ಕನ್ನಡ ವಾರ್ತೆಗಳು

ಹೈಕೋರ್ಟ್ ಅನುಮತಿ ಹಿನ್ನೆಲೆ : ಸುಬ್ರಹ್ಮಣ್ಯದಲ್ಲಿ ಆತಂಕವಿಲ್ಲದೆ ಸಾಗಿದ ಮಡೆಮಡೆಸ್ನಾನ ಸೇವೆ

Pinterest LinkedIn Tumblr

made_snana_kukke

File Photo

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಡೆ ಮಡೆಸ್ನಾನ ಮಂಗಳವಾರ ನಿರಾತಂಕವಾಗಿ ಆರಂಭವಾಯಿತು. ಚಂಪಾ ಷಷ್ಠಿಯ ಮೊದಲ ದಿನವಾದ ಮಾರ್ಗಶಿರ ಶುದ್ಧ ಚೌತಿಯಂದು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಧ್ಯಾಹ್ನ ಸುಮಾರು 229 ಮಂದಿ ಭಕ್ತರು ಸ್ವ ಇಚ್ಛೆಯಿಂದ ಸೇವೆಯಲ್ಲಿ ಪಾಲ್ಗೊಂಡರು.

ದೇವಸ್ಥಾನದಲ್ಲಿ ಮಧ್ಯಾಹ್ನ ಮಹಾಪೂಜೆ ನೆರೆವೇರಿದ ಬಳಿಕ ಹೊರಾಂಗಣದಲ್ಲಿ ಬ್ರಾಹ್ಮಣ ಸಂತರ್ಪಣೆ ನಡೆಯಿತು. ಅನ್ನ ಪ್ರಸಾದ ಸ್ವೀಕರಿಸಿದ ಬಳಿಕ ಎಂಜಲೆಲೆಯ ಮೇಲೆ ಹರಿಕೆ ಹೇಳಿಕೊಂಡ ಭಕ್ತರು ಉರುಳು ಸೇವೆ ನಡೆಸಿದರು. ಮಹಿಳೆಯರು, ಮಕ್ಕಳು ಸೇರಿದಂತೆ ನಾನಾ ಜಾತಿ, ವರ್ಗದ ಜನ ಮಡೆಮಡೆಸ್ನಾನ ಸೇವೆ ಸಲ್ಲಿಸಿದರು. ಕಳೆದ ವರ್ಷ ಚೌತಿಯ ದಿನ 200 ಮಂದಿ ಮಡೆಸ್ನಾನ ನಡೆಸಿದ್ದರು. ಪಂಚಮಿ ದಿನ 300 ಮಂದಿ ಷಷ್ಠಿ ದಿನ 575 ಮಂದಿ ಸೇವೆ ಸಲ್ಲಿಸಿದ್ದರು.

