ಕನ್ನಡ ವಾರ್ತೆಗಳು

ದಾರಿಹೋಕರನ್ನು ಅಪಹರಿಸಿ ದರೋಡೆ ಮಾಡುತ್ತಿದ್ದ ಮೂವರ ಸೆರೆ : ಚಿನ್ನಾಭರಣ, ನಗದು, ಚೂರಿ, ಸರಪಳಿ ವಶಕ್ಕೆ

Pinterest LinkedIn Tumblr

Robbery

ಮಂಗಳೂರು, ನ.28: ದಾರಿಹೋಕರನ್ನು ಅಪಹರಿಸಿ ದರೋಡೆ ಮಾಡುತ್ತಿದ್ದ ಪ್ರಕರಣದ ಆರೋಪದಲ್ಲಿ ಪಾಂಡೇಶ್ವರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಚಿನ್ನಾಭರಣ, ನಗದು, ಚೂರಿ, ಸರಪಳಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಬೋಳಾರ ಹಳೆ ಮೆಸ್ಕಾಂ ಆಫೀಸ್ ಹತ್ತಿರದ ನಿವಾಸಿ ಸಫ್ರಾಝ್ ಯಾನೆ ಚಪ್ಪ (29), ಜೆಪ್ಪು ಕುಡುಪ್ಪಾಡಿ ನಿವಾಸಿ ಎ. ಕೆ. ಹಫೀಝ್ (24), ಬೋಳಾರ ಅಂಚೆ ಇಲಾಖೆ ವಸತಿ ಗೃಹದ ಬಳಿಯ ನಿವಾಸಿ ಶಾರೂಕ್ (19) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ 16 ಗ್ರಾಂ ತೂಕದ ಚಿನ್ನದ ಉಂಗುರ ಹಾಗೂ 10,100 ರೂ. ನಗದು ಹಾಗೂ ದರೋಡೆಗೆ ಉಪಯೋಗಿಸಿದ್ದರೆನ್ನಲಾದ ಚೂರಿ, ಸರಪಳಿಗಳನ್ನು ಸ್ವಾಧೀನಪಡಿಸಲಾಗಿದೆ.

ಮಂಗಳೂರು ನಗರದ ಕೇಂದ್ರ ರೈಲ್ವೆ ನಿಲ್ದಾಣದ ಬಳಿಯಲ್ಲಿ ಮೂರು ಜನ ಯುವಕರು ಸಂಶಯಾಸ್ಪದ ರೀತಿಯಲ್ಲಿ ತಿರುಗುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ದಿನಕರ್ ಶೆಟ್ಟಿಯವರು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದ್ದರು. ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ, ಆ.27ರಂದು ರಾತ್ರಿ ಮಂಗಳೂರು ರೈಲು ನಿಲ್ದಾಣದ ಮಾರ್ಗದಲ್ಲಿ ಕೇರಳದ ಕೊಟ್ಟಾಯಂ ನಿವಾಸಿ ಸಾಜನ್ ಎನ್.ಬಿ. ಎಂಬವರನ್ನು ಅಪಹರಿಸಿ ದರೋಡೆ ಮಾಡಿದ ಪ್ರಕರಣ ಬೆಳಕಿಗೆ ಬಂತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೇರಳದಿಂದ ಮಂಗಳೂರಿಗೆ ರೈಲಿನಲ್ಲಿ ಬಂದ ಸಾಜನ್ ಎನ್.ಬಿ. ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಬಿಳಿ ಬಣ್ಣದ ಮಾರುತಿ ಓಮ್ನಿ ಕಾರಿನಲ್ಲಿ ಬಂದ ಐವರು ಸಾಜನ್‌ರನ್ನು ಬಲತ್ಕಾರವಾಗಿ ಓಮ್ನಿಯೊಳಗಡೆ ಎಳೆದು ಹಾಕಿ ಹೊಡೆದು ಕುತ್ತಿಗೆಗೆ ಚೈನ್‌ನಿಂದ ಕಟ್ಟಿ ಚೂರಿ ತೋರಿಸಿ ಅವರಲ್ಲಿದ್ದ ಚಾರ್ಜರ್ ಸಹಿತ ಲ್ಯಾಪ್ ಟಾಪ್, ಎರಡು ಪವನ್ ಚಿನ್ನದ ಉಂಗುರ ಹಾಗೂ ಪ್ಯಾಂಟ್‌ನ ಕಿಸೆಗೆ ಕೈಹಾಕಿ ಹಣದ ಪರ್ಸನ್ನು ತೆಗೆದಿದ್ದರು. ಪರ್ಸ್‌ನಲ್ಲಿದ್ದ ಎಟಿಎಂ ಕಾರ್ಡ್ ತೆಗೆದು ಹಿಂಸೆ ಕೊಟ್ಟು ಎ.ಟಿ.ಎಂ. ಕಾರ್ಡ್‌ನ ಪಾಸ್‌ವರ್ಡ್ ಪಡೆದು ರಾತ್ರಿ 1ರಿಂದ 2 ಗಂಟೆಯ ಮಧ್ಯಾವಧಿಯಲ್ಲಿ ಸುಮಾರು ರೂ. 27 ಸಾವಿರವನ್ನು ಎಟಿಎಂನಿಂದ ತೆಗೆದಿದ್ದರು ಎಂದು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅ.25ರಂದು ಸಂತೋಷ್‌ಕುಮಾರ್ ಡಿಸಿಲ್ವ (19), ಎಂಬಾತನನ್ನು ದಸ್ತಗಿರಿ ಮಾಡಿ ದರೋಡೆಗೆ ಉಪಯೋಗಿಸಿದ್ದ ಬಿಳಿ ಬಣ್ಣದ ಮಾರುತಿ ಓಮ್ನಿ ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ದಿನಕರ್ ಶೆಟ್ಟಿ ನೇತೃತ್ವದಲ್ಲಿ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ಉಪನಿರೀಕ್ಷಕರಾದ ಮುಹಮ್ಮದ್ ಶರೀಫ್, ಅನಂತ ಮುರ್ಡೇಶ್ವರ, ಹಾಗೂ ಸಿಬ್ಬಂದಿ ಕೇಶವ, ವಿಶ್ವನಾಥ ಮಂಜೇಶ್ವರ ಗಂಗಾಧರ, ದಾಮೋದರ, ಶಾಜು ಕೆ. ನಾಯರ್, ಪ್ರಕಾಶ್ ನಾಯ್ಕ ಭಾಗಿಯಾಗಿದ್ದರು.

Write A Comment