ಉಡುಪಿ: ಮಲ್ಪೆ ಠಾಣಾ ವ್ಯಾಪ್ತಿಯ ಕೆಳಾರ್ಕಳಬೆಟ್ಟು ಗ್ರಾಮದ ಕೊಜಕುಳಿಯ ಗದ್ದೆ ಬದಿಯ ನಿರ್ಜನ ಪ್ರದೇಶದ ಹಾಡಿಯಲ್ಲಿ 2011ರ ಫೆ. 27ರಂದು ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ 2 ವರ್ಷ ಸಜೆಯೊಂದಿಗೆ 5,500 ರೂ. ದಂಡ ಹಾಗೂ ನೊಂದ ಬಾಲಕಿಗೆ ಪರಿಹಾರವಾಗಿ 10,000 ರೂ. ನೀಡುವಂತೆ ಉಡುಪಿ ನ್ಯಾಯಾಲಯವು ನ. 25ರಂದು ಆದೇಶಿಸಿದೆ.
ಕೆಮ್ಮಣ್ಣು ಗಾಂಧಿ ಶಾಲೆಯ ಸಮೀಪದ ನಿವಾಸಿ ಆರೋಪಿ ಅಶೋಕ ಸಾಲ್ಯಾನ್ ಶಿಕ್ಷೆಗೊಳಪಟ್ಟಾತ. ಉಡುಪಿ ನಗರ ಠಾಣೆಯ ಅಂದಿನ ಎಸ್‌ಐ ಲಿಂಗರಾಜು ಹೆಚ್.ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಜಿಲ್ಲಾ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗಿದ್ದು, ಪ್ರಕರಣದಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಮಾಡಿದ್ದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ವಿ.ಎನ್. ಮಿಲನ ಅವರು ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ. ಸರಕಾರದ ಪರವಾಗಿ ಹಿಂದಿನ ಸಹಾಯಕ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಅವರು ಸಾಕ್ಷಿದಾರರ ವಿಚಾರಣೆ ನಡೆಸಿದ್ದು, ಸಹಾಯಕ ಸರಕಾರಿ ಅಭಿಯೋಜಕಿ ಮಮ್ತಾಜ್ ಅವರು ವಾದ ಮಂಡಿಸಿದ್ದರು.