ತೀರ್ಪಿನಿಂದ ನಿರಾಳ: ಸುಬ್ರಹ್ಮಣ್ಯದಲ್ಲಿ ಮಡೆಮಡೆಸ್ನಾನ ಸೇವೆ ಮುಂದುವರಿಸಲು ಹೈಕೋರ್ಟ್ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಈ ಬಾರಿ ಯಾವುದೇ ಆತಂಕವಿಲ್ಲದೆ ಮಡೆಮಡೆಸ್ನಾನ ಸೇವೆ ನೆರವೇರಿತು. ವಿವಾದ ಚರ್ಚೆಯ ನೆಲೆಯಲ್ಲಿ ಮುಂದುವರಿದ ಹಿನ್ನೆಲೆಯಲ್ಲಿ ಕ್ಷೇತ್ರ ಹಾಗೂ ಮಡೆಮಡೆಸ್ನಾನ ನಡೆಯುವಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಕಳೆದ ಹಲವು ವರ್ಷಗಳಿಂದ ಸಂಪ್ರದಾಯಬದ್ಧವಾಗಿ ಶ್ರೀ ಕ್ಷೇತ್ರದಲ್ಲಿ ಚಂಪಾ ಷಷ್ಠಿಯ ಚೌತಿಯಿಂದ ಷಷ್ಠಿಯ ತನಕ ಮೂರು ದಿನ ಮಡೆಮಡೆಸ್ನಾನ ನೆ ನಡೆಯುತ್ತಿದೆ. ಕಳೆದ ನಾಲ್ಕೈದು ವರ್ಷಗಳ ಹಿಂದೆ ನಾಡಿನ ಪ್ರಗತಿಪರ ಸಂಘಟನೆಗಳು,ಬುದ್ಧಿ ಜೀವಿಗಳು, ನಿಡುಮಾಮಿಡಿ ಸ್ವಾಮೀಜಿಗಳು ಮುಂತಾದವರು ಮಡೆಮಡೆಸ್ನಾನಕ್ಕೆ ವಿರೋಧಿಸಿ ಸೇವೆಯನ್ನು ನಿಷೇಧಿಸುವಂತೆ ಒತ್ತಾಯಿಸಿದ್ದರು. ಬ್ರಾಹ್ಮಣರು ಉಂಡ ಎಂಜಲೆಲೆ ಮೇಲೆ ಕೆಳ ವರ್ಗದವರು ಉರುಳಾಡುವುದು ಸಾಮಾಜಿಕ ಅಸಮತೋಲನಕ್ಕೆ ಕಾರಣವಾಗುತ್ತಿದೆ. ಹಾಗಾಗಿ ಈ ಅನಿಷ್ಟ ಪದ್ಧತಿಯನ್ನು ನಿಷೇಧಿಸುವಂತೆ ವಾದ ಮಂಡಿಸಿದ್ದರು.

ಇದಕ್ಕೇ ತೀವ್ರ ವಿರೋಧ ವ್ಯಕ್ತಪಡಿಸಿದ ಆದಿವಾಸಿ ಬುಡಕಟ್ಟು ಜನಾಂಗದ ಭಾಸ್ಕರ ಬೆಂಡೋಡಿ ಕ್ಷೇತ್ರದಲ್ಲಿ ನಡೆಯುವ ಮಡಮಡೆಸ್ನಾನದಲ್ಲಿ ಎಲ್ಲ ವರ್ಗದವರು ಪಾಲ್ಗೊಳ್ಳುತಿದ್ದು ಹರಿಕೆ ಹೇಳಿಕೊಂಡು ಭಕ್ತರೇ ಸ್ವಯಂ ಪ್ರೇರಿತವಾಗಿ ನಡೆಸುವ ಸಂಪ್ರದಾಯ ಬದ್ಧ್ದ ಸೇವೆ ಇದಾಗಿದ್ದು ಇದು ಬಲಾತ್ಕಾರದ ಸೇವೆಯಲ್ಲ . ಎಲ್ಲಾ ವರ್ಗದವರು ನಡೆಸುವ ಸೇವೆ ಎಂದು ವಾದ ಮಂಡಿಸಿದ್ದರು.

ಅಂತಿಮವಾಗಿ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು, ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ ಮಡೆಮಡೆಸ್ನಾನದ ಬದಲಿಗೆ ಎಡೆಸ್ನಾನ ನಡೆಸಲು ಒಲವು ವ್ಯಕ್ತಪಡಿಸಿದ್ದು ಹೈಕೋರ್ಟ್ ಇದಕ್ಕೆ ಒಪ್ಪಿಗೆ ನೀಡಿತ್ತು. ಇದಕ್ಕೆ ಭಾಸ್ಕರ ಬೆಂಡೋಡಿ ಸುಪ್ರೀಂ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು, ಈ ಸಂದರ್ಭ ಪ್ರಕರಣವನ್ನು ಹೈಕೋರ್ಟ್‌ನಲ್ಲಿ ಇತ್ಯರ್ಥಪಡಿಸುವಂತೆ ಸೂಚಿಸಿತ್ತು. ಹೈಕೋರ್ಟ್ ತಡೆಯಾಜ್ಞೆ ನೀಡುವುದರ ಜತೆಗೆ ಮಡೆ ಮಡೆಸ್ನಾನ ನಡೆಸುವಂತೆ ಸೂಚಿಸಿದ್ದರಿಂದ ಗೊಂದಲಗಳಿಗೆ ತೆರೆಬಿತ್ತು.

Write A Comment