ಕನ್ನಡ ವಾರ್ತೆಗಳು

ದ.ಕ. : ವಸತಿ ಯೋಜನೆಯ 1364 ಮನೆಗಳಲ್ಲಿ 496 ಮನೆಗಳು ತಿರಸ್ಕಾರ

Pinterest LinkedIn Tumblr

Dc_meet_news_1

ಮಂಗಳೂರು,ನ.16 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಸತಿ ಯೋಜನೆ ಮನೆಗಳನ್ನು ಅಧಿಕ ವೆಚ್ಚ ಮಾಡಿ ನಿರ್ಮಿಸಿದ ಕಾರಣ ನಾಟ್ ಓಕೆ ಆಗಿದ್ದ 1364 ಮನೆಗಳ ಪೈಕಿ, ನೋಡೆಲ್ ಅಧಿಕಾರಿಗಳ ಪರಿಶೀಲನಾ ಆಧಾರದ ಮೆಲೆ 496 ಮನೆಗಳನ್ನು ತಿರಸ್ಕರಿಸಲಾಗಿದೆ.

ಉಳಿದ ಒಟ್ಟು 868 ಮನೆಗಳ ವಿವರವನ್ನು ರಾಜೀವ ಗಾಂಧಿ ವಸತಿ ನಿಗಮಕ್ಕೆ ಪರಿಶೀಲನೆಗೆ ಕಳುಹಿಸಿದ್ದು, ಅದರಲ್ಲಿ 213 ಮನೆಗಳಿಗೆ ಅನುದಾನ ಬಿಡುಗಡೆ ಯಾಗಿದೆ. 655 ಮನೆಗಳು ಆಡಿಟ್ ಹಂತದಲ್ಲಿದ್ದು, ಹೆಚ್ಚಿನ ಮನೆಗಳಿಗೆ ಅನುದಾನ ಬಿಡುಗಡೆ ನಿರೀಕ್ಷೆ ಇದೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ 19ನೇ ಸಾಮಾನ್ಯ ಸಭೆಯಲ್ಲಿ ಸಿಇಒ ತುಳಸಿ ಮದ್ದಿನೇನಿ ಈ ಮಾಹಿತಿ ನೀಡಿದರು.

Dc_meet_news_2

ತಿರಸ್ಕೃತಗೊಂಡ ಮನೆಗಳನ್ನು ಪಟ್ಟಿಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ಕಳುಹಿಸಿಕೊಡಬೇಕು. ಮನೆ ಕಟ್ಟಿದವರು ಇನ್ನೂ ಕಾಯಲು ಅವಕಾಸ ಕೊಡಬೇಡಿ. ಆಡಿಟ್ ಹಂತದ ಮನೆಗಳಿಗೆ ಅನುದಾನ ಬಿಡುಗಡೆಗೆ ಪ್ರಯತ್ನ ಮುಂದುವರಿಸಿ ಎಂದು ಅಧ್ಯಕ್ಷರು ಸೂಚನೆ ನೀಡಿದರು.

ಕಳ್ಳಿಗೆ ಗ್ರಾಮದಲ್ಲಿ ಶಾಲೆ ಹೊರಗೆ ಓದುತ್ತಿದ್ದ ವಿದ್ಯಾರ್ಥಿ ಮೇಲೆ ಮರಬಿದ್ದು ಕೈ ತುಂಡಾಗಿದ್ದರೂ, ಸುವರ್ಣ ಆರೋಗ್ಯ ಚೈತನ್ಯ ಯೋಜನೆ ಅಥವಾ ಶಿಕ್ಷಕ ಕಲ್ಯಾಣ ನಿಧಿಯಿಂದ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಮಮತಾ ಗಟ್ಟಿ ದೂರಿದರು. ನಿಧಿಯಿಂದ 25 ಸಾವಿರ ರೂ. ಮಾತ್ರ ಸಿಗಲಿದ್ದು, ಅದಕ್ಕಾಗಿ ಆಸ್ಪತ್ರೆ ‘ಡಿಸ್ಚಾರ್ಜ್ ಸಮ್ಮರಿ’ ಮತ್ತು ಎಲ್ಲ ಮೂಲ ಬಿಲ್‌ಗಳಲ್ಲಿ ಕೊಡಬೇಕಾಗುತ್ತದೆ. ಇದು ಕೊಟ್ಟರೆ ಅವರಿಗೆ ಬೇರೆ ಪರಿಹಾರ ಸಿಗುವುದಿಲ್ಲ. ಬಾಲಕನ ಪೋಷಕರು ಹೆಚ್ಚಿನ ಪರಿಹಾರ ಕ್ಕಾಗಿ ಸಚಿವರ ಮೂಲಕ ಪ್ರಯತ್ನ ಮಾಡುತ್ತಿರುವುದರಿಂದ ಬಿಲ್ ಕೊಟ್ಟಿಲ್ಲ ಎಂದು ಬಂಟ್ವಾಳ ಬಿಇಒ ಸ್ಪಷ್ಟಪಡಿಸಿದರು.

