ಕನ್ನಡ ವಾರ್ತೆಗಳು

ಕೋಟೇಶ್ವರ ಕೋಟಿಲಿಂಗೇಶ್ವರನಿಗೆ ಇಂದು ‘ಕೊಡಿ ಹಬ್ಬ’ದ ಸಂಭ್ರಮ

Pinterest LinkedIn Tumblr

kotilingeshvara

ಕುಂದಾಪುರ: ಇತಿಹಾಸದ ಪುಟಗಳಲ್ಲಿ ಧ್ವಜಪುರವೆಂದು ಪ್ರಸಿದ್ದಿಯಾದ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವರಿಗೆ ಇಂದು ನಡೆಯುವ ಬ್ರಹ್ಮರಥೋತ್ಸವ ಹಾಗೂ ’ಕೊಡಿ’ ಹಬ್ಬಕ್ಕಾಗಿ ದೇಶ-ವಿದೇಶದಲ್ಲಿರುವ ತಾಲ್ಲೂಕಿನ ಆಸ್ತಿಕರು ಊರಿಗೆ ಆಗಮಿಸಿದ್ದಾರೆ.

ವೈಶ್ಚಿಕಮಾಸದಂದು ನಡೆಯುವ ಇಲ್ಲಿನ ಬ್ರಹ್ಮರಥೋತ್ಸವಕ್ಕೆ ಶತಮಾನಗಳ ಇತಿಹಾಸವಿದೆ. ಕೋಟಿಲಿಂಗೇಶ್ವರದ ಉತ್ಸವ ಮೂರ್ತಿಯನ್ನು ಕುರಿಸಿ ಎಳೆಯುವ ಬ್ರಹ್ಮರಥ ರಾಜ್ಯದಲ್ಲಿರುವ ಬ್ರಹ್ಮ ರಥಗಳ ಪೈಕಿ ದೊಡ್ಡದು ಎನ್ನುವ ಹೆಗ್ಗಳಿಕೆ ಗಳಿಸಿದೆ.

Koteshwara_Kodi_Habba (2)

 

kotilingeshvara (2)

ವಾರ್ಷಿಕ ಉತ್ಸವವನ್ನು 7 ದಿನಗಳ ಕಾಲ ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ದೇವಸ್ಥಾನದಲ್ಲಿನ ಧ್ವಜ ಸ್ತಂಭಕ್ಕೆ ಗರ್ನಪಠಾರೋಹಣ (ಗರ್ನ ಕಟ್ಟುವುದು) ನಡೆದ ಬಳಿಕ, ಉತ್ಸವದ ಧಾರ್ಮಿಕ ವಿಧಿಗಳು ಪ್ರಾರಂಭವಾಗುತ್ತದೆ. ಜಾತ್ರೆಯ ಪೂರ್ವಭಾವಿಯಾಗಿ ಸುತ್ತ-ಮುತ್ತಲಿನ ಗ್ರಾಮಗಳಿಗೆ ಕೋಟಿಲಿಂಗೇಶ್ವರ ಕಟ್ಟ ಸೇವೆ ನಡೆಯುತ್ತದೆ. ಕಟ್ಟ ಕಟ್ಟಳೆ ಸೇವೆಯಾದ ಕಟ್ಟೆ ಸೇವೆಗಾಗಿ ಬರುವ ಶ್ರೀ ದೇವರನ್ನು ಆ ಭಾಗದ ಜನ ಅತ್ಯಂತ ಶೃದ್ದೆಯಿಂದ ಬರಮಾಡಿಕೊಂಡು ಪೂಜೆಯನ್ನು ಸಲ್ಲಿಸುವುದು ವಾಡಿಕೆ. ರಥೋತ್ಸವದ ಮಾರನೇ ದಿನ ನಡೆಯುವ ಓಕುಳಿ ಸೇವೆಯನ್ನು ಉತ್ಸವದ ಪ್ರಮುಖ ನಡವಳಿಗಳಲ್ಲಿ ಒಂದು ಪರಿಗಣಿಸಲಾಗಿದೆ.

