ಕನ್ನಡ ವಾರ್ತೆಗಳು

ಕೋಕ್-ಸಲ್ಫರ್ ಘಟಕ ಪುನಾರಾರಂಭ : ಎಂಆರ್‌ಪಿಎಲ್ ವಿರುದ್ಧ ಜೋಕಟ್ಟೆ ಬಂದ್

Pinterest LinkedIn Tumblr

jokatte_mrpl_photo_5

ಮಂಗಳೂರು, ಡಿ.4: ಎಂಆರ್‌ಪಿಎಲ್ ಮೂರನೆ ಘಟಕದಲ್ಲಿ ಕಾರ್ಯಾಚರಿಸುತ್ತಿರುವ ಕೋಕ್-ಸಲ್ಫರ್ ಘಟಕದಿಂದ ತೊಂದರೆಗೀಡಾದ ತೋಕೂರು-ಜೋಕಟ್ಟೆ ಗ್ರಾಮಸ್ಥರು ಹಲವು ರೀತಿಯ ಪ್ರತಿರೋಧ ತೋರಿದರೂ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಬುಧವಾರ ಸ್ವಯಂ ಪ್ರೇರಿತವಾಗಿ ಜೋಕಟ್ಟೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

jokatte_mrpl_photo_7

ಜೋಕಟ್ಟೆ-ಕಳವಾರು ಗ್ರಾಮಸ್ಥರು ಅಂಗಡಿ ಮುಂಗಟ್ಟುಗಳನ್ನು ಮುಚ್ಚುವುದರೊಂದಿಗೆ ಜೋಕಟ್ಟೆ ಕೆಬಿಎಸ್ ಜಂಕ್ಷನ್ ಬಳಿ ಜಮಾಯಿಸಿ ಎಸ್‌ಇಝೆಡ್ ವಿರುದ್ಧ ಪ್ರತಿಭಟನಾ ಮಂಟಪ ಸ್ಥಾಪಿಸಿದರಲ್ಲದೆ ನಾಗರಿಕರ ಬೇಡಿಕೆಗೆ ಸ್ಪಂದನೆ ಸಿಗುವವರೆಗೆ ಎಂಆರ್‌ಪಿಎಲ್ ವಿರುದ್ಧ ಈ ಮಂಟಪದಲ್ಲಿ ಪ್ರತಿಭಟನಾ ಚಳವಳಿ ಮುಂದುವರಿಸಲು ನಿರ್ಧರಿಸಿದರು. ಬಳಿಕ ಕೆಬಿಎಸ್ ಜಂಕ್ಷನ್‌ನಿಂದ ಎಂಆರ್‌ಪಿಎಲ್‌ವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು.

jokatte_mrpl_photo_4

ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಬಿ.ಎಸ್.ಹುಸೈನ್, ಸಹ ಸಂಚಾಲಕರಾದ ಮೊಯ್ದಿನ್ ಶರೀಫ್, ನಝೀರ್ ಜೋಕಟ್ಟೆ, ಹಕೀಂ ಜೋಕಟ್ಟೆ, ಮಯ್ಯದ್ದಿ ಜಮಾತ್, ಗ್ರಾ.ಪಂ. ಸದಸ್ಯ ಶಂಸುದ್ದೀನ್‌ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ದ.ಕ. ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಮತ್ತಿತರರು ಉಪಸ್ಥಿತರಿದ್ದರು.

ಜನವಸತಿಗೆ ಹೊಂದಿಕೊಂಡಿರುವ ಸೆಝ್ ಜಾಗದಲ್ಲಿ ಕೋಕ್-ಸಲ್ಫರ್ ಘಟಕ ಆರಂಭಗೊಂಡ ಬಳಿಕ ಈ ಪರಿಸರ ದ್ರವ್ಯ ತ್ಯಾಜ್ಯದ ಬೀಡಾಗಿತ್ತು. ಇದನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ, ಧರಣಿ ನಡೆಸಿದ್ದರು. ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಮತ್ತು ಘಟಕದೊಳಗೆ ಪ್ರವೇಶಿಸದಂತೆ ತಡೆಯಲು ಎಂಆರ್‌ಪಿಎಲ್ ಭಾರೀ ಗಾತ್ರದ ತಡೆಗೋಡೆ ನಿರ್ಮಿಸಿತ್ತು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ನಾಗರಿಕರು ಹೋರಾಟ ತೀವ್ರಗೊಳಿಸಲು ಮುಂದಾಗಿದ್ದು, ಇದರ ಮೊದಲ ಭಾಗವಾಗಿ ಜೋಕಟ್ಟೆ ಬಂದ್ ನಡೆಸಿದ್ದಾರೆ.

jokatte_mrpl_photo_3

ಕಳೆದ 2 ವಾರದಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿದ್ದ ಎಂಆರ್‌ಪಿಎಲ್ ಕೋಕ್-ಸಲ್ಫರ್ ಘಟಕದ ಕಾಮಗಾರಿಯನ್ನು ಪೊಲೀಸರ ಸಹಕಾರದಿಂದ ಎರಡು ದಿನಗಳ ಹಿಂದೆ ಪುನರಾರಂಭಿಸಲಾಗಿತ್ತು. ಆದೆ ಪ್ರತಿಭಟನೆ ನಡೆಸುವ ಮಾಹಿತಿ ಲಭಿಸಿದೊಡನೆ ಬುಧವಾರ ಕಾಮಗಾರಿಯನ್ನು ಸ್ಥಗಿತಗೊಳಿಸಿದೆ. ಇದು ಹೋರಾಟಕ್ಕೆ ಸಂದ ಜಯ ಎಂದು ಸಮಿತಿ ತಿಳಿಸಿದೆ.

jokatte_mrpl_photo_6

ಡಿ.7ರಂದು ಗ್ರಾಮಸ್ಥರ ಸಭೆ:
ಎಂಆರ್‌ಪಿಎಲ್‌ನಿಂದ ಎದುರಾಗುವ ಸಮಸ್ಯೆಯ ಬಗ್ಗೆ ಸೂಕ್ತ ನಿರ್ಧಾರ ತಾಳಲು ಗ್ರಾಮಸ್ಥರ ಸಭೆ ಕರೆಯಬೇಕು ಎಂಬ ನಾಗರಿಕ ಹೋರಾಟ ಸಮಿತಿಯ ಆಗ್ರಹದ ಮೇರೆಗೆ ಬುಧವಾರ ತೋಕೂರು-ಜೋಕಟ್ಟೆ ಗ್ರಾ.ಪಂ. ಸಾಮಾನ್ಯ ಸಭೆ ಜರಗಿ ಡಿ.7ರಂದು ವಿಶೇಷ ಗ್ರಾಮ ಸಭೆ ನಡೆಸಲು ನಿರ್ಧರಿಸಿದೆ.

Write A Comment