ಕನ್ನಡ ವಾರ್ತೆಗಳು

ಕಾರ್ಕಳ ಮಹಾಮಸ್ತಕಾಭಿಷೇಕ ತಯಾರಿ ದೆಹಲಿಯಲ್ಲಿ ಕೇಂದ್ರ ಸಚಿವರಿಂದ ಮಹತ್ವದ ಸಭೆ

Pinterest LinkedIn Tumblr

karkal_maha_mathaskabiseka

ನವದೆಹಲಿ,ಡಿ.02 : ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೊದ್ಯಮ ಸಚಿವ ಡಾ.ಮಹೇಶ್ ಶರ್ಮ ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಪೂರ್ವತಯಾರಿ ನಿಮಿತ್ತ ವಿಶೇಷ ಸಭೆಯನ್ನು ದೆಹಲಿ ತಮ್ಮ ಕಚೇರಿಯಲ್ಲಿ ನಡೆಸಿದರು. ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಮೂರ್ತಿಯು ಪುರಾತತ್ವ ಇಲಾಖೆಯಿಂದ ಘೋಷಿತ ರಾಷ್ಟ್ರೀಯ ಸ್ಮಾರಕವಾಗಿದ್ದು, ಈಮೂರ್ತಿಯ ಮಹಾಮಸ್ತಕಾಭಿಷೇಕವು 12 ವರ್ಷಗಳಿಗೊಮ್ಮೆ ಅತ್ಯಂತ ವೈಭವದಿಂದ ನಡೆಯುತ್ತದೆ. ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತಾಧಿಗಳು 10 ದಿನ ಪರ್ಯಂತ ನಡೆಯುವ ಈ ಧಾರ್ಮಿಕ ಮಹೋತ್ಸವದಲ್ಲಿ ಭಾಗವಹಿಸುತ್ತಾರೆ. ತ್ಯಾಗ, ಅಹಿಂಸೆ ಮತ್ತು ಧರ್ಮದ ಸಂದೇಶವನ್ನು ಜಗತ್ತಿಗೆ ಸಾರುವ ಈ ಕಾರ್ಯಕ್ರಮದ ಯಶಸ್ಸಿನಲ್ಲಿ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆ ಮಹತ್ವದ ಪಾತ್ರ ವಹಿಸಿಬೇಕಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಕು.ಶೋಭಾ ಕರಂದ್ಲಾಜೆಯವರು ನೂತನ ಸಚಿವರಿಗೆ ವಿವರಿಸಿದರು.

ಮಹಾಮಸ್ತಕಾಭಿಷೇಕ ಮಹೋತ್ಸವ ಜೈನರ ಕುಂಭಮೇಳಕ್ಕೆ ಸಮಾನಾಗಿದ್ದು ಕರ್ನಾಟಕದಲ್ಲಿ ಧಾರ್ಮಿಕ, ಪ್ರವಾಸೋದ್ಯಮವನ್ನು ಅಭಿವೃದ್ದಿ ಪಡಿಸಲು ಭಗವಾನ್ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕವು ಬಹುದೊಡ್ಡ ಅವಕಾಶವನ್ನು ನೀಡಿದೆ. ಈ ಸಂದರ್ಭವನ್ನು ಬಳಸಿಕೊಂಡು ಕರ್ನಾಟಕದಲ್ಲಿ ಧಾರ್ಮಿಕ ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸಲು ಸಮಗ್ರ ನೀತಿ ರೂಪಿಸಾಬೇಕಾಗಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ, ಶಿವಮೊಗ್ಗದ ಸಂಸದ ಶ್ರೀ ಬಿ.ಎಸ್.ಯಡಿಯುರಪ್ಪನವರು ಸಚಿವರಿಗೆ ಮನವರಿಕೆ ಮಾಡಿದರು. ಕರ್ನಾಟಕದ ಕರಾವಳಿ ಪರಿಸರ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವನ್ನು ಹೊಂದಿದೆ. ಒಂದೆಡೆಯಲ್ಲಿ ಸಮುದ್ರ ತೀರ ಮತ್ತೊಂದೆಡೆಯಲ್ಲಿ ಸಹ್ಯಾದ್ರಿ ಪರ್ವತ ಶ್ರೇಣಿಗಳು ಮತ್ತು ನಡುವಿನಲ್ಲಿ ಪ್ರಸಿದ್ದ ಧಾರ್ಮಿಕ ಶೃದ್ದಾ ಕೇಂದ್ರಗಳನ್ನು ಒಳಗೊಂಡಿರುವ ಕರ್ನಾಟಕ ಕರಾವಳಿಯಲ್ಲಿ ಪ್ರವಾಸೊದ್ಯಮವನ್ನು ಅಭಿವೃದ್ದಿಪಡಿಸಲು ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಸಂಭ್ರಮದ ಸಂದರ್ಭವನ್ನು ಬಳಸಿಕೊಳ್ಳಬೇಕಾದೆ ಎಂದು ಮಂಗಳೂರು ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಇವರು ವಿವರಿಸಿದರು.

ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಡಾ.ಮಹೇಶ್ ಶರ್ಮ ತಾವು ಸ್ವತಃ ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಉತ್ಸವದಲ್ಲಿ ಭಾಗವಹಿಸುತ್ತೇನೆ. ಈ ಸಂದರ್ಭದಲ್ಲಿ ಪುರಾತತ್ವ ಇಲಾಖೆಯಿಂದ ಎಲ್ಲಾ ಸಹಕಾರಗಳನ್ನು ಕೊಡಿಸುತ್ತೇನೆ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಇದಕ್ಕೆ ಬೇಕಾದ ಪ್ರಚಾರ ಹಾಗೂ ಪ್ರೋತ್ಸಾಹಗಳನ್ನು ಈ ಸಂದರ್ಭದಲ್ಲಿ ನೀಡಲಾಗುವುದು, ರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಪ್ರದರ್ಶಿಸಲಾಗುವುದು ಮತ್ತು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮಹತ್ವ ಹಾಗೂ ಪರಂಪರೆಗಳನ್ನು ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯದರ್ಶಿ ಶ್ರೀ ಎಂ.ಕೆ.ಸುವ್ರತ್ ಕುಮಾರ್ ಪ್ರಸ್ತಾಪಿಸಿದರು. ಕೇಂದ್ರ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ, ಪುರಾತತ್ವ ಇಲಾಖೆಯ ಮಹಾನಿರ್ದೇಶಕರು ಹಾಗೂ ಮಹಾಮಸ್ತಕಾಭಿಷೇಕ ಸಮಿತಿಯ ಶ್ರೀ ನಿರಂಜನ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Write A Comment