ಕನ್ನಡ ವಾರ್ತೆಗಳು

ತೆರೆಮರೆಗೆ ಸರಿಯುತ್ತಿರುವ “ಕಂಬಳ ಕೋರಿ” ಗದ್ದೆ ಪೂಜೆ

Pinterest LinkedIn Tumblr

Kambla_kori_puja_1

ಬಂಟ್ವಾಳ, ನ.24 : ತುಳುನಾಡ ಮಣ್ಣಿನ ವಿಶಿಷ್ಟ ಆಚರಣೆಯಲ್ಲಿ ಒಂದಾಗಿರುವ “ಕಂಬಳ ಕೋರಿ” ಗದ್ದೆ ಪೂಜೆ ಇಂದಿನ ದಿನಗಳಲ್ಲಿ ತೆರೆಯ ಮರೆಗೆ ಸರಿಯುವ ಹಂತದಲ್ಲಿದ್ದರೂ ಅಪರೂಪ ಎಂಬಂತೆ ಬಂಟ್ವಾಳ ತಾಲೂಕಿನ ಕಾಡುಬೆಟ್ಟು ಗುತ್ತಿನ ಮನೆಯಲ್ಲಿ ಈಗಲೂ ಕಂಬಳ ಕೋರಿ ಗದ್ದೆ ಪೂಜೆಯನ್ನು ಸಂಪ್ರದಾಯ ಬದ್ಧವಾಗಿ ಆಚರಿಸಲಾಗುತ್ತಿದೆ.

ಕಾಡಬೆಟ್ಟು ಗುತ್ತಿನ ಮನೆಯಲ್ಲಿರುವ ಪಂಜುರ್ಲಿ ದೈವ ಗ್ರಾಮದ ದೈವವೂ ಹೌದು. ಗುತ್ತಿನವರ ಕೂಡುವಿಕೆಯಲ್ಲಿ ನಡೆಯುವ ಈ ಕಂಬಳ ಕೋರಿ ಗದ್ದೆ ಪೂಜೆಯಲ್ಲಿ ಗ್ರಾಮಸ್ಥರೆಲ್ಲರೂ ಜಾತಿ-ಮತ ಭೇದವಿಲ್ಲದೆ ಭಾಗವಹಿಸುವುದು ವಿಶೇಷವಾಗಿದೆ. ಪಟ್ಟಣ ಪ್ರದೇಶವನ್ನು ದಾಟಿ ಹಚ್ಚ ಹಸುರಿನ ತೋಟಗಳ ಮಧ್ಯೆ ಕಾಲು ಹಾದಿಯಲ್ಲಿ ಸಾಗುತ್ತಾ ಇಲ್ಲಿಯ ಗದ್ದೆಯ ಪ್ರದೇಶಕ್ಕೆ ಬಂದಾಗ ತಿಳಿನೀರಿನ ಸರೋವರದಂತೆ ಭಾಸವಾಗುತ್ತಿರುವ ವಿಶಾಲವಾದ ಮೂರೂವರೆ ಎಕರೆ ಗದ್ದೆ ಉತ್ತ ಬಳಿಕ ನಾಟಿ ಮಾಡಲು ಸಿದ್ಧವಾಗಿತ್ತು . ಗದ್ದೆಯ ಬದಿಗಳನ್ನು (ಕಟ್ಟಪುಣೆ) ಮಟ್ಟಸ ಮಾಡಿ ಹೂವುಗಳಿಂದ ಶೃಂಗರಿಸಿದ್ದರು. ಬದಿಗಳ ಉದ್ದಕ್ಕೂ ತೆಂಗಿನ ಮರಗಳ ಸಾಲು ಕಂಗೊಳಿಸುತ್ತಿತ್ತು . ಇದು ಪೂಕರೆ ಕಂಬುಲ ನಡೆಸುವ ಕಂಬಳ ಗದ್ದೆಯಾಗಿದೆ.

