ಕನ್ನಡ ವಾರ್ತೆಗಳು

ವೆಂಕಯ್ಯ ನಾಯ್ಡು ಬ್ಯಾಗ್ ಕದ್ದ ಕಳ್ಳ, ತಿರುಗಿ ಪಾಸ್‌ಪೋರ್ಟ್ ಎಸೆದು ಪರಾರಿ

Pinterest LinkedIn Tumblr

venkya_nyadu_pass_port

ನವದೆಹಲಿ : ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಬಾರ್ಸಿಲೋನಾದಲ್ಲಿ ತಮಗಾದ ಕೆಟ್ಟ ಅನುಭವವೊಂದನ್ನು ಹೇಳಿಕೊಂಡಿದ್ದಾರೆ. ಆದರೆ ಘಟನೆ ಸುಖಾಂತ್ಯ ಕಂಡಿದ್ದು ತಮ್ಮ ಬ್ಯಾಗ್‌ನ್ನು ಕದ್ದ ಕಳ್ಳನೊಬ್ಬ ಅದನ್ನು ಹಿಂತಿರುಗಿ ಎಸೆದಿದ್ದಾನೆ ಎಂದು ಅವರು ತಿಳಿಸಿದರು. ಗುರುವಾರ ಭಾರತಕ್ಕೆ ಹಿಂತಿರುಗುವ ಸಮಯದಲ್ಲಿ ಅವರು ತಂಗಿದ್ದ ಹೊಟೆಲ್‌ನಲ್ಲಿಯೇ ಈ ಘಟನೆ ನಡೆದಿದೆ.

ಸೋಶಿಯಲ್ ಇನ್ನೋವೇಶನ್ ಫಾರ್ ಫ್ಯುಚರ್ ಸೊಲ್ಯುಶನ್ಸ್ ಫಾರ್ ಇಂಡಿಯಾ ಟುಡೆ ಎಂಬ ವಿಷಯದ ಮೇಲೆ ಆಯೋಜಿತವಾಗಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ನಾನು ನನ್ನ ಪಾಸ್‌ಪೋರ್ಟ್ ಇದ್ದ ಬ್ಯಾಗನ್ನು ಕಳೆದುಕೊಂಡೆ. ಆದರೆ ಪಾಸ್‌ಪೋರ್ಟ್ ಮಾತ್ರ ತಕ್ಷಣ ಅದು ನನ್ನ ಕೈಗೆ ಮರಳಿ ಸೇರಿತು. ಇದು ರಾಜತಾಂತ್ರಿಕ ಪಾಸ್‌ಪೋರ್ಟ್ ಎಂದು ಕಳ್ಳನಿಗೆ ಅರಿವಾಯಿತು. ಆದ್ದರಿಂದ ತಾನು ಬಂಧಿಸಲ್ಪಡುತ್ತೇನೆ ಎಂಬ ಭಯದಿಂದ ಆತ ಪಾಸ್‌ಪೋರ್ಟ್‌ನ್ನು ಎಸೆದ. ಆದರೆ ಲಾಪ್‌ಟಾಪ್ ಮತ್ತು ಕ್ರೆಡಿಟ್ ಕಾರ್ಡ್‌‌ನ್ನು ಆತ ಹೊತ್ತೊಯ್ದ ಎಂದಿದ್ದಾರೆ. ಆದರೆ ಅವರ ಜತೆ ಇದ್ದ ಅಧಿಕಾರಿಯೊಬ್ಬರ ಪಾಸ್‌ಪೋರ್ಟ್‌ನ್ನು ಕಳ್ಳ ಮರಳಿ ನೀಡಿಲ್ಲ.

“ನನ್ನ ರಾಯಭಾರಿ ನನ್ನೊಂದಿಗೆ ಇದ್ದರಿಂದ ನನ್ನ ವಿಶೇಷ ಕರ್ತವ್ಯದ ಅಧಿಕಾರಿಗೆ ತ್ವರಿತವಾಗಿ ತುರ್ತು ಪಾಸ್‌ಪೋರ್ಟ್‌ ಪಡೆಯಲು ಸಹಾಯವಾಯಿತು ಮತ್ತು ಅವರು ಸಮಯಕ್ಕೆ ಹಿಂತಿರುಗಲು ಸಾಧ್ಯವಾಯಿತು,” ಎಂದು ನಾಯ್ಡು ಹೇಳಿದರು.

ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಬಾರ್ಸಿಲೋನಾ ಜೇಬುಗಳ್ಳರ ಮತ್ತು ಬ್ಯಾಗ್ ಕಳ್ಳರಿಂದಾಗಿಯೂ ಕುಖ್ಯಾತಿ ಪಡೆದಿದೆ. ವಿಮಾನ ನಿಲ್ದಾಣ, ರೈಲು ನಿಲ್ದಾಣಗಳು ಮತ್ತು ಹೊಟೆಲ್‌ಗಳಲ್ಲಿ ಈ ಕುರಿತು ಸೂಚನೆ ನೀಡಲು ಸಲಹಾಕಾರರು ಸಹ ಇರುತ್ತಾರೆ.

Write A Comment