ಕನ್ನಡ ವಾರ್ತೆಗಳು

ಎಂಸಿಎಫ್ ಘಟಕದಿಂದ ವಿಜಯ್ ಮಲ್ಯ ನಿರ್ಗಮನ : 84ರೂ ಮುಖಬೆಲೆಯ ಷೇರುಗಳು 90.50 ಕ್ಕೆ ಏರಿಕೆ.

Pinterest LinkedIn Tumblr

vijay_mallya_photo_ub

ಮಂಗಳೂರು, ಡಿ.1: ತಕ್ಷಣದಿಂದ ಜಾರಿಗೆ ಬರುವಂತೆ ಮಂಗಳೂರು ಕೆಮಿಕಲ್ ಅಂಡ್ ಫರ್ಟಿಲೈಜರ್(ಎಂಸಿಎಫ್) ಬೋರ್ಡಿಗೆ ಉದ್ಯಮಿ ವಿಜಯ್ ಮಲ್ಯ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡುತ್ತಿದ್ದಂತೆ ಎಂಸಿಎಫ್ ಷೇರುಗಳು ಶೇ 15ರಷ್ಟು ಜಿಗಿತ ಕಂಡಿವೆ. ವಿಜಯ್ ಮಲ್ಯ ಅವರ ಕಿಂಗ್ ಫಿಷರ್ ನೆಲಕಚ್ಚಿದೆ. ಯುಬಿ ಸಮೂಹ ಹೊಸ ಸಂಸ್ಥೆ ಜೊತೆ ವಿಲೀನಕ್ಕೆ ಅವಕಾಶ ಸಿಗುತ್ತಿಲ್ಲ, ಇದರ ಜೊತೆಗೆ ಮಂಗಳೂರಿನ ಕೆಮಿಕಲ್ ಘಟಕ ನಿಭಾಯಿಸುವುದು ಕಷ್ಟವಾಗಿರುವ ಕಾರಣ ಮಲ್ಯ ಅವರು ನಿರ್ದೇಶಕ ಸ್ಥಾನದಿಂದ ಕೆಳಗಿಳಿದಿದ್ದಾರೆ ಎಂದು ಬಿಎಸ್ಇ ಗೆ ನೀಡಿರುವ ಹೇಳಿಕೆಯಲ್ಲಿ ಕಂಡು ಬಂದಿದೆ. ಬಿಎಸ್ ಇನಲ್ಲಿ 84 ರು ಮುಖಬೆಲೆಯಂತೆ ವಹಿವಾಟು ಆರಂಭಿಸಿದ ಷೇರುಗಳು ಮಧ್ಯಾಹ್ನ 13.12 ರ ವೇಳೆಗೆ 90.50 ರುಗೆ ಏರಿದೆ. ಇದೇ ವೇಳೆ ಎನ್ಎಸ್ಇನಲ್ಲಿ ಇದೇ ಮೌಲ್ಯದಂತೆ ಷೇರುಗಳು ಮೇಲಕ್ಕೇರುತ್ತಿವೆ.

ಯುಬಿ ಸಮೂಹದ ಭಾಗವಾಗಿದ್ದ ಮಂಗಳೂರು ಕೆಮಿಕಲ್ಸ್ ಸಂಸ್ಥೆ ರಸಗೊಬ್ಬರ ಘಟಕದ ಪುನಶ್ಚೇತನಕ್ಕೆ ಮುಂದಾಗಿತ್ತು. ಎಂಸಿಎಫ್ ಘಟಕ ಕಳೆದ ಎರಡನೇ ತ್ರೈಮಾಸಿಕದಲ್ಲಿ ಶೇ347ರಷ್ಟು ಲಾಭದೊಂದಿಗೆ 42.5 ಕೋಟಿ ರು ಗಳಿಸಿತ್ತು. ಇದಕ್ಕೂ ಮುನ್ನ ಕಳೆದ ವರ್ಷ ಈ ಅವಧಿಯಲ್ಲಿ ಕೇವಲ 9.5 ಕೋಟಿ ರು ಗಳಿಸಿತ್ತು. ಘಟಕ ಮುಚ್ಚದಂತೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ವಿಜಯ್ ಮಲ್ಯ ನಿರ್ಗಮನದ ನಂತರ ಮಂಗಳೂರು ಕೆಮಿಕಲ್ ಅಂಡ್ ಫರ್ಟಿಲೈಜರ್ಸ್ (ಎಂಸಿಎಫ್ ಎಲ್) ಘಟಕವನ್ನು ದೀಪಕ್ ಫರ್ಟಿಲೈಜರ್ಸ್ ಸಂಸ್ಥೆ ಖರೀದಿಸಲು ಮುಂದಾಗಿದ್ದು, ಇತ್ತೀಚೆಗೆ ತನ್ನ ಪಾಲುದಾರಿಕೆಯನ್ನು ಶೇ 6ರಷ್ಟು ಹೆಚ್ಚಳ ಮಾಡಿಕೊಂಡಿದೆ. ಈಗ ಎಂಸಿಎಫ್ ನಲ್ಲಿ ದೀಪಕ್ ಪಾಲು ಶೇ 25ಕ್ಕೆ ಏರಿದೆ. ಎಂಸಿಎಫ್ ನಲ್ಲಿ ಯುಬಿ ಸಮೂಹ ಶೇ 22 ರಷ್ಟು ಪಾಲು ಹೊಂದಿದೆ. ಜುವಾರಿ ಸಮೂಹ ಶೇ 16ರಷ್ಟು ಪಾಲು ಪಡೆದುಕೊಂಡಿದೆ. ವಿವಿಧ ಬ್ಯಾಂಕುಗಳಿಂದ ಸುಮಾರು 8000 ಕೋಟಿ ರುಗೂ ಅಧಿಕ ಸಾಲ ಹೊಂದಿರುವ ಮಲ್ಯ ಅವರು ಅನೇಕ ಬ್ಯಾಂಕುಗಳಿಂದ ಸುಸ್ತಿದಾರ ಎಂಬ ಹಣೆ ಪಟ್ಟಿ ಹೊತ್ತ ಬೆನ್ನಲ್ಲೇ ಎಂಸಿಎಫ್ ನಲ್ಲಿ ಯುಬಿ-ಜುವಾರಿ ಹಿಡಿತ ಸಡಿಲಗೊಂಡಿತು. ಇದರ ಬೆನ್ನಲ್ಲೇ ಯುನೈಟೆಡ್ ಸ್ಪೀರಿಟ್ಸ್ ಹಾಗೂ ಯುನೈಟೆಡ್ ಬ್ರೆವೆರೀಸ್ ನಲ್ಲಿ ಡಿಯಾಜಿಯೋ ಹಾಗೂ ಹೈನೆಕೆನ್ ಪಾಲುದಾರಿಕೆ ಅಧಿಕವಾಗಿ ಯುಬಿ ಸಮೂಹಕ್ಕೂ ಹೊಡೆತ ಬಿದ್ದಿದೆ.

Write A Comment