ಕನ್ನಡ ವಾರ್ತೆಗಳು

ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಮಾಸಿಕ ಎಸ್ಸಿ-ಎಸ್ಟಿ ಸಭೆ

Pinterest LinkedIn Tumblr

sc_st_manth;y_meeting_phort

ಮಂಗಳೂರು, ಡಿ.01 : ಪೊಲೀಸ್ ಠಾಣೆಗಳಲ್ಲಿ ನಡೆಯುವ ಶಾಂತಿ ಸಭೆಗಳಿಗೆ ದಲಿತ ನಾಯಕ ರನ್ನೂ ಕರೆಯಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತ ಆರ್.ಹಿತೇಂದ್ರ ಸೂಚನೆ ನೀಡಿದ್ದಾರೆ. ರವಿವಾರ ನಗರದ ಪೊಲೀಸ್ ಆಯುಕ್ತಾಲಯದಲ್ಲಿ ನಡೆದ ಮಾಸಿಕ ಎಸ್ಸಿ-ಎಸ್ಟಿ ಸಭೆಯಲ್ಲಿ ದಲಿತ ನಾಯಕರ ಅಹವಾಲಿಗೆ ಸ್ಪಂದಿಸಿ ಅವರು ಈ ಸೂಚನೆ ನೀಡಿದರು. ವಿವಿಧ ಸಂದರ್ಭಗಳಲ್ಲಿ ಉಳ್ಳಾಲ ದಲ್ಲಿ ಶಾಂತಿ ಸಭೆಗಳಾದಾಗ ದಲಿತ ಮುಖಂಡರಿಗೂ ಆಹ್ವಾನ ನೀಡಲಾಗುತ್ತಿತ್ತು. ಆದರೆ ಕಳೆದ ಐದು ವರ್ಷಗಳಿಂದ ಶಾಂತಿಯ ಸಭೆಯ ಮಾಹಿತಿಯೇ ಸಿಗುತ್ತಿಲ್ಲ. ಈ ಬಗ್ಗೆ ವಿಚಾರಿಸಿದರೆ ನಿಮಗೆ ಪ್ರತ್ಯೇಕ ಅಹವಾಲು ಸಭೆ ಇದೆ ಎನ್ನುತ್ತಾರೆ. ಇದು ಪೊಲೀಸ್ ಇಲಾಖೆಯ ತಾರತಮ್ಯ. ಹಾಗಾಗಿ ಮುಂದಿನ ಶಾಂತಿ ಸಭೆಗಳಿಗೆ ದಲಿತ ಮುಖಂಡರನ್ನೂ ಆಹ್ವಾನಿಸಬೇಕು ಎಂಬ ದಲಿತ ಮುಖಂಡ ಗಿರೀಶ್ ಸಭೆಯಲ್ಲಿ ಮನವಿ ಮಾಡಿದ್ದರು.

ಮನವಿಗೆ ಸ್ಪಂದಿಸಿದ ಪೊಲೀಸ್ ಆಯುಕ್ತ ಆರ್. ಹಿತೇಂದ್ರ, ಮುಂದಿನ ದಿನಗಳಲ್ಲಿ ನಡೆಯುವ ಶಾಂತಿ ಸಭೆಯಲ್ಲಿ ದಲಿತ ನಾಯಕರಿಗೂ ಆಹ್ವಾನ ನೀಡಲಾಗುವುದು ಎಂದು ಭರವಸೆ ನೀಡಿದರು. ಮೂಡುಬಿದಿರೆಯಲ್ಲಿ ಇತ್ತೀಚೆಗೆ ನಡೆದ ಆಳ್ವಾಸ್ ನುಡಿಸಿರಿಯಲ್ಲಿ ಕಪ್ಪುಬಣ್ಣ ಬಳಿದು ಕೊರಗರ ವೇಷ ಹಾಕಿಕೊಂಡು ದಲಿತರಿಗೆ ಅವಮಾನ ಮಾಡಲಾಗಿದೆ ಮತ್ತು ಕೊರಗರ ನಿಂದನೆಯಾಗಿದೆ. ಈ ಬಗ್ಗೆ ದೂರು ನೀಡಿದ್ದರೂ ವೇಷ ಹಾಕಿದವರ ಮೇಲೆ ಮಾತ್ರ ಪ್ರಕರಣ ದಾಖಲಾಗಿದೆ. ಆದರೆ ಕಾರ್ಯಕ್ರಮದ ಆಯೋಜಕರ ಮೇಲೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಹಿಂದೆ ದಲಿತರನ್ನು ಅವಮಾನ ಮಾಡುವ ವೇಷಕ್ಕೆ ಅವಕಾಶ ನೀಡಿದ್ದ ಸಂದರ್ಭ ಅದನ್ನು ಆಕ್ಷೇಪಿಸಲಾಗಿತ್ತು. ಮುಂದೆ ಈ ರೀತಿಯ ವೇಷಗಳಿಗೆ ಅವಕಾಶ ನೀಡುವುದಿಲ್ಲ ಎಂದೂ ಹೇಳಿದ್ದರು. ಆದರೆ ಈಗ ಮತ್ತೆ ಅದು ಮರುಕಳಿಸಿದೆ. ಹಾಗಾಗಿ ಆಯೋಜಕರ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಕೊರಗ ಸಮುದಾಯದ ಮುಖಂ ಡರು, ಕಪ್ಪುಬಣ್ಣ ಬಳಿದುಕೊಂಡ ತಕ್ಷಣ ಕೊರಗರಾಗುವುದಿಲ್ಲ. ಕಾರ್ಯಕ್ರಮದಲ್ಲಿ ಪ್ರಸ್ತುತಗೊಂಡ ವೇಷ ಕೊರಗರದ್ದೂ ಅಲ್ಲ. ಅದು ಶಿವಮೊಗ್ಗ ಜಿಲ್ಲೆಯ ಕೊರವ ಸಮುದಾಯದ ನೃತ್ಯ ಎಂದರು.

ಚರ್ಚೆಗೆ ಕಡಿವಾಣ ಹಾಕಿದ ಪೊಲೀಸ್ ಆಯುಕ್ತ ಆರ್. ಹಿತೇಂದ್ರ, ಈ ಪ್ರಕರಣ ತನಿಖೆಯಲ್ಲಿದೆ. ತನಿಖಾಧಿಕಾರಿ ಸೂಕ್ತ ನಿರ್ಧಾರ ತೆಗದುಕೊಳ್ಳುತ್ತಾರೆ. ಅಲ್ಲಿ ಸಿಕ್ಕಿದ ಸಾಕ್ಷಾಧಾರದ ಮೇಲೆ ಮತ್ತು ಸಮುದಾಯದವರಿಂದ ಸಂಗ್ರಹಿಸಿದ ಅಭಿಪ್ರಾಯದಂತೆ ತನಿಖೆ ಮಾಡುತ್ತಿರುವುದರಿಂದ ಆ ಬಗ್ಗೆ ಸಭೆಯಲ್ಲಿ ಚರ್ಚಿಸುವುದು ಸೂಕ್ತವಲ್ಲ ಎಂದರು.

Write A Comment