ಮಂಗಳೂರು,ನ.22: ತುಳುನಾಡಿನ ರೈತಾಪಿವರ್ಗದ ಅಭಿಮಾನದ ಸಂಭ್ರಮದ ಉತ್ಸವ-ಕ್ರೀಡೆಯೇ ಕಂಬಳ. ಸಾಂಪ್ರದಾಯಿಕ ನೆಲೆಯಲ್ಲಿ ಅತ್ಯಂತ ವೈಶಿಷ್ಠ್ಯವಾದ ಈ ಕ್ರೀಡೆಯನ್ನು ಹಿಂಸೆಯ ವಿಚಾರ ಮುಂದಿಟ್ಟಕೊಂಡು ಸುಪ್ರಿಂಕೋರ್ಟ್‌ನ ಆದೇಶದಂತೆ ತಕ್ಷಣದಿಂದ ನಿಷೇದ ತಂದಿರುವುದು ವಿಷಾದನೀಯ.
ದೇವರ ಕಂಬಳ ಎನ್ನುವ ನೆಲೆಯಲ್ಲಿ ಹಲವಾರು ಕಡೆ ಪಾರಂಪರಿಕ ಹಾಗೂ ಆರಾಧನಾ ಸ್ವರೂಪದಲ್ಲಿ ನಡೆದುಕೊಂಡು ಬರುತ್ತಿರುವ ಕಂಬಳದ ನಿಷೇದ ಸಮಸ್ತ ಕರಾವಳಿಯ ಜನತೆಗೆ ಬೇಸರವನ್ನುತಂದಂತಾಗಿದೆ.
ಶಿಸ್ತು ಬದ್ಧವಾಗಿಯೂ, ಸಂಘಟನಾತ್ಮಕವಾಗಿಯೂ ರೈತಾಪಿ ಜನತೆಯ ಕ್ರೀಡೆಯೆನಿಸಿದ ಈ ವೈಶಿಷ್ಠ್ಯಪೂರ್ಣ ಕಂಬಳವು ಪ್ರವಾಸೋದ್ಯಮದ ನೆಲೆಯಲ್ಲೂ ವಿಶ್ವದ ಜನರನ್ನು ತನ್ನತ್ತ ಆಕರ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ವಿಶಿಷ್ಟ ಗ್ರಾಮೀಣ ಕ್ರೀಡಾ ಪ್ರಕಾರವು ಯುವಜನತೆಯನ್ನು ನಾಡಿನ ಮಣ್ಣಿನ ಸಂಸ್ಕೃತಿಯತ್ತ ಆಕರ್ಷಿಸುತ್ತಿರುವುದು ನಾವೆಲ್ಲರೂ ಕಂಡುಕೊಂಡ ಸತ್ಯ.
ಈ ದಿಸೆಯಲ್ಲಿ ಸರಕಾರ, ಹಾಗೂ ಜನಪ್ರತಿನಿಧಿಗಳು ತಕ್ಷಣ ಮಧ್ಯ ಪ್ರವೇಶಿಸಿ ತುಳುನಾಡಿನ ಅಭಿಮಾನದ ಸಂಕೇತವಾದ ಕಂಬಳವನ್ನು ಉಳಿಸುವರೇ ನ್ಯೂನತೆಗಳನ್ನು ಸರಿಪಡಿಸಿ ಆದ್ಯತೆಯ ನೆಲೆಯಲ್ಲಿ ಪರಿಹಾರವನ್ನು ಕಂಡುಕೊಳ್ಳಬೇಕೆಂದು ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಒತ್ತಾಯಿಸಿದ್ದಾರೆ.