ಕೊಡಿ ಹಬ್ಬ: ಅವಿಭಜಿತ ದ.ಕ ಜಿಲ್ಲೆಯ ಜನ ಕೋಟೇಶ್ವರದ ಬ್ರಹ್ಮ ರಥೋತ್ಸವವನ್ನು ಗುರುತಿಸುವುದು ’ಕೊಡಿ ಹಬ್ಬ’ ಎಂದು. ಈ ಹೆಸರು ಹುಟ್ಟಿಕೊಳ್ಳಲು ಹಲವು ಕಾರಣಗಳನ್ನು ಹೇಳಲಾಗುತ್ತಿದೆ. ಮಾಹಿಷ್ಮತಿ ರಾಜನಾದ ವಸು ಮಹಾರಾಜ ಕೋಟಿಲಿಂಗೇಶ್ವರಿನಿಗೆ ಬ್ರಹ್ಮ ರಥ ಅರ್ಪಣೆ ಮಾಡಲು ತೀರ್ಮಾನಿಸಿ, ಶಿಲ್ಪಗಳಿಗೆ ರಥದ ರಚನೆಗಾಗಿ ಆದೇಶಿಸುತ್ತಾನೆ, ಆದರೆ ಜಾತ್ರೆಯ ದಿನಕ್ಕೆ ರಥ ನಿರ್ಮಾಣ ಸಾಧ್ಯವಾಗದೆ ಇದ್ದುದರಿಂದಾಗಿ, ಕೊಡಿ (ಬಿದಿರು) ಯಿಂದ ನಿರ್ಮಿಸಿದ ರಥದಲ್ಲಿ ಉತ್ಸವ ನಡೆಯಿತು ಎನ್ನುವ ಕಾರಣದಿಂದ ಈ ಹಬ್ಬ ಕೊಡಿ ಹಬ್ಬವಾಯಿತು ಎನ್ನುವ ನಂಬಿಕೆ ಇದೆ.

ಈ ವರ್ಷ ಮದುವೆಯಾದ ದಂಪತಿಗಳು ಕೋಟೇಶ್ವರದ ಜಾತ್ರೆಗೆ ಬಂದು ದೇವರ ದರ್ಶನ ಮಾಡಿ ಕೊಡಿ (ಕಬ್ಬಿನ ಜಲ್ಲೆ) ಯನ್ನು ತೆಗೆದುಕೊಂಡು ಹೋದರೆ, ದಂಪತಿಗಳ ಬಾಳಿನಲ್ಲಿ ಕೊಡಿ ಅರಳುತ್ತದೆ ಎನ್ನುವ ನಂಬಿಕೆಗಳು ಇರುವುದರಿಂದ ಕೊಡಿ ಹಬ್ಬದಲ್ಲಿ ನವ ದಂಪತಿಗಳ ಜಾತ್ರೆಯೇ ನಡೆಯುತ್ತದೆ.