ಮಳೆಗಾಲದ ಬೇಸಾಯ ಮುಗಿದು ಸುಗ್ಗಿ ಬೆಳೆ ತೆಗೆಯಲು ನಾಟಿ ಮಾಡುವ ಮೊದಲು ಗದ್ದೆಯನ್ನು ಉಳುವ ಮುಕ್ತಾಯದ ದಿನವನ್ನು ಕಂಡದ ಕೋರಿ ಎಂದು ಕರೆಯುತ್ತಾರೆ. ಗದ್ದೆಗಳ ನಡುವೆ ಬಾಳೆಗಿಡ ನೆಡುವ ಕ್ರಮ ಕಂಡದ ಕೋರಿಯಾದರೆ ಪೂಕರೆ ಎಳೆಯುವುದನ್ನು ಕಂಬುಲದ ಕೋರಿ ಎನ್ನುತ್ತಾರೆ. ಗ್ರಾಮಸ್ಥರೆಲ್ಲರೂ ಒಂದೆಡೆ ಸೇರಿ ಜನರ ಸಮಾಜ ಸಾಮರಸ್ಯದ ಪ್ರತೀಕವಾಗಿದೆ. ಇಂತಹ ಆಚರಣೆಯ ನೈಜ ಸೌಂದರ್ಯವನ್ನು ಆಸ್ವಾದಿಸಲು ಶುಕ್ರವಾರ ಬಂಟ್ವಾಳ ತಾಲೂಕಿನ ಕಾಡಬೆಟ್ಟು ಗುತ್ತಿನ ಮನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದರು.

Kambla_kori_puja_2

ಸುಮಾರು500  ವರ್ಷಗಳ ಇತಿಹಾಸವಿರುವ “ಕಂಬುಲದ ಕೋರಿ” ಆಚರಣೆಯನ್ನು ಪ್ರಸ್ತುತ ಮನೆಯ ಯಜಮಾನರಾಗಿರುವ ರಾಜವರ್ಮ ಅಜ್ರಿಯವರ ಪ್ರಕಾರ ಅವರ ಚಿಕ್ಕಂದಿನಿಂದಲೂ ಯಾವುದೇ ಬದಲಾವಣೆ ಇಲ್ಲದೇ ಆಚರಿಸಿಕೊಂಡು ಬರಲಾಗುತ್ತಿದೆ.  ಆಮಂತ್ರಣ: ಪೂಕರೆ ಎಳೆಯುವ ಮೂರು ದಿನಗಳ ಮೊದಲು ಕೊರಗಜ್ಜ ದೈವದ ಪಾತ್ರಿ ಗುತ್ತಿನ ಮನೆಯ ರಾಯಭಾರಿಯಾಗಿ ಗ್ರಾಮದ ಮನೆಗಳಿಗೆ ತೆರಳಿ ಕಂಬುಳದ ಕೋರಿಗೆ ದಿನ ನಿಗದಿಯಾದ ಕುರಿತು ಸಂದೇಶ ನೀಡುತ್ತಾರೆ. ಎರುಮಾಣಿ ಬರೊಡುಗೆ ಎಂದು ಹೇಳುತ್ತಾರೆ. ಗ್ರಾಮದ ದೈವ ಪಂಜುರ್ಲಿಯ ಅಪ್ಪಣೆ ಪ್ರಕಾರ ಬಂದಿದ್ದೇನೆ ಎನ್ನುತ್ತಾರೆ. ಗ್ರಾಮಸ್ಥರು ಆತನಿಗೆ ಭಕ್ತಿ ಪೂರ್ವಕವಾಗಿ ನಮಿಸಿ ಶಕ್ತಾ ನುಸಾರ ವಸ್ತು ಅಥವಾ ಹಣ ಕಾಣಿಕೆಯಾಗಿ ನೀಡುತ್ತಾರೆ.

