ಕರಾವಳಿ

ಕುಂದಾಪುರ | ಕಳೆದುಕೊಂಡ ಮೊಬೈಲ್‌ಗಳನ್ನು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆಮಾಡಿ ವಾರಸುದಾರರಿಗೆ ಹಸ್ತಾಂತರಿಸಿದ ಪೊಲೀಸರು

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಕುಂದಾಪುರ ಪೊಲೀಸ್ ಉಪವಿಭಾಗ ವ್ಯಾಪ್ತಿಯ ವಿವಿದೆಡೆ ಜನರು ಕಳೆದುಕೊಂಡ ಮೊಬೈಲ್‌ಗಳನ್ನು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆಮಾಡಿ ಮೂಲ ವಾರಸುದಾರರಿಗೆ ಹಸ್ತಾಂತರಿಸುವ ಕಾರ್ಯಕ್ರಮ ಕುಂದಾಪುರ ನಗರ ಠಾಣೆಯಲ್ಲಿ ಸೊಮವಾರ ನಡೆಯಿತು.

ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಮೊಬೈಲ್ ಫೋನ್ ಹಸ್ತಾಂತರಿಸಿ ಮಾತನಾಡಿ, ತಮ್ಮ ಮೊಬೈಲ್ ಫೋನುಗಳನ್ನು ಜಾಗರುಕರಾಗಿ ಕಾಪಾಡಿಕೊಳ್ಳಬೇಕು. ಅಕಸ್ಮಾತ್ ಕಳೆದುಹೋದಲ್ಲಿ, ಕಳವಾದಲ್ಲಿ ಶೀಘ್ರವೇ ಸಿಇಐಆರ್ ಪೋರ್ಟಲ್‌ನಲ್ಲಿ ದಾಖಲು ಮಾಡಬೇಕು. ಇದರಿಂದ ಪೊಲೀಸರು ಕಳೆದುಕೊಂಡ ಮೊಬೈಲ್ ಪತ್ತೆ ಮಾಡಲು ಸಾಧ್ಯ. ಸಿಇಐಆರ್ ಪೋರ್ಟಲ್ ನಾಗರಿಕ ಸ್ನೇಹಿಯಾಗಿ ಕೆಲಸ ಮಾಡುತ್ತಿದ್ದು ಅದನ್ನು ಬಳಸಿಕೊಂಡು ಅಧಿಕಾರಿ ಸಿಬ್ಬಂದಿ ಪೋನ್ ಪತ್ತೆಹಚ್ಚುವಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದರು.

ಕೊಲ್ಲೂರು ಠಾಣೆ ಪಿಎಸ್ಐ ವಿನಯ್ ಎಂ. ಕೊರ್ಲಹಳ್ಳಿ ವಾರೀಸುದಾರರು ಮರಳಿ ಪಡೆದ ಮೊಬೈಲ್ ಫೋನ್ ಅನ್‌ಲಾಕ್ ಮಾಡುವ ವಿಧಾನದ ಬಗ್ಗೆ ಮಾಹಿತಿ ನೀಡಿದರು.

ಕುಂದಾಪುರ ನಗರ ಠಾಣೆ ಇನ್ಸ್‌ಪೆಕ್ಟರ್ ಜಯರಾಮ್ ಗೌಡ, ಪಿಎಸ್ಐ ನಂಜಾ ನಾಯ್ಕ್, ಪೊಲೀಸ್ ಉಪವಿಭಾಗದ ವಿವಿಧ ಠಾಣೆಗಳ ಪಿಎಸ್ಐಗಳಾದ ಪವನ್ ನಾಯಕ್, ಐ.ಆರ್. ಗಡ್ಡೇಕರ್, ಸುನೀಲ್ ಕುಮಾರ್, ನಿರಂಜನ್ ಗೌಡ, ಪುಷ್ಪಾ, ನವೀನ್ ಬೋರ್ಕರ್, ಸಿಬ್ಬಂದಿಗಳು ಇದ್ದರು.

ಒಂದು ವರ್ಷದಲ್ಲಿ 300ಕ್ಕೂ ಅಧಿಕ ಮೊಬೈಲ್ ಪತ್ತೆ!: 2025-26 ಸಾಲಿನಲ್ಲಿ ಕುಂದಾಪುರ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಕುಂದಾಪುರ ನಗರ, ಗ್ರಾಮಾಂತರ, ಶಂಕರನಾರಾಯಣ, ಅಮಾಸೆಬೈಲು, ಕೊಲ್ಲೂರು, ಬೈಂದೂರು, ಗಂಗೊಳ್ಳಿ ಠಾಣೆ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡವರು ಸಿಇಐಆರ್ ಪೋರ್ಟಲ್‌ನಲ್ಲಿ ದಾಖಲಿಸಿದ ಪ್ರಕರಣದಲ್ಲಿ  ಒಟ್ಟು 318 ಫೋನ್‌ಗಳನ್ನು ಪತ್ತೆ‌ಮಾಡಿ ಆಯಾಯ ಠಾಣೆಯಲ್ಲಿ ಸಂಬಂದಪಟ್ಟವರಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದ್ದು ಉಪವಿಭಾಗದ 7 ಠಾಣೆಯಲ್ಲಿ‌ನ 50 ಮೊಬೈಲ್‌ಗಳನ್ನು ಸೋಮವಾರ ಡಿವೈಎಸ್ಪಿ ನೇತೃತ್ವದಲ್ಲಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.

 

Comments are closed.