ಸಿರಿಯಾ, ನ. 27: ಭಾರತ ಮೂಲದವರು ಐಎಸ್ಐಎಸ್ ಉಗ್ರ ಸಂಘಟನೆಯತ್ತ ಆಕರ್ಷಿತರಾಗುತ್ತಿದ್ದಾರೆ ಎಂಬ ಅನುಮಾನಕ್ಕೆ ಈಗ ಸ್ಪಷ್ಟ ಸಾಕ್ಷಿ ದೊರೆತಿದೆ. ಭಾರತ ಮೂಲದ 31 ವರ್ಷದ ಅಬು ರುಮೇಸಾ ಎಂಬಾತ ಒಂದು ಕೈಯಲ್ಲಿ ಎಕೆ-47 ಹಾಗೂ ಇನ್ನೊಂದು ಕೈಯಲ್ಲಿ ತನ್ನ ಗಂಡು ಮಗುವನ್ನು ಎತ್ತಿಕೊಂಡು ನಿಂತಿರುವ ಛಾಯಾಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾನೆ.
ಈತನ ಮೂಲ ಹೆಸರು ಸಿದ್ಧಾರ್ಥ ಧರ್. ಭಾರತದಲ್ಲಿ ಜನಿಸಿದ್ದ ಈತ ನಂತರ ಬ್ರಿಟನ್‌ಗೆ ತೆರಳಿದ್ದ. ಇಂಗ್ಲೆಂಡ್‌ನಲ್ಲಿ ಆಗಾಗ ಟಿವಿಯಲ್ಲಿ ನಡೆಯುವ ಚರ್ಚೆಯಲ್ಲಿ ಭಾಗವಹಿಸುತ್ತಿದ್ದ. ಅಲ್ಲದೆ, ತಾನು ಇಸ್ಲಾಂನ ಷರಿಯಾ ಕಾನೂನಿನಡಿ ಇಸ್ಲಾಮಿಕ್ ಸ್ಟೇಟ್‌ನಲ್ಲಿ ಬದುಕಲು ಇಷ್ಟಪಡುವುದಾಗಿ ಹೇಳಿಕೊಂಡಿದ್ದ
ಬಂಧಿಸಿದ್ದರೂ ಪರಾರಿಯಾದ: ಒಮ್ಮೆ ಈತನನ್ನು ಇದೇ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಇಂಗ್ಲೆಂಡ್ ಪೊಲೀಸರು ಬಂಧಿಸಿದ್ದರು. ಆದರೆ, ಜಾಮೀನು ಮೇಲೆ ಬಿಡುಗಡೆಯಾಗಿದ್ದ. ಡಿಸೆಂಬರ್‌ನಲ್ಲಿ ನ್ಯಾಯಾಲಯಕ್ಕೆ ಹಾಜರಾಗಬೇಕೆಂಬ ಷರತ್ತು ವಿಧಿಸಲಾಗಿತ್ತು. ಆದರೆ, ಹೊರಗೆ ಬಂದ 24 ಗಂಟೆಗಳ ಒಳಗೆ ಪತ್ನಿ ಹಾಗೂ ನಾಲ್ವರು ಮಕ್ಕಳ ಜತೆ ಪ್ಯಾರಿಸ್ ಮೂಲಕ ಸಿರಿಯಾಕ್ಕೆ ಪರಾರಿಯಾಗಿದ್ದ. ಟ್ವಿಟ್ಟರ್‌ನಲ್ಲಿ ತನ್ನ ಮಗುವಿನ ಬಗ್ಗೆ ಹೀಗೆ ಬರೆದುಕೊಂಡಿದ್ದಾನೆ,
“ನನ್ನ ಮಗ ಇಸ್ಲಾಮಿಕ್ ಸ್ಟೇಟ್ಸ್‌ಗೆ ಹೊಸ ಸೇರ್ಪಡೆಯಾಗಿದ್ದಾನೆ ಮತ್ತು ಆತ ಖಂಡಿತವಾಗಿಯೂ ಬ್ರಿಟಿಷ್ ಅಲ್ಲ”. ಅಲ್ಲದೆ, ಮುಂದೊಂದು ದಿನ ಬ್ರಿಟನ್ ಕೂಡ ಷರಿಯಾ ಕಾನೂನಿನಡಿ ಬರಲಿದೆ ಎಂದು ಆತ ವಿಶ್ವಾಸ ವ್ಯಕ್ತಪಡಿಸಿದ್ದಾನೆ. ಇಸ್ಲಾಮಿಕ್ ಸ್ಟೇಟ್ಸ್ ಆಕರ್ಷಣೆ ಭಾರತೀಯ ಯುವಕರಲ್ಲಷ್ಟೇ ಅಲ್ಲದೆ, ಬ್ರಿಟನ್‌ನಲ್ಲಿಯೂ ಹೆಚ್ಚುತ್ತಿದೆ. ಐಎಸ್ ಸೇರುವ ಉದ್ದೇಶದಿಂದ ಬ್ರಿಟನ್‌ನಿಂದ ಸುಮಾರು 500 ಜನ ಸಿರಿಯಾ ಹಾಗೂ ಇರಾಕ್‌ಗೆ ತೆರಳಿದ್ದಾರೆ ಎಂದು ಅಂದಾಜಿಸಲಾಗಿದೆ.