ಶಾಲೆಯೊಂದರ ಎಂಟನೇ ತರಗತಿ ವಿದ್ಯಾರ್ಥಿಗೆ ಸರಕಾರದ ಹಳದಿ ಕಾರ್ಡ್ ಸಿಗದೆ, ಅನಾರೋಗ್ಯಕ್ಕೆ ಚಿಕಿತ್ಸೆ ಸಿಕ್ಕಿಲ್ಲ ಎಂದು ಮಮತಾ ಗಟ್ಟಿ ಗಮನ ಸೆಳೆದರು. ಎರಡರಿಂದ 10ನೇ ತರಗತಿ ವರೆಗಿನ 9630 ಸರಕಾರಿ, 4845 ಅನುದಾನಿತ ಮತ್ತು 14,811 ಅನುದಾನರಹಿತ ಶಾಲೆ ವಿದ್ಯಾರ್ಥಿಗಳಿಗೆ ಕಾರ್ಡ್ ವಿತರಿಸಲಾಗಿದೆ ಎರಡು ವರ್ಷದಿಂದ ಕಾರ್ಡ್ ವಿತರಣೆ ಆಗುತ್ತಿಲ್ಲ. ಅನುದಾನಿತ ಶಾಲೆ ಮಕ್ಕಳಿಗೆ ಕಾರ್ಡ್ ಇದೆಯಾ ಎಂದು ಪರಿಶೀಲಿಸಬೇಕು ಎಂಬ ಡಿಡಿಪಿಐ ಅವರ ವಿಭಿನ್ನ ಹೇಳಿಕೆಯು ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.

Dc_meet_news_3

ಕೃಷಿ ಇಲಾಖೆಯ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳನ್ನು ಖಾಸಗಿ ವ್ಯಕ್ತಿಗಳ ಜಾಗದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸರಕಾರದ ಬಳಿ ಸಾಕಷ್ಟು ಸಿಬ್ಬಂದಿ, ಕಟ್ಟಡ ಇಲ್ಲದ ಕಾರಣ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ. ಎನ್‌ಜಿಒಗಳು ಸೇವಾ ಶುಲ್ಕ ಮೂಲಕ ನಿರ್ವಹಣೆ ಮಾಡಲಿದ್ದಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ಮಾಹಿತಿ ನೀಡಿದರು.

ಅಡಕೆ ಕೊಳೆ ರೋಗ ಪರಿಹಾರಕ್ಕಾಗಿ ವಿಳಂಬವಾಗಿ ಕಳುಹಿಸಿದ ಅರ್ಜಿಗಳು ತಹರಿಸೀಲ್ದಾರ್ ಕಚೇರಿಯಲ್ಲಿ ಉಳಿದಿವೆ. ಈ ಬಾರಿ ಮಳೆಯಿಂದ ಅಡಕೆಗೆ ಹೆಚ್ಚಿನ ನಷ್ಟ ನಡೆದಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ತಿಳಿಸಿದರು. ತಹಸೀಲ್ದಾರ್ ಕಚೇರಿಯಲ್ಲಿ ಇರುವ ಅರ್ಜಿಗಳ ಚೆಕ್ ವಿತರಣೆಗೆ ಡಿಸಿ ಜತೆ ಮಾತುಕತೆ ನಡೆಸುತ್ತೇನೆ ಎಂದು ಅಧ್ಯಕ್ಷರು ಹೇಳಿದರು.

