ಕನ್ನಡ ವಾರ್ತೆಗಳು

ಜಿಲ್ಲೆಯಲ್ಲಿ ಹಕ್ಕಿ ಜ್ವರ ಇಲ್ಲ ಕೋಳಿ ತಿನ್ನುವವರಿಗೆ ಆತಂಕ ಬೇಡ-ಎ.ಬಿ.ಇಬ್ರಾಹಿಂ

Pinterest LinkedIn Tumblr

Dc_Meet_Rta

ಮಂಗಳೂರು ನ.29:  ನೆರೆ ರಾಜ್ಯ ಕೇರಳದ ದಕ್ಷಿಣ ಭಾಗದ ಕೆಲವೆಡೆ ಹಕ್ಕಿ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಹಕ್ಕಿ ಜ್ವರದ ಬಗ್ಗೆ ಇನ್ನಿಲ್ಲದ ಆತಂಕಕ್ಕೆ ಒಳಗಾಗಿದ್ದು, ಜಿಲ್ಲೆಯಲ್ಲಿ ಎಲ್ಲಿಯೂ ಹಕ್ಕಿ ಜ್ವರ ಕಾಣಿಸಿಕೊಂಡಿಲ್ಲ ಹಾಗೂ ನಮ್ಮ ಜಿಲ್ಲೆಯಿಂದ ಕೇರಳ ರಾಜ್ಯದ ಉತ್ತರ ಭಾಗದ ಜಿಲ್ಲೆಗಳಿಗೆ ಕೋಳಿ ಸರಬರಾಜು ಮಾಡಲಾಗುತ್ತಿದ್ದು, ಕೇರಳದಿಂದ ಕೋಳಿಗಳನ್ನು ತರುತ್ತಿಲ್ಲವಾದ ಕಾರಣ ಜನತೆ ಹಕ್ಕಿ ಜ್ವರದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಜನತೆಗೆ ಸ್ಪಷ್ಟಪಡಿಸಿದ್ದಾರೆ.

ಅವರು  ತಮ್ಮ ಕಛೇರಿಯಲ್ಲಿ ಈ ಸಂಬಂಧ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳಿಂದ ಈ ಬಗ್ಗೆ ಮಾಹಿತಿ ಪಡೆದು ಜಿಲ್ಲೆಯಲ್ಲಿ ಹಕ್ಕಿ ಜ್ವರ ಇಲ್ಲ ಎಂದು ಸ್ಪಷ್ಟಪಡಿಸಿದರು.  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1000 ಕ್ಕೂ ಹೆಚ್ಚು ಕೋಳಿ ಸಾಕಾಣಿಕ ಫಾರಂಗಳು ಇದ್ದು ಲಕ್ಷಾಂತರ ಕೆ.ಜಿ. ಕೋಳಿ ಮಾರಾಟವಾಗುತ್ತಿದೆ, ಗಾಳಿ ಸುದ್ದಿಯಿಂದ ಕೋಳಿ ಸಾಕಾಣಿಕೆ ಉದ್ಯಮಕ್ಕೆ ತೊಂದರೆಯಾಗಲಿದೆ, ಎಂದು ಜಿಲ್ಲಾಧಿಕಾರಿಗಳಲ್ಲಿ ಕೋಳಿ ಸಾಕಾಣಿಕೆದಾರರ ಸಂಘದ ಪದಾದಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.  ಹಕ್ಕಿ ಜ್ವರದ ಲಕ್ಷಣಗಳೆಂದರೆ ಸಾಮಾನ್ಯವಾಗಿ ಜ್ವರ ಮತ್ತು ಕೆಮ್ಮು,ಶೀತ, ತಲೆನೋವು, ಗಂಟಲು ಕೆರೆತ, ನೆಗಡಿ, ಸ್ನಾಯುಗಳಲ್ಲಿ ನೋವು, ಆಯಾಸ, ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ವಾಂತಿ ಮತ್ತು ಭೇಧಿಯೂ ಆಗಬಹುದು. ಉಸಿರಾಟದಲ್ಲಿ ತೊಂದರೆ ಕಾಣಿಸಬಹುದು.