Koteshwara_Kodi_Habba

ಕೋಟಿ ತೀರ್ಥ: ಪರಶುಪಾರ ಸೃಷ್ಟಿಯ ಸಪ್ತ ಕ್ಷೇತ್ರಗಳಲ್ಲಿ ಒಂದಾಗಿರುವ ಈ ಕ್ಷೇತ್ರದ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಿದೆ. ಕೋಟಿ ಋಷಿಗಳು ಒಂದಾಗಿ ತಪ್ಪಸ್ಸು ಮಾಡಿದ ಮೋಕ್ಷ ಕ್ಷೇತ್ರ ಎನ್ನುವ ನಂಬಿಕೆಗಳು ಆಸ್ತಕರಲ್ಲಿದೆ. ದೇವಾಲಯದ ನಿರ್ಮಾಣಕ್ಕೆ ಬಳಸಿರುವ ಬ್ರಹದಾಕಾರದ ಶಿಲೆಗಳು ನೋಡುಗರಲ್ಲಿ ಆಶ್ಚರ್ಯ ಮೂಡಿಸುತ್ತದೆ. ಮೇಲ್ಛಾವಣೆಗಾಗಿ ಜೋಡಿಸಲಾದ ಕಲ್ಲುಗಳ ಅಡಿಗೆ ನಿಂತು ಮೇಲೆ ದೃಷ್ಟಿ ಹಾಯಿಸಿದರೆ ಭಯ ಹುಟ್ಟಿಸುವಂತೆ ದೇವಾಲಯದ ನಿರ್ಮಾಣವಾಗಿದೆ.
ಭಕ್ತರನ್ನು ಹಾಗೂ ಪ್ರವಾಸಿಗರನ್ನು ಅತ್ಯಂತ ಆಕರ್ಷಿಸುವುದು ಇಲ್ಲಿನ ಪುಷ್ಕರಣಿ. ಅಂದಾಜು 4.5 ಎಕ್ರೆ ವಿಸ್ತಿರ್ಣವನ್ನು ಹೊಂದಿರುವ ಕೋಟಿ ತೀರ್ಥ ಪುಷ್ಕರಣಿಯನ್ನು ಬ್ರಹ್ಮ ದೇವನೆ ನಿರ್ಮಿಸಿದ್ದಾನೆ ಎನ್ನುವ ಪ್ರತೀತಿ ಇದೆ. ಬ್ರಹ್ಮ ರಥೋತ್ಸವದಂದು ಇಲ್ಲಿ ಸ್ನಾನ ಮಾಡುವುದರಿಂದಾಗಿ ಕರ್ಮಾದಿ ದೋಷಗಳು ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಇದೆ. ನಸುಕಿನಲ್ಲಿ ಇಲ್ಲಿಗೆ ಆಗಮಿಸುವ ಭಕ್ತರು ಪುಷ್ಕರಣಿಯಲ್ಲಿ ಸ್ನಾನ ಮಾಡಿ, ಸರೋವರದ ಸುತ್ತು ಬಿಳಿ ಬಟ್ಟೆಯನ್ನು ಹಾಸಿರುವ ಅಪೇಕ್ಷಿತರಿಗೆ ಮುಷ್ಠಿ ಅಕ್ಕಿಯನ್ನು ಹಾಕಿ, ದೇವರ ದರ್ಶನ ಪಡೆಯುತ್ತಾರೆ. ಈ ರೀತಿ ನಡೆಯುವ ಸೇವೆಗೆ ’ಸುತ್ತಕ್ಕಿ’ ಸೇವೆ ಎನ್ನುತ್ತಾರೆ.
ವರ್ಷದಿಂದ ವರ್ಷಕ್ಕೆ ಅಕ್ಕಿಯ ಅಪೇಕ್ಷಿತರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ, ಹರಕೆ ಸೇವೆಯ ಪೂರೈಕೆಗಾಗಿ ಬಂದ ಭಕ್ತರು ಸರೋವರಕ್ಕೆ ಎಸೆಯುವ ಅಕ್ಕಿಯಿಂದಾಗಿ ಅಲ್ಲಿರುವ ಮೀನುಗಳ ಜೀವಕ್ಕೆ ಸಂಚಕಾರ ಬಂದ ಘಟನೆಗಳು ನಡೆದಿದೆ.

Koteshwara_Kodi_Habba (1)

ಜಾತಿ-ಮತವನ್ನು ಮೀರಿದ ಕೋಟೇಶ್ವರದ ಕೊಡಿ ಹಬ್ಬದಲ್ಲಿ ಎಲ್ಲ ಧರ್ಮದವರು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಹಬ್ಬ ನಡೆಯುವ ಸಾಕಷ್ಟು ದಿನಗಳ ಮೊದಲೆ ಸಿದ್ದತೆ ಮಾಡಿಕೊಳ್ಳುವ ಸ್ಥಳೀಯರು, ತಮ್ಮ ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸುತ್ತಾರೆ. ಜಾತ್ರೆಯಂದು ಮನೆಗೆ ಬರುವ ಅತಿಥಿಗಳಿಗಾಗಿ ಆತಿಥ್ಯವನ್ನು ನೀಡುತ್ತಾರೆ. ಸ್ಥಳೀಯ ಸಂಘ ಸಂಸ್ಥೆಯವರು ಅಲಂಕಾರಗಳ ಜೊತೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಜನರಿಗೆ ಮನರಂಜನೆ ನೀಡುತ್ತಾರೆ.

Write A Comment