ಕಂಬುಲದ ಕೋರಿಯ ಎರಡ ದಿನ ಮೊದಲು ನಲಿಕೆ ಜನಾಂಗದವರು ಬ್ಯಾಂಡ್, ವಾಲಗ, ಕೊಂಬು, ಸತ್ತಿಗೆ, ದೀವಟಿಕೆಗಳ ಸಹಿತ ಗುತ್ತಿನ ಮನೆಯವರೊಂದಿಗೆ ಗದ್ದೆಗೆ ತೆರಳಿ ಬೆಳಗಿನವರೆಗೆ ವಾದ್ಯ ನುಡಿಸುತ್ತಾರೆ. ಇದನ್ನು ಡೆಕ್ಕೋರಿ ಎಂದು ಕರೆಯುತ್ತಾರೆ. ಭೂಮಿ ತಾಯಿಯನ್ನು ಎಚ್ಚರಿಸುವುದಕ್ಕೆ ತಡೆವು ಎನ್ನುತ್ತಾರೆ. ಗುತ್ತಿನ ಮನೆಯಲ್ಲಿ ಕಂಬುಲದ ಕೋರಿ: ಗುತ್ತಿನ ಮನೆಯಲ್ಲಿ ಕೊಡಮಣಿತ್ತಾಯ, ಪಂಜುರ್ಲಿ, ಕಲ್ಕುಡ-ಕಲ್ಲುರ್ಟಿ, ಕೊರಗಜ್ಜ ದೈವಗಳಿವೆ, ಕಂಬಲದ ಕೋರಿಯ ದಿನ ಬೆಳಗ್ಗೆ ಈ ಗುತ್ತಿನ ಮನೆಯಲ್ಲಿ ನೇಮ ಪಡಕೊಂಡ ಕೊರಗಜ್ಜ ದೈವ ಗ್ರಾಮದ ವಿವಿಧ ಮನೆಗಳಿಂದ ಬಂದ ಕೋಣಗಳೊಂದಿಗೆ ಕಂಬಳ ಗದ್ದೆಗೆ ಬಂದು ಇಳಿಯಲು ಎರು ಜಪುಡಾಲೆ ಎಂದು ಅಪ್ಪಣೆ ನೀಡುತ್ತದೆ. ಎಲ್ಲ ಕೋಣಗಳನ್ನೂ ಒಮ್ಮೆಲೆ ಗದ್ದೆಗೆ ಇಳಿಸಿ ಮಧ್ಯಾಹ್ನದ ತನಕ ಗದ್ದೆ ಉಳುತ್ತಾರೆ.  ಇತ್ತ ಗುತ್ತಿನ ಮನೆಯಲ್ಲಿ ವಿವಿಧ ಪೂಜಾ ವಿಧಾನಗಳೊಂದಿಗೆ ಗ್ರಾಮ ದೈವಗಳಿಗೆ ಪರ್ವ ಹಾಕಿಸಿ ಪಂಜುರ್ಲಿ ದೈವದ ಹಗಲು ನೇಮ ನಡೆಯುತ್ತದೆ.. ದೈವ ಅಣಿಕಟ್ಟು ಏರಿಸುವ ಸಂದರ್ಭ ದೈವದ ಮುಕ್ಕಾಲ್ದಿಯೊಡನೆ ಎಲ್ಲರೂ ಕೊಂಬು ವಾಲಗದೊಂದಿಗೆ ಕಂಬಳ ಗದ್ದೆಗೆ ಬರುತ್ತಾರೆ.

