು. ಈಗ ಅದು ದೂರವಾಗಿದೆ. ಮೀಸಲಾತಿಯ ಲಾಭ ಪಡೆದ ಮಹಿಳೆಯರು ರಾಜಕೀಯವಾಗಿ ಇಂದು ಅನೇಕ ಜವಾಬ್ದಾರಿಗಳನ್ನು ವಹಿಸಿದ್ದಾರೆ. ಅವಕಾಶ ನೀಡಿದರೆ ಹೇಗೆ ನಿಭಾಯಿಸಬಲ್ಲರು ಎಂಬುದಕ್ಕೆ ಇಂದಿರಾಗಾಂಧಿ ದೇಶದ ಪ್ರಧಾನಿ ಯಾಗಿ ಆಡಳಿತ ನಡೆಸಿರುವುದು ಸಾಕ್ಷಿ ಎಂದು ಸಚಿವ ರೈ ಹೇಳಿದರು.

tma_pai_photo_7 tma_pai_photo_8 tma_pai_photo_9

ಸಮಾರಂಭದಲ್ಲಿ ಉದ್ಯಮಿ ರೋಹನ್ ಮೊಂತೆರೋ, ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್ಯ, ಬಾಬು ಬಿಲ್ಲವ, ಸುದರ್ಶನ ಜೈನ್, ಟ್ರಸ್ಟಿ ಮೋನಪ್ಪ ಶೆಟ್ಟಿ, ವಾದಿರಾಜ ಶೆಟ್ಟಿ, ಸುನೀಲ್ ಕುಮಾರ್, ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಸದಾಶಿವ ಉಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು. ‘ಸ್ವಾವಲಂಬನೆ’ ಸ್ಮರಣ ಸಂಚಿಕೆಯ ಸಂಪಾದಕ ರತ್ನಾಕರ ಶೆಟ್ಟಿ, ಸಂಪಾದಕೀಯ ಮಂಡಳಿಯ ಸದಸ್ಯರಾದ ಗೋಪಿನಾಥ ಹೆಗಡೆ, ಪದ್ಮನಾಭ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್‌ನ ಟ್ರಸ್ಟಿ ಭಾಸ್ಕರ ಎಸ್.ಕೋಟ್ಯಾನ್ ಸ್ವಾಗತಿಸಿದರು. ಸದಸ್ಯೆ ಸುಗಂಧಿ ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಶೆಟ್ಟಿ ವಂದಿಸಿದರು. ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Write A Comment