ಕರಾವಳಿ

ಉಡುಪಿ | ಯುವಕನ ಅಪಹರಣ ಪ್ರಕರಣ: ಕೋಕಾ ಕಾಯ್ದೆಯಡಿ ಏಳು ಮಂದಿ ಆರೋಪಿಗಳ ಬಂಧನ | ತಲೆಮರೆಸಿಕೊಂಡ ಇಬ್ಬರು ಆರೋಪಿಗಳಿಗೆ ಪೊಲೀಸರಿಂದ ಶೋಧ

Pinterest LinkedIn Tumblr

ಉಡುಪಿ: ಜಿಲ್ಲೆಯ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ನಡೆದ ಯುವಕನ ಅಪಹರಣ ಪ್ರಕರಣದ ಆರೋಪಿಗಳ ವಿರುದ್ಧ ಕೋಕಾ ಕಾಯಿದೆಯಡಿ ಪ್ರಕರಣ ದಾಖಲಿಸಿ ಏಳು ಮಂದಿಯನ್ನು ಬಂಧಿಸಿದ್ದು ತಲೆಮರೆಸಿಕೊಂಡಿರುವ ಪ್ರಕರಣದ ಪ್ರಮುಖ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಸುರತ್ಕಲ್ ಕಾಟಿಪಳ್ಳದ ದೇವಿಪ್ರಸಾದ್ ಶೆಟ್ಟಿ(33), ಸುದೀಪ(22), ಮಿಥುನ್ ಕೈಕಂಬ(20), ಕೃಷ್ಣಾಪುರದ ಶ್ರೀಷಾ ಆನಂದ ಶೆಟ್ಟಿ(35) ಹಿರಿಯಡ್ಕ ಅಂಜಾರು ಗ್ರಾಮದ ಸುಜಿತ್(27), ಕೆಮ್ಮಣ್ಣು ಗ್ರಾಮ ಪಡುಕುದ್ರುವಿನ ಸುಹಾಸ್ (31), ಕೆಮ್ಮಣ್ಣು ಹೂಡೆಯ ಮನೋಜ್ ವಿ. ಕೊಟ್ಯಾನ್(34) ಬಂಧಿತ ಆರೋಪಿಗಳು. ಈ ಪ್ರಕರಣದ ಪ್ರಮುಖ ಆರೋಪಿಗಳಾದ ಮಂಗಳೂರು ಜೋಕಟ್ಟೆಯ ಮನೋಜ ಕೋಡಿಕೆರೆ(42) ಹಾಗೂ ಬಂಟ್ವಾಳ ತಾಲೂಕಿನ ಪಡು ರೊಟ್ಟಿಗುಡಿಯ ಚೇತನ್ ಕುಲಾಲ್ (38) ಎಂಬವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ: ಜಿಲ್ಲೆಯ ಸಾಸ್ತಾನ ಸಮೀಪದಲ್ಲಿ ಸಿದ್ದಾಪುರ ಗ್ರಾಮದ ಮೋಹನ ದಾಸ್‌ ಶೆಟ್ಟಿ ಎಂಬವರ ಮಗ ತೇಜಸ್‌ನನ್ನು ತಂಡವೊಂದು 2025ರ ನ.19ರಂದು ಮಧ್ಯಾಹ್ನ ಅಪರಹಣ ಮಾಡಿಕೊಂಡು ಹೋಗಿದ್ದು ಕೂಡಲೇ ಮೋಹನ್‌ದಾಸ್‌ ಶೆಟ್ಟಿ ಸಾಸ್ತಾನಕ್ಕೆ ಬಂದು ನೋಡಿದಾಗ ತೇಜಸ್ ಅವರ ಕಾರು ಅಲ್ಲಿಯೇ ಇದ್ದು, ಸ್ಥಳದಲ್ಲಿದ್ದ ಪ್ರಜ್ವಲ್‌ನನ್ನು ವಿಚಾರಿಸಿದರು. ಆಗ ತೇಜಸ್‌ನ ವಾಟ್ಸ್ಅಪ್ ನಂಬರಿನಿಂದ ಮೋಹನ್ ದಾಸ್ ಶೆಟ್ಟಿಯ ವಾಟ್ಸಾಪ್‌ಗೆ ಆಡಿಯೋ ಕಾಲ್ ಹೋಗಿತ್ತು.