Kambla_kori_puja_3

ಪೂಕರೆ ಬಂಡಿ :
ಅತ್ತ ಗದ್ದೆಯ ಬದಿಯಲ್ಲಿ ನಾಗಬ್ರಹ್ಮ ದೈವ ಅಣಿ ಏರಿಸಿ ಸಿದ್ಧಗೊಂಡಿರುತ್ತದೆ. ಅಲ್ಲಿ ಕಲ್ಲಿನ ಚಕ್ರವುಳ್ಳ ತೇರಿನಾಕಾರದ ಪೂಕರೆ ಬಂಡಿಯನ್ನು ಕೇಪುಳ ಹೂವುಗಳಿಂದ ಅಲಂಕರಿಸಿ ಸಿದ್ಧಗೊಳಿಸಲಾಗಿರುತ್ತದೆ. ಈ ಪೂಕರೆ ಬಂಡಿಯನ್ನು ಎಳೆಯಲು ಪಲ್ಲೆ ಎಂಬ ಬೀಳಲನ್ನೇ ಬಳಸಲಾಗುತ್ತದೆ. ಬಳಿಕ ಉಳುಮೆ ಮಾಡುತ್ತಿದ್ದ ಕೋಣಗಳನ್ನು ಮೇಲೆ ಬರುವಂತೆ ಹಾಗೂ ಪೂಕರೆ ಬಂಡಿಯನ್ನು ಎಳೆಯುವಂತೆ ನಾಗಬ್ರಹ್ಮ ದೈವ ಅಪ್ಪಣೆ ನೀಡುತ್ತದೆ. ಗ್ರಾಮಸ್ಥರೆಲ್ಲ ಸೇರಿ ಸಂಭ್ರಮದಿಂದ ಪೂಕರೆ ಬಂಡಿಯನ್ನು ಎಳೆದುಕೊಂಡು ಗದ್ದೆಯ ಮಧ್ಯ ಭಾಗಕ್ಕೆ ತಂದು ನಿಲ್ಲಿಸುತ್ತಾರೆ. ವಿಶಾಲ ಗದ್ದೆಗೆ ನಾಗಬ್ರಹ್ಮ ದೈವ ಎಲ್ಲರ ಜೊತೆ ಸುತ್ತು ಬಂದು ಉತ್ತಮ ಫಸಲು ಬರುವಂತೆ ಹರಸುತ್ತದೆ. ದೈವದ ಜೊತೆ ಓರ್ವ ವೇಷಧಾರಿ ಇದ್ದು ಎಲ್ಲಾ ಕಾರ್ಯಕ್ರಮಗಳನ್ನು ನಡೆಸಲು ಸೂಚನೆ ನೀಡುತ್ತದೆ. ಫಸಲಿಗೆ ಕೀಟ ಬಾಧೆ ಬಾರದಂತೆ ತಡೆಯಲು ಉರವೆ ಎಂಬ ತೆಂಗಿನ ಗರಿಯಿಂದ ತಯಾರಿಸಿದ ಹಾವಿನಾಕೃತಿಯ ರಕ್ಷಾದಾರವನ್ನು ಗದ್ದೆ ಬದಿಯ ತೆಂಗಿನ ಮರಕ್ಕೆ ಕಟ್ಟಲಾಗುತ್ತದೆ. ನಾಗಬ್ರಹ್ಮ ದೈವದ ವಾಹನವಾಗಿ ಕುದುರೆಯನ್ನು ತೆಂಗಿನ ಹಸಿ ಸೋಗೆಯಿಂದ ಸಾಂಕೇತಿಕವಾಗಿ ನಿರ್ಮಿಸುತ್ತಾರೆ. ಅದನ್ನು ನಾಗಬನಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲಿಂದ ಗುತ್ತಿನ ಮನೆಗೆ ಹಿಂದಿರುಗಿ ನಾಗಬ್ರಹ್ಮ ದೈವಕ್ಕೆ ನೇಮ ನಡೆಯುತ್ತದೆ. ಜೊತೆಗೆ ಪಂಜುರ್ಲಿ ದೈವದ ನೇಮ ಮುಂದುವರಿದು ಗ್ರಾಮಸ್ಥರ ಸಮಸ್ಯೆಗಳಿಗೆ ನ್ಯಾಯ ತೀರ್ಮಾನ ನೀಡಿ ಅಭಯ ಪ್ರದಾನ ನೀಡುತ್ತದೆ. ಬಳಿಕ ಎಲ್ಲರೂ ಹಬ್ಬದೂಟ ಮಾಡುತ್ತಾರೆ. ಇತ್ತೀಚೆಗಿನ ದಿನಗಳಲ್ಲಿ ಅಪರೂಪವಾಗಿರುವ “ಕಂಬಳ ಕೋರಿ” ಗದ್ದೆ ಪೂಜೆ ಕಾಡಬೆಟ್ಟು ಗುತ್ತಿನ ಮನೆಯಲ್ಲಿ ಸಂಪ್ರದಾಯ ಬದ್ಧವಾಗಿ ಈಗಲೂ ಆಚರಣೆಯಲ್ಲಿರುವುದು ತುಳುವರ ಅಭಿಮಾನದ ಸಂಕೇತ.

Write A Comment