ಮಂಗಳೂರು, ಡಿ.2: ಅಪರಾಧ ತಡೆ ಅಥವಾ ನಿಯಂತ್ರಣ ಕಾರ್ಯದಲ್ಲಿ ಪೊಲೀಸ್ ಇಲಾಖೆ, ಸರಕಾರದ ಜತೆಗೆ ನಾಗರಿಕರು ಹಾಗೂ ಸೇವಾ ಸಂಸ್ಥೆಗಳೂ ಕೈ ಜೋಡಿಸಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕರೆ ನೀಡಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಮತ್ತು ದ.ಕ. ಜಿಲ್ಲಾ ಪೊಲೀಸ್ ಘಟಕದ ಆಶ್ರಯದಲ್ಲಿ ನಗರದ ಜಿಲ್ಲಾ ಪೊಲೀಸ್ ಸಮುದಾಯ ಭವನದಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅಪರಾಧ ತಡೆಯ ಕುರಿತಂತೆ ಸಾಮಾಜಿಕವಾಗಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಾಗಿದೆ. ಅಪರಾಧ ಜಗತ್ತು ಸೃಷ್ಟಿಗೆ ಏನು ಕಾರಣ ಎಂಬುದು ತಿಳಿಯುವುದು ಕಷ್ಟ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸುವ ಜತೆಗೆ ಇಲಾಖೆಗಳ ಜತೆ ಸಹಕರಿಸಬೇಕು ಎಂದು ಸಚಿವ ರೈ ನುಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಂಗಳೂರು ವಲಯ ಅಭಿಯೋಜನಾ ಇಲಾಖೆಯ ಹಿರಿಯ ಕಾನೂನು ಅಧಿಕಾರಿ ಎಂ.ವಿ.ಭಟ್ ಪನ್ನೆ, ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ಸಾಕಷ್ಟು ಕಾನೂನುಗಳು ಜಾರಿಯಾಗಿದ್ದು, ಈ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ನೀಡುವ, ಪ್ರಚಾರ ನೀಡುವ ಕೆಲಸ ಆಗಬೇಕು ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಮಾತನಾಡಿ, ಹೈಟೆಕ್ ಅಪರಾಧಗಳೇ ಹೆಚ್ಚಾಗಿ ಸಂಭವಿಸುತ್ತಿದ್ದು, ಇದನ್ನು ತಡೆಯುವಲ್ಲಿ ಇಲಾಖೆಯಿಂದ ಮಾತ್ರವೇ ಅಸಾಧ್ಯವಾಗಿದೆ. ಕಾನೂನು ರಚಿಸುವವರು, ಮಾಧ್ಯಮ ಹಾಗೂ ಸಮಾಜ ಕೂಡಾ ಅಪರಾಧ ತಡೆಯುವ ನಿಟ್ಟಿನಲ್ಲಿ ಜವಾಬ್ದಾರಿ ಯುತವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಶರಣಪ್ಪ ಎಸ್.ಡಿ. ಉಪಸ್ಥಿತರಿದ್ದರು. ಮಂಗಳೂರು ನಗರ ಪೊಲೀಸ್ ಆಯುಕ್ತ ಆರ್.ಹಿತೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶೇಖರಪ್ಪ ಸ್ವಾಗತಿಸಿದರು. ಇಂದ್ರಾವತಿ ಪ್ರಾರ್ಥಿಸಿದರು. ಲಿನೆಟ್ ಕ್ಯಾಸ್ತಲಿನೊ ಕಾರ್ಯಕ್ರಮ ನಿರೂಪಿಸಿದರು.
ಸಂಶಯಭರಿತ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ: ಐಜಿಪಿ
ಅಪರಾಧ ತಡೆಯುವಲ್ಲಿ ಸಾರ್ವಜನಿಕರ ಜವಾಬ್ದಾರಿಯೂ ಮಹತ್ತರವಾಗಿದ್ದು, ನಿಮ್ಮ ಪರಿಸರ, ನೆರೆಹೊರೆಯಲ್ಲಿ ಸಂಶಯಭರಿತ ಚಟುವಟಿಕೆ ಅಥವಾ ಸಂಶಯಿತ ವ್ಯಕ್ತಿಗಳನ್ನು ಕಂಡಾಗ ಆ ಬಗ್ಗೆ ತಕ್ಷಣ ಪೊಲೀಸರು ಅಥವಾ ಜವಾಬ್ದಾರಿಯುತ ನಾಗರಿಕರ ಗಮನಕ್ಕೆ ತಂದಾಗ ಸಾಕಷ್ಟು ಅಪರಾಧ ಪ್ರಕರಣಗಳು ಸಂಭವಿಸುವ ಮುನ್ನವೇ ತಡೆಯಲು ಸಾಧ್ಯ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಶ್ಚಿಮ ವಲಯ ಐಜಿಪಿ ಅಮೃತ್ ಪಾಲ್ ಕರೆ ನೀಡಿದರು.
ಮೈತುಂಬಾ ಅಗತ್ಯಕ್ಕಿಂತ ಹೆಚ್ಚು ಚಿನ್ನಾಭರಣ ಧರಿಸಿಕೊಂಡು ಬೀದಿಗಳಲ್ಲಿ ನಡೆದಾಡುವುದು ಅಪರಾಧಕ್ಕೆ ಆಹ್ವಾನ ನೀಡಿದಂತೆ ಎಂದು ಕಿವಿಮಾತು ಹೇಳಿದ ಅವರು, ಅಧಿಕ ದಿನಗಳ ಕಾಲ ಮನೆ ಬಿಟ್ಟು ದೂರದ ಊರುಗಳಿಗೆ ತೆರಳುವ ಸಂದರ್ಭ ಸಮೀಪದ ಠಾಣೆಗಳಿಗೆ ಮಾಹಿತಿ ನೀಡಿದರೆ ಪೊಲೀಸರಿಂದ ಅಂತಹ ಮನೆಗಳ ಮೇಲೆ ಕಣ್ಗಾವಲು ಇರಿಸಲು ಸಾಧ್ಯವಾಗುತ್ತದೆ ಎಂದರು.
ಮನೆಯವರೆಲ್ಲರೂ ದೂರ ಹೋಗುವ ಸಂದರ್ಭ ಚಿನ್ನಾಭರಣ, ನಗದು ಮೊದಲಾದ ವಸ್ತುಗಳನ್ನು ಮನೆಗಳಲ್ಲಿ ಬಿಟ್ಟು ಹೋಗದೆ ಬ್ಯಾಂಕ್ ಅಥವಾ ಇತರ ಭದ್ರತಾ ಲಾಕರ್‌ಗಳಲ್ಲಿರಿಸುವುದು ಉತ್ತಮ ಎಂದ ಐಜಿಪಿ, ಅಪರಾಧ ಮಾಸಾಚರಣೆಯ ಸಂದರ್ಭ ಪೊಲೀಸರ ಮೂರ್ನಾಲ್ಕು ತಂಡ ರಚಿಸಿ ನಿರ್ದಿಷ್ಟ ಅಪರಾಧವನ್ನು ಪತ್ತೆ ಹಚ್ಚಿ ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಕೆಲಸವಾದರೆ ಈ ಕಾರ್ಯಕ್ರಮ ಆಚರಣೆಗೆ ಮಹತ್ವ ಸಿಗಲಿದೆ ಎಂದು ಅವರು ಜಿಲ್ಲಾ ಎಸ್ಪಿ ಹಾಗೂ ಪೊಲೀಸ್ ಕಮಿಷನರಿಗೆ ಸಲಹೆ ನೀಡಿದರು.












