ಬೆಂಗಳೂರು: ಇಲ್ಲಿನ ವಿಧಾನಸೌಧದಲ್ಲಿ ಉಡುಪಿ ಜಿಲ್ಲೆಯ ಐವರು ಶಾಸಕರುಗಳನ್ನು ಉಡುಪಿ ಜಿಲ್ಲೆಯ ಗುತ್ತಿಗೆದಾರರ ಸಂಘದ ನಿಯೋಗವು ಭೇಟಿ ಮಾಡಿ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಯನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಮನವಿ ಪತ್ರ ಸಲ್ಲಿಸಿದರು.

ಕಾರ್ಕಳ ಶಾಸಕ ಸುನೀಲ್ ಕುಮಾರ್, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಉಡುಪಿ ಶಾಸಕ ಯಶಪಾಲ್ ಆನಂದ್ ಸುವರ್ಣ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹಾಗೂ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರನ್ನು ಭೇಟಿ ಮಾಡಿದ ನಿಯೋಗವು, ಗುತ್ತಿಗೆದಾರರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟ, ನಡೆಯುತ್ತಿರುವ ಕಾಮಗಾರಿಗಳಿಗೆ ಉಂಟಾಗಿರುವ ಅಡಚಣೆಗಳು ಹಾಗೂ ಬಾಕಿ ಬಿಲ್ಗಳ ವಿಳಂಬದಿಂದ ನಿರ್ಮಾಣ ಕ್ಷೇತ್ರದ ಮೇಲೆ ಉಂಟಾಗುತ್ತಿರುವ ಗಂಭೀರ ಪರಿಣಾಮಗಳ ಬಗ್ಗೆ ವಿವರವಾಗಿ ಮನವರಿಕೆ ಮಾಡಿದರು.
ಮನವಿ ಪತ್ರವನ್ನು ಸ್ವೀಕರಿಸಿದ ಶಾಸಕರು ಗುತ್ತಿಗೆದಾರರ ನ್ಯಾಯಸಮ್ಮತ ಬೇಡಿಕೆಗಳಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ಸಂಬಂಧಿತ ಅಧಿಕಾರಿಗಳು ಮತ್ತು ಸರ್ಕಾರದ ಮಟ್ಟದಲ್ಲಿ ವಿಷಯವನ್ನು ಗಂಭೀರವಾಗಿ ಮುಂದಿಟ್ಟು ಬಾಕಿ ಬಿಲ್ ಬಿಡುಗಡೆಗೆ ತ್ವರಿತ ಕ್ರಮ ಕೈಗೊಳ್ಳಲು ಸದನದಲ್ಲಿಯೂ ಧ್ವನಿ ಎತ್ತಿ ಸಂಪೂರ್ಣವಾಗಿ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಜಿ.ಗೋಕುಲ್ ಶೆಟ್ಟಿ, ಸಂಘದ ಉಪಾಧ್ಯಕ್ಷರಾದ ಎ.ಬಿ.ಶೆಟ್ಟಿ, ಪ್ರಮೋದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಶೆಟ್ಟಿ , ಸಲಹೆಗಾರರಾದ ಪವನ್ ಎಸ್.ಡಿ. ಹಾಗೂ ಹಿರಿಯ ಗುತ್ತಿಗೆದಾರರಾದ ಫಿಲಿಪ್ ಡಿ’ಕೋಸ್ಟಾ, ಗಣೇಶ್ ಪುತ್ರನ್, ಸುನಿಲ್ ಶೆಟ್ಟಿ ಹೇರಿಕುದ್ರು, ಗ್ರೇಸನ್ ಪಾಯಸ್, ಸುಮಿತ್ ಹೆಗ್ಡೆ, ಅಜಿತ್ ಶೆಟ್ಟಿ, ದೀಪಕ್ ಶೆಟ್ಟಿ ಹಾಲಾಡಿ, ಗಣೇಶ್ ಶೆಟ್ಟಿ ಬಿದ್ಕಲ್ಕಟ್ಟೆ,ಸಂತೋಷ್ ಶೆಟ್ಟಿ ಗೋಳಿಯಂಗಡಿ ಸೇರಿದಂತೆ ಹಲವು ಗುತ್ತಿಗೆದಾರರು ಉಪಸ್ಥಿತರಿದ್ದರು.
ಕಳೆದ ಕೆಲ ವರ್ಷಗಳಿಂದ ಗುತ್ತಿಗೆದಾರರು ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರದ ನಿಟ್ಟಿನಲ್ಲಿ ಈ ಭೇಟಿ ಮಹತ್ವದ ಹೆಜ್ಜೆಯಾಗಿದ್ದು, ಬಾಕಿ ಬಿಲ್ ಪಾವತಿ ಪ್ರಕ್ರಿಯೆ ಶೀಘ್ರಗತಿಯಲ್ಲಿ ನಡೆಯಲಿದೆ ಎಂಬ ವಿಶ್ವಾಸವನ್ನು ಗುತ್ತಿಗೆದಾರರು ವ್ಯಕ್ತಪಡಿಸಿದ್ದಾರೆ.
Comments are closed.