ಬೆಂಗಳೂರು, ನ.24: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಸೋಮವಾರ ಜಾಮೀನು ಮಂಜೂರಗಿದೆ. ಇನ್ನೂ ಮೂರು ಪ್ರಕರಣದಲ್ಲಿ ಜಾಮೀನು ಸಿಗಬೇಕಾಗಿರುವುದರಿಂದ ಸದ್ಯಕ್ಕೆ ಜೈಲಿನಿಂದ ಬಿಡುಗಡೆ ಸಾಧ್ಯವಿಲ್ಲ. ನಗರದ ಪರಪ್ಪನ ಅಗ್ರಹಾರ ಜೈಲಿನಲ್ಲೇ ಕಾಲದೂಡಬೇಕಾಗಿದೆ. ಬೆಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿವೇಕ್ ಹೆಬ್ಬಾರ್ ಅವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಸಿಬಿಐ ವಿಶೇಷ ನ್ಯಾಯಲಯ ಜಾಮೀನು ಮಂಜೂರು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗ ಈ ಪ್ರಕರಣದ ಸಿಬಿಐ ದೋಷಾರೋಪಣ ಪಟ್ಟಿ ಪ್ರಕಾರ ಆರೋಪಿ ನಂ.1 ಆಗಿರುವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ. [
ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಜನಾರ್ದನ ರೆಡ್ಡಿ, ಶಾಸಕರಾದ ಸತೀಶ್ ಸೈಲ್, ನಾಗೇಂದ್ರ, ಸುರೇಶ್‌ಬಾಬು, ಆನಂದ್‌ಸಿಂಗ್ ಹಾಗೂ ಅರಣ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸೇರಿದಂತೆ ಒಟ್ಟು 18 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೂಡ್ಲಿಗಿ ಶಾಸಕ ನಾಗೇಂದ್ರ, ಕಂಪ್ಲಿಶಾಸಕ ಸುರೇಶ್ ಬಾಬು, ಕಾರವಾರದ ಶಾಸಕ ಸತೀಶ್ ಸೈಲ್, ಅಂಕೋಲದ ಮಾಜಿ ಅರಣ್ಯಾಧಿಕಾರಿ ನರೇಂದ್ರ ಹಿತಲಮಕ್ಕಿ, ಮಾಜಿ ರೇಂಜ್ ಆಫೀಸರ್ ಜಿ.ಸಿ ನಾಯಕ್, ಬೇಲೇಕೇರಿ ಬಂದರು ಅಧಿಕಾರಿ ಕ್ಯಾಪ್ಟನ್ ಸಿ ಸ್ವಾಮಿ, ಪ್ರೊಪ್ರೆಟರ್ ಲಾಲ್ ಮಹಲ್ ಲಿ. ರಾಜಕುಮಾರ್ ಇವರೆಲ್ಲರ ಜತೆಗೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಂಧನವಾಗಿದ್ದು ಎಲ್ಲರೂ ಜೈಲಿನಲ್ಲಿದ್ದಾರೆ.