ಮನೋಜ ಕೋಡಿಕೆರೆ ಸೂಚನೆಯಂತೆ ಆತನ ಕಡೆಯ 2 ರಿಂದ 3 ಮಂದಿಯ ತಂಡ ನನ್ನನ್ನು ಕಿಡ್ನಾಪ್ ಮಾಡಿಕೊಂಡು ಹೋಗಿರುವ ವಿಚಾರವನ್ನು ತೇಜಸ್‌ ಕಾಲ್‌ನಲ್ಲಿ ತಿಳಿಸಿದ್ದರು. ಇದೇ ವೇಳೆಗೆ ತೇಜಸ್‌ನ ವಾಟ್ಸ್ಅಪ್ ನಿಂದ ಅಪರಿಚಿತ ವ್ಯಕ್ತಿ ಪ್ರಜ್ವಲ್‌ನಿಗೆ ಕರೆ ಮಾಡಿ, ತೇಜಸ್‌ನನ್ನು ಬಿಡ ಬೇಕಾದಲ್ಲಿ 50 ಲಕ್ಷ ರೂ. ಹಣ ನೀಡುವಂತೆ ಬೆದರಿಕೆ ಹಾಕಿದನು. ಇಲ್ಲದಿದ್ದಲ್ಲಿ ತೇಜಸ್‌ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ. ಬಳಿಕ ಅದೇ ವ್ಯಕ್ತಿ ಕರೆ ಮಾಡಿ 3 ಕೋಟಿ ಹಣ ನೀಡಿದರೆ ಮಾತ್ರ ತೇಜಸ್‌ನನ್ನು ಬಿಡುತ್ತೇವೆ ಇಲ್ಲವಾದಲ್ಲಿ ಆತನನ್ನು ಕೊಲೆ ಮಾಡಿ ಬಿಸಾಡುತ್ತೇವೆ ಎಂದು ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಕೋಟ ಪೊಲೀಸರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿಗಳು ಸಂಘಟಿತರಾಗಿ ಅಪರಾಧ ಕೃತ್ಯ ನಡೆಸಿರುವುದು ಕಂಡುಬಂದಿರುವುದರಿಂದ ಅವರ ವಿರುದ್ಧ ಕೋಕಾ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೋಕಾ ಕಾಯಿದೆಯನ್ನು ಆಳವಡಿಸಿದ ನಂತರ ಪ್ರಕರಣದ ತನಿಖೆ ನಡೆಸಿದ ಕುಂದಾಪುರ ಡಿವೈಎಸ್ಪಿ ಎಚ್‌ಡಿ ಕುಲಕರ್ಣಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಲೆಮರೆಸಿಕೊಂಡವರ ಮಾಹಿತಿ ನೀಡಿದರೆ 50ಸಾವಿರ ರೂ. ನಗದು ಬಹುಮಾನ: ಈ ಪ್ರಕರಣದ ಪ್ರಮುಖ ಆರೋಪಿಗಳಾದ ಮನೋಜ ಕೋಡಿಕೆರೆ ಹಾಗೂ ಚೇತನ್ ಪಡೀಲ್ ಯಾನೆ ಚೇತನ್ ಕುಲಾಲ್ ಎಂಬವರು ತಲೆಮರೆಸಿಕೊಂಡಿದ್ದು, ಇವರ ಬಗ್ಗೆ ಮಾಹಿತಿ ನೀಡಿದವರಿಗೆ 50,000ರೂ. ನಗದು ಬಹುಮಾನವನ್ನು ನೀಡಲಾಗುವುದು ಎಂದು ಎಸ್ಪಿ ಹರಿರಾಂ ಶಂಕ‌ರ್ ತಿಳಿಸಿದ್ದಾರೆ. ಮನೋಜ ಕೋಡಿಕೆರೆ ವಿರುದ್ಧ ಮಂಗಳೂರು ನಗರ ವ್ಯಾಪ್ತಿಯಲ್ಲಿ 18 ಪ್ರಕರಣಗಳು ಮತ್ತು ಉಡುಪಿ ಜಿಲ್ಲೆಯಲ್ಲಿ 2 ಪ್ರಕರಣಗಳು ದಾಖಲಾಗಿವೆ ಮತ್ತು ಚೇತನ್ ಪಡೀಲ್ ವಿರುದ್ಧ ಮಂಗಳೂರು ನಗರ ವ್ಯಾಪ್ತಿಯಲ್ಲಿ 11 ಪ್ರಕರಣಗಳು ಮತ್ತು ಉಡುಪಿ ಜಿಲ್ಲೆಯಲ್ಲಿ 2 ಪ್ರಕರಣಗಳು ದಾಖಲಾಗಿವೆ.

ಈ ಆರೋಪಿಗಳ ಬಗ್ಗೆ ಮಾಹಿತಿ ಇದ್ದಲ್ಲಿ ಕುಂದಾಪುರ ಡಿವೈಎಸ್ಪಿ ಎಚ್‌.ಡಿ. ಕುಲಕರ್ಣಿ ಅವರ ಮೊಬೈಲ್ ಸಂಖ್ಯೆ: 9480805422ಕ್ಕೆ ನೀಡಬಹುದು. ಮಾಹಿತಿದಾರರ ವಿವರವನ್ನು ಗೌಪ್ಯವಾಗಿ ಇಡಲಾಗುವುದು ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

Comments are closed.