ಮಧುರೈ, ನ. 29: ಗಲ್ಲು ಶಿಕ್ಷೆ ವಿಧಿಸಲ್ಪಟ್ಟಿದ್ದ ತಮಿಳುನಾಡು ಮೂಲಕ ಹಲವು ಮಾದಕ ವಸ್ತು ಸಾಗಾಣಿಕೆದಾರರನ್ನು ಶ್ರೀಲಂಕಾ ಈಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಕೋರಿಕೆಯ ಮೇರೆಗೆ ಬಿಡುಗಡೆ ಮಾಡಿತ್ತು. ಆದರೆ, ಶುಕ್ರವಾರ ರಾತ್ರಿ ಶ್ರೀಲಂಕಾ ನೌಕಾಪಡೆ ಸಿಬ್ಬಂದಿ ಮತ್ತೆ ತಮ್ಮ ದೇಶದ ಗಡಿ ಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ತಮಿಳುನಾಡಿನ ನಾಲ್ವರು ಮೀನುಗಾರರನ್ನು ಬಂಧಿಸಿದ್ದಾರೆ
ಇವರು ತಮಿಳುನಾಡಿನ ನಾಗಪಟ್ಟಣಂ ಸಮೀಪದ ಪುಷ್ಪವನಂ ಗ್ರಾಮದ ನಿವಾಸಿಗಳು. ಶುಕ್ರವಾರ ರಾತ್ರಿ ಮೀನು ಹಿಡಿಯುವ ಉದ್ದೇಶದಿಂದ ಸಮುದ್ರಕ್ಕೆ ತೆರಳಿದ್ದವರು ನಂತರ ಕಾಣೆಯಾಗಿದ್ದರು. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಅವರ ಪತ್ತೆಗಾಗಿ ಕರಾವಳಿ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಮುಂದಾದರೂ ಪ್ರಯೋಜನವಾಗಿರಲಿಲ್ಲ. ಮೀನು ಹಿಡಿಯುತ್ತಿದ್ದಾಗ ಇದ್ದಕ್ಕಿದ್ದಂತೆ ಸಮುದ್ರದಲ್ಲಿ ಅಲೆಗಳ ಪ್ರಮಾಣ ಹೆಚ್ಚಾಗಿದೆ.
ಈ ಕಾರಣದಿಂದ ಮೀನುಗಾರರು ಜೀವರಕ್ಷಣೆಗಾಗಿ ಶ್ರೀಲಂಕಾ ಸಮುದ್ರ ಗಡಿ ಭಾಗದತ್ತ ತೆರಳಿದ್ದರು. ಈ ವೇಳೆ ಗಸ್ತು ತಿರುಗುತ್ತಿದ್ದ ಶ್ರೀಲಂಕಾ ನೌಕಾ ಪಡೆ ಸಿಬ್ಬಂದಿ ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಮೀನುಗಾರರ ಬಿಡುಗಡೆಗೆ ಕ್ರಮ ಕೈಗೊಂಡಿರುವುದಾಗಿ ಅಧಿಕಾರಿಗಲು ಸ್ಪಷ್ಟಪಡಿಸಿದ್ದಾರೆ.