ಮನ್ನೆಚ್ಚರಿಕೆಯಾಗಿ ಸಾರ್ವಜನಿಕರು ಶಂಕಿತ ಹಕ್ಕಿ ಜ್ವರ ಪೀಡಿತ ಕೋಳಿಗಳು, ಹಕ್ಕಿಗಳು ಹಾಗೂ ಬಾತು ಕೋಳಿಗಳ ಸಂಪರ್ಕಕ್ಕೆ ಬರದಂತೆ ಎಚ್ಚರ ವಹಿಸುವುದು. ಬೇರೆಯವರ ಮನೆಗೆ ಭೇಟಿ ನೀಡಿದಾಗ ಅಲ್ಲಿರುವ ಶಂಕಿತ ಹಕ್ಕಿ ಜ್ವರ ಪೀಡಿತ ಕೋಳಿ ಅಥವಾ ಹಕ್ಕಿಗಳನ್ನು ಸ್ಪರ್ಶಿಸಬಾರದು. ಹಕ್ಕಿ ಜ್ವರ ಶಂಕಿತ ಅಥವಾ ಪೀಡಿತ ಫಾರಂಗಳಿಗೆ ಭೇಟಿ ನೀಡಬಾರದು. ಹಕ್ಕಿ ಜ್ವರ ಹರಡಿರುವ ಫಾರಂನ ವಾತಾವರಣದ ಸಂಪರ್ಕಕ್ಕೆ ಬಂದಲ್ಲಿ ತಕ್ಷಣ ತಮ್ಮ ಕೈಕಾಲು ಮತ್ತು ಮುಖವನ್ನು ತೊಳೆದುಕೊಂಡು ಬಟ್ಟೆಯನ್ನು ಬದಲಾಯಿಸಕೊಳ್ಳುವುದು ಮತ್ತು ಮುಂದಿನ ನಾಲ್ಕು ದಿನಗಳ ವರೆಗೆ ತಮ್ಮ ದೇಹದ ಉಷ್ಣಾಂಶದಲ್ಲಾಗುವ ಬದಲಾವಣೆಗಳನ್ನು ಗಮನಿಸುವುದು. ಒಂದು ವೇಳೆ ಜ್ವರದ ಲಕ್ಷಣಗಳು ಕಾಣಿಸಿಕೊಂಡಲ್ಲಿ ಲಕ್ಷಣಗಳು ಕಾಣಿಸಿಕೊಂಡಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು.

ಕೋಳಿ ಮಾಂಸದ ಸೇವನೆಯಿಂದ ಹಕ್ಕಿ ಜ್ವರ ಬರುವುದಿಲ್ಲ. ಕೋಳಿ ಮಾಂಸ ಅಥವಾ ಮೊಟ್ಟೆಗಳನ್ನು ಸೇವಿಸುವುದರಿಂದ ಈ ಖಾಯಿಲೆ ಮನುಷ್ಯರಲ್ಲಿ ಬರುವುದಿಲ್ಲ. ಆದರೆ ಸೋಂಕು ತಗುಲಿದ ಕೋಳಿಯ ಮಾಂಸ ಚೆನ್ನಾಗಿ ಬೇಯಿಸದೆ ಹಾಗೂ ಅವುಗಳ ಹಸಿ ಮೊಟ್ಟೆಯ ಸೇವನೆಯಿಂದ ರೋಗ ತಗಲುವ ಸಾಧ್ಯತೆಗಳಿರುತ್ತವೆ. ಕೋಳಿ ಮಾಂಸ ಮತ್ತು ಮೊಟ್ಟೆಯನ್ನು 70  ಡಿಗ್ರಿ ಸೆಂಟಿಗ್ರೇಡ್‌ಗೂ ಅಧಿಕ ಉಷ್ಣಾಂಶದಲ್ಲಿ ಬೇಯಿಸಿದ ನಂತರ ಸೇವಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ರಾಮಕೃಷ್ಣರಾವ್ ಹಾಗೂ ಪಶು ಪಾಲನೆ ಮತ್ತು ಪಶು ವೈದ್ಯ ಇಲಾಖೆ ಉಪನಿರ್ದೇಶಕರಾದ ಡಾ|ಟಿ. ತಿಪ್ಪೇಸ್ವಾಮಿ ಅವರು ತಿಳಿಸಿದ್ದಾರೆ.
ಸಭೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಪ್ರಭಾರ ಆಯುಕ್ತರಾದ ಗೊಕುಲ್‌ದಾಸ್ ನಾಯಕ್, ಮುಂತಾದವರು ಹಾಜರಿದ್ದರು.

Write A Comment