ಉದ್ಯೋಗ ಖಾತರಿ ಯೋಜನೆಯಲ್ಲಿ ಬಾವಿ ನಿರ್ಮಾಣ ಮಾಡುತ್ತೇವೆ ಎಂದು ಭಾರಿ ಪ್ರಚಾರ ನೀಡಿ ಅಲ್ಲಲ್ಲಿ ಸಭೆ ನಡೆಸಿದರೂ ಹಣ ಬಿಡುಗಡೆ ಮಾಡುತ್ತಿಲ್ಲ. ಯೋಜನೆ ಜಾರಿಗೆ ಕೆಲವು ಅಧಿಕಾರಿಗಳು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಎಂ.ಎಸ್.ಮೊಹಮ್ಮದ್ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಒಟ್ಟು 1240 ಬಾವಿಗಳ ಪೈಕಿ 20 ಸಾವಿರ ರೂ. ಒಳಗೆ ಖರ್ಚು ಮಾಡಿರುವ ಬಾವಿಗಳಿಗೆ ಅನುದಾನ ನೀಡಿದ್ದೇವೆ. ಬಾವಿಯ ಆವರಣ ಗೋಡೆಗೆ ಅನುದಾನ ನೀಡಲು ಸಾಧ್ಯವಿಲ್ಲ. ನಾವು ಸರಕಾರದ ಮಾರ್ಗಸೂಚಿ ಬಿಟ್ಟು ಕೆಲಸ ಮಾಡುವುದಿಲ್ಲ ಎಂದು ಸಿಇಒ ತುಳಸಿ ಮದ್ದಿನೇನಿ ಹೇಳಿದರು.

ಆವರಣ ಗೋಡೆಗೆ ಅನುದಾನ ಕೊಡಬಾರದು ಎಂಬ ನಿಯಮ ಇದ್ದರೆ ತಿಳಿಸಿ. ಒಂದೊಂದು ಜಿಲ್ಲೆಂಎಗೆ ಒಂದೊಂದು ಕಾನೂನು ಇವೆ. ಮಡಿಕೇರಿಯಲ್ಲಿ ಉತ್ತಮ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಯೋಜನೆ ಹಣ ನೀಡಲಾಗಿದೆ ಎಂದು ಕಾಂಗ್ರೆಸ್ ಸದಸ್ಯರು ಗದ್ದಲ ನಡೆಸಿದರು. ಎಲ್ಲ ಸದಸ್ಯರಿಗೆ ಮಾರ್ಗಸೂಚಿ ನೀಡುವಂತೆ ಹೇಳುವ ಮೂಲಕ ಅಧ್ಯಕ್ಷರು ಚರ್ಚೆಗೆ ತೆರೆ ಎಳೆದರು.

ಎಂಎಸ್‌ಇಝೆಡ್ ಬಳಿ ಸರಕಾರದ ರಸ್ತೆ ಅತಿಕ್ರಮಣ ನಡೆದಿಸಿ ಕೊಳವೆಗಳನ್ನು ಹಾಕಲಾಗುತ್ತಿದೆ. ಲೋಕೋಪಯೋಗಿ ರಸ್ತೆ ಮುಚ್ಚಲಾಗಿದೆ ಎಂದು ಜನಾರ್ದನ ಗೌಡ ಮತ್ತು ರಿತೇಶ್ ಕುಮಾರ್ ಗಮನ ಸಳೆದರು. ಯಾರಾದರೂ ಸರಕಾರಿ ಜಮೀನು ಅತಿಕ್ರಮಣ ಮಾಡಿದ್ದರೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪಿಡಬ್ಲ್ಯುಡಿ ರಸ್ತೆ ಅತಿಕ್ರಮಣ ಬಗ್ಗೆ ಕೆಡಿಪಿ ಸಭೆಯಲ್ಲಿ ಗಮನ ಸೆಳೆಯಲಾಗುವುದು ಎಂದು ಅಧ್ಯಕ್ಷರು ಹೇಳಿದರು. ಇತ್ತೀಚೆಗೆ ನಿಧನರಾದ ಜಿಲ್ಲಾ ಪಂಚಾಯಿತಿ ಸದಸ್ಯೆ ಸಾವಿತ್ರಿ ಶಿವರಾಮ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಸ್ಥಾಯಿಸಮಿತಿ ಅಧ್ಯಕ್ಷರಾದ ಮೀನಾಕ್ಷಿ ಮಂಜುನಾಥ, ಸಿ.ಕೆ.ಚಂದ್ರಕಲಾ, ಬಾಲಕೃಷ್ಣ ಸುವರ್ಣ, ಸದಸ್ಯರಾದ ಯಶವಂತಿ ಆಳ್ವ, ದೇವರಾಜ್, ಈಶ್ವರ ಕಟೀಲ್, ನವೀನ್ ಮೇನಾಲ, ಕೇಶವ ಗೌಡ ಬಜತ್ತೂರು ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.

Write A Comment